ಆರ್‌ಸಿಬಿ ಚೊಚ್ಚಲ ಐಪಿಎಲ್ ಕಪ್ ಗೆದ್ದ ಹಿನ್ನೆಲೆ ಹನೂರು ಪಟ್ಟಣದಲ್ಲಿ ಸಂಭ್ರಮಾಚರಣೆ.

 ಹನೂರು : ಆರ್‌ಸಿಬಿ ಚೊಚ್ಚಲ ಐಪಿಎಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ಹನೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವಿವಿಧೆಡೆ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ, ಎಲ್ಲೇಮಾಳ, ಮಣಗಳ್ಳಿ, ಬಂಡಳ್ಳಿ, ಶಾಗ್ಯ, ಅಲಗಾಪುರ ಅಜ್ಜೀಪುರ, ಕಾಂಚಳ್ಳಿ, ಒಡೆಯರ ಪಾಳ್ಯ, ಕಾಮಗೆರೆ, ಲೊಕ್ಕನಹಳ್ಳಿ ಗ್ರಾಮಗಳಲ್ಲಿ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಗೆಲುವಿನ ನಗೆ ಬೀರುತ್ತಿದ್ದಂತೆ ರಸ್ತೆಗಿಳಿದ ಅಭಿಮಾನಿಗಳು ಪಟಾಕಿ ಸಿಡಿಸಿ ಆರ್‌ಸಿಬಿ ಪರ ಘೋಷಣೆ ಕೂಗಿ ಸಂಭ್ರಮಿಸಿದರು.

ಆರ್‌ಸಿಬಿ ತಂಡಕ್ಕೆ ಮಾದಪ್ಪನ ಆಶೀರ್ವಾದ:

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ನಡುವಿನ ಫೈನಲ್ ಹಣಾಹಣಿಯಲ್ಲಿ ಆರ್‌ಸಿಬಿ ತಂಡಕ್ಕೆ ಜಯವಾಗಲಿ ಎಂದು ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳು ಶಿವ ಅಷ್ಟೋತ್ತರ ಪೂಜೆ ಮಾಡಿಸಿದ್ದರು. ಮಾದಪ್ಪ ಆರ್‌ಸಿಬಿ ತಂಡಕ್ಕೆ ಕೃಪಾಕಟಾಕ್ಷ ತೋರುವ ಮೂಲಕ ಚೂಚ್ಚಲ ಐಪಿಎಲ್ ಪ್ರಶಸ್ತಿ ಪಡೆದಿದ್ದಾರೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ:

ಆರ್‌ಸಿಬಿ ಗೆಲುವು ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.

ಶುಭಕೋರಿದ ಮಾಜಿ ಶಾಸಕ ಆರ್.ನರೇಂದ್ರ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 17 ವರ್ಷಗಳಿಂದ ಐಪಿಎಲ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಮೂರು ಬಾರಿ ಫೈನಲ್ ಪ್ರವೇಶಿಸಿದರೂ ಪ್ರಶಸ್ತಿ ಪಡೆಯಲು ಯಶಸ್ವಿಯಾಗಿರಲಿಲ್ಲ. ಆದರೆ ಈ ಬಾರಿ ಪ್ರಾರಂಭದಿಂದಲೂ ಆರ್‌ಸಿಬಿ ತಂಡ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದೆ ಎಂಬ ವಿಶ್ವಾಸವಿತ್ತು. ಅದರಂತೆ ಆರ್‌ಸಿಬಿ ತಂಡದ ಎಲ್ಲ ಆಟಗಾರರು ಸಂಘಟಿತ ಪ್ರದರ್ಶನ ನೀಡುವುದರ ಮೂಲಕ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಶುಭಕೋರಿದರು.