ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ, ಲಿವಿಂಗ್‌ಟು ಗೆದರ್ ನಂತಹ ಜೀವನ ಶೈಲಿಯಿಂದಾಗಿ ಎಚ್‌ಐವಿ ಹೆಚ್ಚು ಹರಡುತ್ತಿದೆ ಎಂದು ಖ್ಯಾತ ಹೃದಯರೋಗ ತಜ್ಞ ಡಾ.ಎಚ್.ಜಿ.ದಡ್ಡಿ ಅಭಿಪ್ರಾಯಪಟ್ಟರು.ಸರ್ಕಾರಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ರೆಡ್‌ಕ್ರಾಸ್, ಐಎಂಎ, ರೋಟರಿ, ಲಯನ್ಸ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ನಮ್ಮ ಪೂರ್ವಜರು ತಿಳಿಸಿಕೊಟ್ಟ ಬ್ರಹ್ಮಚರ್ಯ ಪಾಲನೆ ಮಾಡುವ ಮೂಲಕ ಎಚ್‌ಐವಿ ಹರಡದಂತೆ ತಡೆಯಬೇಕಾದ ಅನಿವಾರ್ಯತೆ ಇದೆ ಎಂದರು.ಆಧುನಿಕತೆಗೆ ಮಾರು ಹೋಗಿ ನಮ್ಮ ಜೀವನ ಶೈಲಿಯನ್ನು ಸ್ವೇಚ್ಛಾಚಾರವಾಗಿ ಬದಲಾಯಿಸಿಕೊಂಡ ಪರಿಣಾಮ ಅನೇಕ ತೊಂದರೆಗಳನ್ನು ಎದುರಿಸಬೇಕಾಗಿದೆ. ಏಡ್ಸ್ ರೋಗಕ್ಕೆ ಯಾವುದೇ ಔಷಧಿ ಕಂಡು ಹಿಡಿದಿಲ್ಲ. ವ್ಯಾಕ್ಸಿನ್ ಕಂಡು ಹಿಡಿಯಲಾಗಿದೆ. ಆದರೆ, ಪ್ರಾಯೋಗಿಕ ಹಂತದಲ್ಲಿದೆ. ಶೇ.90 ರಷ್ಟು ಅಸುರಕ್ಷಿತ ಲೈಂಗಿಕತೆಯಿಂದ ರೋಗ ಹರಡುತ್ತದೆ. ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದೇ ಸೂಕ್ತ, ಹಿರಿಯರು ತೋರಿಸಿಕೊಟ್ಟ ಮಾರ್ಗದಲ್ಲಿ ನಡೆಬೇಕು, ಒಬ್ಬನೇ ಸಂಗಾತಿ ಇರಬೇಕು ಎಂದು ಸಲಹೆ ನೀಡಿದರು.ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ಕವಿತಾ ಉಂಡೊಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಏಡ್ಸ್ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕು. ಕಾಲೇಜು ವಿದ್ಯಾರ್ಥಿಗಳು ಈ ಕುರಿತು ತಿಳಿದುಕೊಂಡು ತಮ್ಮ ಹತ್ತರದವರಿಗೆ ಮಾಹಿತಿ ವಿನಿಮಯ ಮಾಡುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು. ತಾಲೂಕು ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ವಿ.ಸಿ.ಮುದಿಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಹಕ್ಕು ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಎಚ್‌ಐವಿಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆವಿದೆ. ಜಮಖಂಡಿ ಮತ್ತು ತುಮಕೂರಿನ ಎಆರ್‌ಟಿ ಕೇಂದ್ರಗಳು ರಾಜ್ಯದಲ್ಲಿ ಹೆಸರು ಮಾಡಿವೆ. ರೋಗವನ್ನು ಸಂಪೂರ್ಣ ಗುಣಪಡಿಸುವ ಔಷಧಿ ಇಲ್ಲ. ಆದ್ದರಿಂದ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದೇ ಸೂಕ್ತ. ಜನರಲ್ಲಿ ಜಾಗೃತಿ ಮೂಡಿಸುವುದು, ಸಂಶೋಧನೆಗೆ ಪ್ರೋತ್ಸಾಹಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ.ಸುನಂದಾ ಶಿರೂರ ಮಾತನಾಡಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಅರ್ಷದ್ ಅನ್ಸಾರಿ, ತಾಲೂಕು ಆರೋಗ್ಯ ಅಧಿಕಾರಿ, ಗೈಬುಸಾಬ್ ಗಲಗಲಿ, ಡಾ.ವಿ.ಎಸ್.ಬಿರಾದಾರ, ರೋಟರಿ ಸಂಸ್ಥೆಯ ಕಿರಣಕುಮಾರ ದೇಸಾಯಿ, ಎಂ.ಟಿ.ದಾನಪ್ಪಗೊಳ, ಶ್ರೀಮತಿ ಸಡುವಿನಮನಿ, ದ್ರಾಕ್ಷಾಯಿಣಿ, ಗುರುಸ್ವಾಮಿಮಠ, ಕಾಶೀನಾಥ, ಬಿಎಲ್‌ಡಿ ಕಾಲೇಜಿನ ಶಂಕರ, ಪತ್ರಕರ್ತ ಡಾ.ಟಿ.ಪಿ,ಗಿರಡ್ಡಿ, ಪೀರಸಾಬ್ ಕೊಡತಿ , ಜೆ.ಡಿ.ಧನ್ನೂರ ಮುಂತಾದವರು ಇದ್ದರು. ಮುತ್ತು ಹೊಸವಾಡ ವಂದಿಸಿದರು.ರೋಗಕ್ಕೆ ತುತ್ತಾದವರು ನಿಯಮಿತ ಔಷಧ ಸೇವನೆ ಹಾಗೂ ವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೇ ಎಲ್ಲರಂತೆ ಬದುಕಬಹುದಾಗಿದೆ. ರೋಗಿಗಳಿಗೆ ಮನೋಬಲ ಹೆಚ್ಚಿಸಬೇಕು, ಅವರನ್ನು ಕಳಂಕಿತರರೆಂದು ತಾರತಮ್ಯ ಮಾಡಬಾರದು.
-ಡಾ.ಎಚ್.ಜಿ.ದಡ್ಡಿ, ಖ್ಯಾತ ಹೃದಯರೋಗ ತಜ್ಞರು.