ಬಳ್ಳಾರಿ ನಗರದ ತೇರುಬೀದಿಯಲ್ಲಿರುವ ಶ್ರೀ ಪಾರ್ಶ್ವನಾಥ ಜೈನ ಶ್ವೇತಾಂಬರ ಮಂದಿರ ನಿರ್ಮಾಣಗೊಂಡು ನೂರು ವರ್ಷಗಳಾಗಿದ್ದು, ಜೂ. 2ರಿಂದ 6ರ ವರೆಗೆ ದೇವಸ್ಥಾನದ ಶತಮಾನೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಐದು ದಿನ ವಿವಿಧ ಕಾರ್ಯಕ್ರಮ ನಡೆಯಲಿದೆ. 6 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಬಳ್ಳಾರಿ: ನಗರದ ತೇರುಬೀದಿಯಲ್ಲಿರುವ ಶ್ರೀ ಪಾರ್ಶ್ವನಾಥ ಜೈನ ಶ್ವೇತಾಂಬರ ಮಂದಿರ ನಿರ್ಮಾಣಗೊಂಡು ನೂರು ವರ್ಷಗಳಾಗಿದ್ದು, ಜೂ. 2ರಿಂದ 6ರ ವರೆಗೆ ದೇವಸ್ಥಾನದ ಶತಮಾನೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮಂದಿರದ ಕಾರ್ಯದರ್ಶಿ ರೋಷನ್ ಜೈನ ಹಾಗೂ ಅಧ್ಯಕ್ಷ ಉತ್ಸವಲಾಲ್ ಬಾಗ್ರೇಚ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಶತಮಾನೋತ್ಸವ ಸಂಭ್ರಮದ ಐದು ದಿನಗಳ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು.

ಆಚಾರ್ಯ ಶ್ರೀ ವಿಮಲ ಸಾಗರ ಸುರೀಶ್ವರಜೀ ಅವರ ಸಾನ್ನಿಧ್ಯ ಹಾಗೂ ಶಿಷ್ಯಂದಿರ ನೇತೃತ್ವದಲ್ಲಿ ಐದು ದಿನಗಳ ಕಾಲ ಪಂಚಾಹ್ನಿಕ ಮಹೋತ್ಸವ ಜರುಗಲಿದೆ. ಐದು ವಿಶೇಷ ಪೂಜಾ ಕೈಂಕರ್ಯಕ್ಕೆ ಪಂಚಾಹ್ನಿಕ ಎಂದು ಕರೆಯಲಾಗುವುದು. ಪ್ರತಿದಿನ ವಿವಿಧ ಪೂಜಾ ಅನುಷ್ಠಾನಗಳು ಬೆಳಗ್ಗೆ 9ರಿಂದ ಶುರುಗೊಳ್ಳುತ್ತವೆ. ಪ್ರಸಾದ ಮತ್ತು ಭೋಜನಕೂಟವನ್ನು ಮಧ್ಯಾಹ್ನ 12 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ಶ್ರೀ ಕೊಟ್ಟೂರುಸ್ವಾಮಿ ಮಠದಲ್ಲಿ ಏರ್ಪಡಿಸಲಾಗಿದೆ. ಪ್ರತಿದಿನ ಸಂಜೆ 7.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಜೂನ್ 5ರಂದು ಭವ್ಯ ಶೋಭಾಯಾತ್ರೆ ನಡೆಯಲಿದೆ. ಬೆಳಗ್ಗೆ 8.30ಕ್ಕೆ ದೇವಸ್ಥಾನದಿಂದ ಆರಂಭಗೊಳ್ಳುವ ಶೋಭಾಯಾತ್ರೆ ಮೋತಿ ವೃತ್ತ, ಕಾಳಮ್ಮ ಬೀದಿ, ಬೆಂಗಳೂರು ರಸ್ತೆ ಮೂಲಕ ಜೈನ ಮಂದಿರ ತಲುಪಲಿದೆ. ಶತಮಾನೋತ್ಸವ ಸಮಾರಂಭಕ್ಕೆ ಸುಮಾರು 6 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಐದು ದಿನಗಳ ಶತಮಾನೋತ್ಸವ ಕಾರ್ಯಕ್ರಮಕ್ಕೆ ನಗರ ಹಾಗೂ ಜಿಲ್ಲೆಯ ಜನರು ಭಾಗವಹಿಸುವ ಅವಕಾಶವಿದೆ. ಜೈನ ಮಂದಿರ ಬರೀ ಜೈನ ಸಮುದಾಯಕ್ಕೆ ಅಷ್ಟೇ ಸೀಮಿತಗೊಂಡಿಲ್ಲ. ಯಾರಾದರೂ ದೇವಸ್ಥಾನಕ್ಕೆ ಬಂದು ದರ್ಶನ ಪಡೆಯಲು ಅವಕಾಶವಿರುತ್ತದೆ. ಶತಮಾನೋತ್ಸವ ಸಮಾರಂಭ ಬಳಿಕವೂ ದೇವರ ದರ್ಶನಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಸಾರ್ವಜನಿಕರು ದೇವಸ್ಥಾನಕ್ಕೆ ಬಂದು ದರ್ಶನ ಪಡೆದುಕೊಳ್ಳಲು ಮುಕ್ತ ಅವಕಾಶ ಇರುತ್ತದೆ ಎಂದು ತಿಳಿಸಿದರು.

