ಸಾರ್ವಜನಿಕರು ಸ್ವಯಂ ಮನೆಗಣತಿ ಕಾರ್ಯ ಮಾಡುವ ಪ್ರಕ್ರಿಯೆ ಜಿಲ್ಲೆಯಲ್ಲಿ ಮುಂದುವರಿಯುತ್ತಿದ್ದು, ದಕ್ಷಿಣ ಕನ್ನಡದಲ್ಲಿ ಇದುವರೆಗೆ 57,466 ಮನೆಗಳ ಸ್ವಯಂ ಗಣತಿ ಕಾರ್ಯ ಮುಗಿದಿದೆ.

ಮಂಗಳೂರು:ಸಾರ್ವಜನಿಕರು ಸ್ವಯಂ ಮನೆಗಣತಿ ಕಾರ್ಯ ಮಾಡುವ ಪ್ರಕ್ರಿಯೆ ಜಿಲ್ಲೆಯಲ್ಲಿ ಮುಂದುವರಿಯುತ್ತಿದ್ದು, ದಕ್ಷಿಣ ಕನ್ನಡದಲ್ಲಿ ಇದುವರೆಗೆ 57,466 ಮನೆಗಳ ಸ್ವಯಂ ಗಣತಿ ಕಾರ್ಯ ಮುಗಿದಿದೆ.

ಭಾರತದ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತರ ಕಾರ್ಯಾಲಯದ ಪರವಾಗಿ ಜನಗಣತಿ ಕಾಯ್ದೆ-1948ರ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತದ ಮೊದಲ ಡಿಜಿಟಲ್ ಜನಗಣತಿ ಕಾರ್ಯವನ್ನು 2 ಹಂತಗಳಲ್ಲಿ ನಡೆಸಿ ಗಣತಿ ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಪೈಕಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಯಂ ಮನೆ ಗಣತಿ ಕಾರ್ಯ ಮಾಡಲು ಅವಕಾಶ ನೀಡಲಾಗಿದೆ.

ಕಾಯ್ದೆಯ ಪ್ರಕಾರ ಜನರ ಮಾಹಿತಿ, ಹೆಸರು ಮತ್ತು ಗುರುತುಗಳನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಯಾವುದೇ ತೆರಿಗೆ ಅಥವಾ ಪರಿಶೋಧನಾ ಉದ್ದೇಶಕ್ಕೆ ದತ್ತಾಂಶವನ್ನು ಬಳಸಿಕೊಳ್ಳುವುದಿಲ್ಲ.

ಈ ನಿಟ್ಟಿನಲ್ಲಿ ಏಪ್ರಿಲ್ 15ರವರೆಗೆ ನಿರ್ದೇಶನಾಲಯದಿಂದ ನೀಡಿರುವ ಸರಳ ಹಂತಗಳನ್ನು ಅನುಸರಿಸುವ ಮೂಲಕ 15-20 ನಿಮಿಷಗಳಲ್ಲಿ ತಮ್ಮ ಮನೆಯ ಸ್ವಯಂ ಗಣತಿ ಮಾಡಿಕೊಂಡು ಏಕೀಕೃತ ಸ್ವಯಂ ಗಣತಿ ಗುರುತಿನ ಸಂಖ್ಯೆಯನ್ನು ಪಡೆಯಬಹುದು. ಪರಿಶೀಲನೆಗೆ ಬರುವ ಗಣತಿದಾರರಗೆ ಐಡಿ ಒದಗಿಸಿ ಮನೆಗಣತಿ ಕಾರ್ಯವನ್ನು ಪೂರ್ಣಗೊಳಿಸಿಕೊಳ್ಳಬಹುದು.

ಸ್ವಯಂ ಮನೆಗಣತಿಯು ಅತ್ಯಂತ ಸರಳ ಪ್ರಕ್ರಿಯೆ. ಆನ್‍ಲೈನ್‍ನಲ್ಲಿ se.census.gov.in ವೆಬ್‍ಸೈಟ್‍ಗೆ ಭೇಟಿ ನೀಡಿ, ಮೊಬೈಲ್ ಸಂಖ್ಯೆಗೆ ಬರುವ ಒ.ಟಿ.ಪಿ ಮೂಲಕ ಲಾಗಿನ್ ಆಗಿ, ನಿಮ್ಮ ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ವಿವರಗಳನ್ನು ಆಯ್ಕೆ ಮಾಡಿ, ಡಿಜಿಟಲ್ ಮ್ಯಾಪ್‍ನಲ್ಲಿ ನಿಮ್ಮ ಮನೆಯ ಸ್ಥಳವನ್ನು ಗುರುತಿಸಿ, ನಿಮ್ಮ ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಬೇಕು. ಸಲ್ಲಿಸಿದ ನಂತರ ಎಸ್ಇ ಐಡಿ ದೊರಕಲಿದೆ. ಎಸ್ಇ ಐಡಿಯನ್ನು ಗಣತಿದಾರರು ಮನೆಗೆ ಭೇಟಿ ನೀಡಿದಾಗ ಒದಗಿಸಬೇಕು. ಗಣತಿದಾರರು ಎಸ್.ಇ ಐಡಿ ಮೂಲಕ ವಿವರಗಳನ್ನು ದೃಢೀಕರಿಸುತ್ತಾರೆ.ಜಿಲ್ಲೆಯ ಎಲ್ಲ ನಾಗರಿಕರು ಆನ್‍ಲೈನ್‍ನಲ್ಲಿ ತಮ್ಮ ಮನೆಯ ಗಣತಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.