ಪ್ರಾರ್ಥನೆಯ ನಂತರ ಮುಸ್ಲಿಂ ಬಾಂಧವರು ಪರಸ್ಪರ ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡರು.

ಹೊಸಪೇಟೆ: ಹೊಸಪೇಟೆ ನಗರ ಸೇರಿದಂತೆ ವಿಜಯನಗರ ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬವನ್ನು ಶನಿವಾರ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು.

ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಸಾವಿರಾರು ಮುಸ್ಲಿಂ ಭಾಂಧವರು ನಗರದ ಐ.ಎಸ್. ಆರ್. ರಸ್ತೆಯ ಡಾ. ಬಿ. ಆರ್ ಅಂಬೇಡ್ಕರ್ ವೖತ್ತದ ಬಳಿ ಇರುವ ಈದ್ಗಾ ಮೈದಾನದಲ್ಲಿ, ಹರಿಹರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಹಾಗೂ ಬಳ್ಳಾರಿ ರಸ್ತೆಯಲ್ಲಿರುವ ಖಬರ್ ಸ್ಥಾನದಲ್ಲಿ ಸೇರಿದಂತೆ ವಿವಿಧ ಈದ್ಗಾ ಮೈದಾನಗಳಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆಯ ನಂತರ ಮುಸ್ಲಿಂ ಬಾಂಧವರು ಪರಸ್ಪರ ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡರು. ಸಾಮೂಹಿಕ ಪ್ರಾರ್ಥನೆ ಹಿನ್ನಲೆಯಲ್ಲಿ ನಗರದ ಡಾ. ಬಿ. ಆರ್. ಅಂಬೇಡ್ಕರ್ ವೖತ್ತದ ಬಳಿ ಇರುವ ಈದ್ಗಾ ಮೈದಾನದಲ್ಲಿ ಹಾಗೂ ಹರಿಹರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮತ್ತು ಬಳ್ಳಾರಿ ರಸ್ತೆಯ ಖಬರಸ್ಥಾನದಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಭಾಂದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ರಂಜಾನ್ ಹಬ್ಬದಲ್ಲಿ ಮುಂಸ್ಲಿಂ ಭಾಂದವರು ಒಂದು ತಿಂಗಳ ಕಾಲ ಉಪವಾಸವಿದ್ದು ನಿತ್ಯವೂ ದೇವರನ್ನು ಪ್ರಾರ್ಥಿಸಿಕೊಳ್ಳುತ್ತಿದ್ದರು.

ಪ್ರತಿಯೊಬ್ಬರೂ ಹಬ್ಬಕ್ಕೆ ಹೊಸ ಬಟ್ಟೆ ಹಾಕಿಕೊಂಡು ಕುಟುಂಬದ ಸದಸ್ಯರೊಂದಿಗೆ ನಮಾಜಿನಲ್ಲಿ ಶ್ರದ್ದೆ ಮತ್ತು ಭಕ್ತಿಯಿಂದ ಭಾಗವಹಿಸಿದ್ದರು.

ಇಲ್ಲಿನ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಹಾಗೂ ಹೊಸಪೇಟೆ ಅಂಜುಮನ್‌ ಖಿದ್ಮತ ಇಸ್ಲಾಂ ಸಮಿತಿಯ ಅಧ್ಯಕ್ಷ ಎಚ್.ಎನ್.ಎಫ್. ಮೊಮಹದ್‌ ಇಮಾಮ್ ನಿಯಾಜಿ, ಅಂಜುಮನ್ ಕಮಿಟಿ ಉಪಾಧ್ಯಕ್ಷ ಎಂ.ಎಂ. ಫೈರೋಜ್ ಖಾನ್, ಕಾರ್ಯದರ್ಶಿ ಅಬೂಬಕ್ಕರ್ ಅಶ್ರಫಿ, ಖಜಾಂಚಿ ಅನ್ಸರ್ ಭಾಷ, ಜಂಟಿ ಕಾರ್ಯದರ್ಶಿ ಡಾ. ದುರ್ವೆಶ್ ಮೈನುದ್ದೀನ್, ಸದ್ಯಸರಾದ ಸದ್ದಮ್ ಹುಸೇನ್, ಮೊಹಮ್ಮದ್ ಮೋಸಿನ್, ಗುಲಾಮ್ ರಸೂಲ್, ಸಮಾಜದ ಮುಖಂಡರಾದ ಕೆ. ಬಡಾವಲಿ, ಖಾದರ್‌ ರಫೀಯಿ, ಖಲಂದರ್, ಗೌಸ್ ಸೇರಿದಂತೆ ಸಮಾಜದ ಹಿರಿಯ ಮುಖಂಡರು ಹಾಗೂ ಸಾವಿರಾರು ಮುಸ್ಲಿಂ ಭಾಂದವರು ಪ್ರಾರ್ಥನೆಯಲ್ಲಿ ಭಾಗವಹಿಸಿದರು.

ರಂಜಾನ್ ಹಬ್ಬದ ಪ್ರಯುಕ್ತ ನಗರದ ವಿವಿಧ ಮಸೀದಿಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಮುಸ್ಲಿಂ ಬಾಂಧವರು ಬಡವರಿಗೆ ದಾನ ನೀಡಿದರು.

ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದ ಈದ್ಗಾ ಮೈದಾನದ ಸುತ್ತಮುತ್ತಲ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

ಮರಿಯಮ್ಮನಹಳ್ಳಿಯಲ್ಲೂ ಸಂಭ್ರಮ

ಇದೇ ರೀತಿಯಲ್ಲಿ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಸಹ ರಂಜಾನ್ ಹಬ್ಬವನ್ನು ಶನಿವಾರ ಮುಸ್ಲಿಂ ಬಾಂಧವರು ಅತ್ಯಂತ ಸಡಗರ ಸಂಭ್ರಮದೊಂದಿಗೆ ಆಚರಿಸಿದರು.

ಮುಸ್ಲಿಂ ಬಾಂಧವರು ಎಲ್ಲರೂ ಸೇರಿಕೊಂಡು ಪಟ್ಟಣದ ಹೊರ ವಲಯದಲ್ಲಿರುವ ಅಯ್ಯನಹಳ್ಳಿ ರಸ್ತೆಯಲ್ಲಿ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ನಂತರ ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯಮಾಡಿಕೊಂಡರು.

ಇದೇ ರೀತಿಯಲ್ಲಿ ರಂಜಾನ್ ಹಬ್ಬದ ಹಿನ್ನಲೆಯಲ್ಲಿ ನಗರದ ಗಣ್ಯರು ಸಹ ಮುಸ್ಲಿಂ ಮುಖಂಡರೊಂದಿಗೆ ಶುಭಾಶಯ ಹಂಚಿಕೊಂಡರು.

ತಾಲೂಕಿನ ಕಮಲಾಪುರ, ಕಾರಿಗನೂರು, ನಾಗೇನಹಳ್ಳಿ, ಪಾಪಿನಾಯಕನಹಳ್ಳಿ, ಗಾದಿಗನೂರು ಸೇರಿದಂತೆ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಅತ್ಯಂತ ಸಡಗರ ಸಭ್ರಮದಿಂದ ಆಚರಿಸಿದರು.