ತಾಲೂಕಿನ ಬಾಳೇಸರದ ಶ್ರೀ ಮಲ್ಲಿಕಾರ್ಜುನ ವ್ಯವಸಾಯ ಸೇವಾ ಸಹಕಾರ ಸಂಘವು ಯಶಸ್ವಿಯಾಗಿ ನೂರು ವಸಂತ ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

28ರಂದು ಕಾರ್ಯಕ್ರಮ । ಸಂಘದ ನೂತನ ಕಟ್ಟಡಗಳ ಲೋಕಾರ್ಪಣೆ: ಚಂದ್ರಶೇಖರ ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಸಿದ್ದಾಪುರತಾಲೂಕಿನ ಬಾಳೇಸರದ ಶ್ರೀ ಮಲ್ಲಿಕಾರ್ಜುನ ವ್ಯವಸಾಯ ಸೇವಾ ಸಹಕಾರ ಸಂಘವು ಯಶಸ್ವಿಯಾಗಿ ನೂರು ವಸಂತ ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈ ಹಿನ್ನಲೆ ಶತಮಾನೋತ್ಸವ ಸಮಾರಂಭ ಮತ್ತು ಸಂಘದ ನೂತನ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಫೆ. 28ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ ನಾರಾಯಣ ಹೆಗಡೆ ಹೇಳಿದರು. ತಾಲೂಕಿನ ಬಾಳೇಸರ ಸೇವಾ ಸಹಕಾರಿ ಸಂಘದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 28ರ ಬೆಳಗ್ಗೆ 10 ಗಂಟೆಗೆ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉಪಸ್ಥಿತರಿರುವರು. ಸಂಘದ ಅಧ್ಯಕ್ಷ ಚಂದ್ರಶೇಖರ ನಾರಾಯಣ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಬೆಳ್ಳಿ ನಾಣ್ಯ ಬಿಡುಗಡೆಗೊಳಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಶಿರಸಿ ಡೆವೆಲಪ್ ಮೆಂಟ್ ಸೊಸೈಟಿ ಅಧ್ಯಕ್ಷ ಭಾಸ್ಕರ ಹೆಗಡೆ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ, ಕಾರವಾರದ ಉಪನಿಬಂಧಕ ಅಜ್ಮತ ಉಲ್ಲಾಖಾನ್ ಇತರರು ಭಾಗಿಯಾಗುವರು. ಮಧ್ಯಾಹ್ನ 2.15ರಿಂದ ಸಹಕಾರಿ ಸಂಘಗಳಲ್ಲಿ ಸದಸ್ಯರ ಅರಿವು ಮತ್ತು ಸಹಕಾರ ಕಾನೂನು ಎಂಬ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಜಿ.ಕೆ.ರಾಮಪ್ಪ ಉಪನ್ಯಾಸ ನೀಡುವರು.ಮಧ್ಯಾಹ್ನ 3.30ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಿ.ಎನ್. ಭಟ್ಟ ಅಳ್ಳಂಕಿ ಸಹಕಾರ ಶತಸೌರಭ ಎಂಬ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಸಂಘದ ಅಧ್ಯಕ್ಷ ಚಂದ್ರಶೇಖರ ಹೆಗಡೆ ಅಧ್ಯಕ್ಷತೆ ವಹಿಸುವರು. 1925ಕ್ಕಿಂತ ಮೊದಲೇ ಸಹಕಾರಿ ಸಂಘ ಸ್ಥಾಪನೆಗೊಂಡಿದ್ದರೂ 1926ರಲ್ಲಿ ನೊಂದಾವಣೆಗೊಂಡ ಸಂಘವು ತನ್ನ ಸೇವಾಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡುಬಂದಿದೆ. ಜಿಲ್ಲೆಯಲ್ಲೇ ಪ್ರಥಮವಾಗಿ ರೈತರ ಮಾಲುವಿಕ್ರಿಯಲ್ಲಿ ಕಡ್ಡಾಯ ಠೇವನ್ನು ಆಕರಿಸಿ ರೈತರಿಗೆ ಹೆಚ್ಚಿನ ಅನುಕೂಲ ಒದಗಿಸಿದ ಕಾರ್ಯ ಮಾಡಿದೆ. ಕೆಡಿಸಿಸಿ ಬ್ಯಾಂಕ್ ನೀಡುವ ಅತ್ಯುತ್ತಮ ಸಂಘ ಪ್ರಶಸ್ತಿಯನ್ನು ನಿರಂತರ 30 ವರ್ಷ ಪಡೆದುಕೊಂಡಿದ್ದಲ್ಲದೇ ರಾಜ್ಯ ಅಪೆಕ್ಸ್‌ ಬ್ಯಾಂಕ್ ಪ್ರಶಸ್ತಿ, ಟಿ.ಎಸ್.ಎಸ್. ಪ್ರಶಸ್ತಿ, ರಾಜ್ಯ ಸಹಕಾರಿ ಮಹಾಮಂಡಳಿ ಪ್ರಶಸ್ತಿಗಳ ಜೊತೆಗೆ ಸುಭಾಷ್ ಯಾದವ್ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀಧರ ನಾರಾಯಣ ಹೆಗಡೆ, ಮುಖ್ಯ ಕಾರ್ಯನಿರ್ವಾಹಕ ಗಣಪತಿ ಗಜಾನನ ಹೆಗಡೆ ಮತ್ತು ಆಡಳಿತ ಮಂಡಳಿಯ ಸದಸ್ಯರು ಇದ್ದರು.

ಶತಮಾನೋತ್ಸವದ ಪ್ರಯುಕ್ತ ನಾಳೆ ಧಾರ್ಮಿಕ ಕಾರ್ಯಕ್ರಮ

ಬಾಳೇಸರದ ಶ್ರೀ ಮಲ್ಲಿಕಾರ್ಜುನ ವ್ಯವಸಾಯ ಸೇವಾ ಸಹಕಾರ ಸಂಘ ಶತಮಾನೋತ್ಸವದ ಹಿನ್ನೆಲೆ ಫೆ.25ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಪಂಚಗವ್ಯಹವನ, ವಾಸ್ತುಹೋಮ,ಶ್ರೀ ಸೂಕ್ತ ಹವನ, ಗಣಹವನ, ಅಘೋರಾಸ್ತ್ರ ಜಪ, ಸತ್ಯನಾರಾಯಣ ವೃತ ಜರುಗಲಿದೆ. ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಆಗಮಿಸಲಿದ್ದು ಶ್ರೀಗಳ ಪಾದಪೂಜೆ, ಆಶೀರ್ವಚನ ಕಾರ್ಯಕ್ರಮ ಜರುಗಲಿದೆ.