ನ್ಯೂ ಹೈಸ್ಕೂಲ್ ಬಾಡದ ಶತಮಾನೋತ್ಸವ ಸಮಾರಂಭ ಡಿ.13 ಮತ್ತು 14 ರಂದು ಅದ್ಧೂರಿಯಾಗಿ ನಡೆಯಲಿದೆ.

ಪರ್ತಗಾಳಿ ಜೀವೋತ್ತಮ ಮಠದ ಶ್ರೀ ವಿದ್ಯಾಧೀಶ ತೀರ್ಥರಿಂದ ಚಾಲನೆ

ಕನ್ನಡಪ್ರಭ ವಾರ್ತೆ ಕಾರವಾರ

ನಗರದ ಪ್ರತಿಷ್ಠಿತ ಪ್ರಿಮಿಯರ್ ಎಜ್ಯುಕೇಶನ್ ಸೊಸೈಟಿಯ ನ್ಯೂ ಹೈಸ್ಕೂಲ್ ಬಾಡದ ಶತಮಾನೋತ್ಸವ ಸಮಾರಂಭ ಡಿ.13 ಮತ್ತು 14 ರಂದು ಅದ್ಧೂರಿಯಾಗಿ ನಡೆಯಲಿದೆ ಎಂದು ಕಾರ್ಯದರ್ಶಿ ನಾಗರಾಜ ಜೋಶಿ ಮಾಹಿತಿ ನೀಡಿದರು. ಪತ್ರಿಕಾಭವನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಬಳಿಕ ಅವರು ಕಾರ್ಯಕ್ರಮದ ಕುರಿತು ತಿಳಿಸಿದರು.

ಡಿ.13ರ ಸಂಜೆ 5 ಗಂಟೆಗೆ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀಮದ್ ವಿದ್ಯಾಧೀಶ ತೀರ್ಥ ವಡೇರ ಸ್ವಾಮೀಜಿ ಶತಮಾನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸೊಸೈಟಿಯ ಅಧ್ಯಕ್ಷ ಶಿವಾನಂದ ಜಿ. ಕಾಮತ, ಕಾರ್ಯದರ್ಶಿ ನಾಗರಾಜ ಜೋಶಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಶತಮಾನೋತ್ಸವದ ಮಹಾದ್ವಾರ ಉದ್ಘಾಟನೆ ಹಾಗೂ ಶತಮಾನದ ಪಯಣ ಸ್ಮರಣ ಸಂಚಿಕೆ ಲೋಕಾರ್ಪಣೆ ಜರುಗಲಿದೆ. ನಂತರ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಡಿ.14ರ ಸಂಜೆ 5 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಶಾಸಕರಾದ ಆರ್.ವಿ. ದೇಶಪಾಂಡೆ, ಸತೀಶ್ ಕೆ.ಸೈಲ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಸೇರಿ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ. ಇದಕ್ಕೂ ಮುನ್ನ ಹಳೆಯ ವಿದ್ಯಾರ್ಥಿಗಳ ಸಮ್ಮೇಳನ ನಡೆಯಲಿದ್ದು, ಶಾಲಾ ಆವರಣದಲ್ಲಿ ನೆನಪುಗಳನ್ನು ಪುನರುಜ್ಜೀವನಗೊಳಿಸುವ ವಿಶೇಷ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ.

ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಕೆ., ಜಿಪಂ ಸಿಇಒ ಡಾ. ದಿಲೀಶ್ ಶಶಿ, ಎಸ್ಪಿ ದೀಪನ್ ಎಂ.ಎನ್., ಡಿಡಿಪಿಐ ಲತಾ ನಾಯಕ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷ ಶಿವಾನಂದ ಕಾಮತ, ಉಪಾಧ್ಯಕ್ಷ ಕೃಷ್ಣಾನಂದ ನೇವರೇಕರ, ಖಜಾಂಚಿ ಮಾಧವ ನೇವರೇಕರ, ಆಡಳಿತ ಮಂಡಳಿ ಸದಸ್ಯ ಶ್ರೀರಂಗ, ರಾಘವೇಂದ್ರ ಪ್ರಭು, ಅಶೋಕ ಜೋಶಿ, ಶಾಲಾ ಮುಖ್ಯಾಧ್ಯಾಪಕ ರಾಜೇಶ್ ಶೇಣ್ವಿ ಇದ್ದರು.