ಮೂರು ಗೋಪುರದ ಪ್ರಥಮ ಮಂದಿರ: ಬಳ್ಳಾರಿಯ ತೇರು ಬೀದಿಯಲ್ಲಿರುವ ಶ್ರೀ ಪಾರ್ಶ್ವನಾಥ ಜೈನ ಶ್ವೇತಾಂಬರ ಮಂದಿರವು ದಕ್ಷಿಣ ಭಾರತದ ಮೂರು ಗೋಪುರಗಳಿಂದ (ತ್ರಿಶಿಖರ) ನಿರ್ಮಿತ ಪ್ರಥಮ ಮಂದಿರವಾಗಿದೆ. ಸುಮಾರು 150 ವರ್ಷಗಳ ಹಿಂದೆ ರಾಜಸ್ತಾನದ ಅನೇಕ ಗ್ರಾಮಗಳಿಂದ ವ್ಯಾಪಾರಕ್ಕಾಗಿ ಬಳ್ಳಾರಿ ಬಂದ ಅನೇಕ ಕುಟುಂಬಗಳು ಇಲ್ಲಿಯೇ ನೆಲೆಯೂರಿದವು. ಜೈನಧರ್ಮ ಆಚರಣೆಗೆ ಮಂದಿರ ನಿರ್ಮಿಸಬೇಕು ಎಂಬ ಉದ್ದೇಶದಿಂದ 1925ರ ಜೂನ್ 3 ರಂದು ಮಂದಿರ ನಿರ್ಮಿಸುತ್ತಾರೆ. ನಂತರದಲ್ಲಿ ನಗರದಲ್ಲಿ ವಿವಿಧೆಡೆ ಜೈನ ಮಂದಿರಗಳನ್ನು ಸ್ಥಾಪಿಸಲಾಗಿದೆ. ಬಳ್ಳಾರಿ ನಗರದಲ್ಲಿಯೇ 7 ಜೈನ ಮಂದಿರಗಳು ಇವೆಯಾದರೂ ತೇರುಬೀದಿಯಲ್ಲಿರುವ ಮಂದಿರವೇ ಮೂಲ ಮಂದಿರವಾಗಿದೆ. ಬಳ್ಳಾರಿ ನಗರದಲ್ಲಿ 650ಕ್ಕೂ ಹೆಚ್ಚು ಜೈನ ಕುಟುಂಬಗಳು ವಾಸಿಸುತ್ತಿವೆ ಎಂದು ತಿಳಿಸಿದರು.

ತೇರುಬೀದಿಯ ಶ್ರೀ ಪಾರ್ಶ್ವನಾಥ ಜೈನ ಶ್ವೇತಾಂಬರ ಜೈನ ಮಂದಿರ ಪಕ್ಕದಲ್ಲಿಯೇ ಶ್ರೀ ಪಾರ್ಶ್ವ ಭವನ ನಿರ್ಮಿಸಲಾಗಿದೆ. ಇದರಲ್ಲಿ ಪ್ರತಿವರ್ಷ ಚಾತುರ್ಮಾಸ ವ್ರತ ಆಚರಣೆ ನಡೆಯುತ್ತದೆ ಎಂದು ವಿವರಿಸಿದರು.

ಜೈನ ಸಮುದಾಯದ ಪ್ರಮುಖರಾದ ವಿನೋದ ಬಗ್ರೇಚಾ, ಅನಿಲ್ ಕೊಮಾನಿ, ಗೌತಮ್, ಪ್ರಕಾಶ ಜೈನ, ಪ್ರಕಾಶ ಮೆಹ್ತಾ, ಕಾಂತಿಲಾಲ್ ಜೈನ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.