ಸಾರಾಂಶ
ಪಥಸಂಚಲನ ಸಾಗಿದ ಕೆಲವೆಡೆ ಮಹಿಳೆಯರು ರಸ್ತೆಗೆ ನೀರು ಹಾಕಿ ತಮ್ಮ ಮನೆ ಹಾಗೂ ಅಂಗಡಿ ಮುಂಭಾಗದಲ್ಲಿ ರಂಗೋಲಿ ಬಿಡಿಸಿ ದೇಶಭಕ್ತಿ ಮೆರೆದರು. ಟಿ.ಮರಿಯಪ್ಪ ವೃತ್ತ ಮತ್ತು ಮಂಡ್ಯ ಸರ್ಕಲ್‌ನಲ್ಲಿ ಜೆಸಿಬಿ ಯಂತ್ರದ ಮೂಲಕ ಪಥಸಂಚಲನಕ್ಕೆ ಪುಷ್ಪವೃಷ್ಟಿ ಮಾಡಿ ಗಣವೇಷಧಾರಿಗಳನ್ನು ಹುರಿದುಂಭಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಗಮಂಗಲ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯದಶಮಿ ಪ್ರಯುಕ್ತ ಪಟ್ಟಣದಲ್ಲಿ ಆರ್‌ಎಸ್‌ಎಸ್ ಸಂಘಟನೆ ವತಿಯಿಂದ ಶತಾಬ್ಧಿ ಪಥಸಂಚಲನವು ಬಹಳ ಸಂಭ್ರಮ ಸಡಗರದಿಂದ ನಡೆಯಿತು.ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ಪಥಸಂಚಲನವು ಪಟ್ಟಣದಾದ್ಯಂತ ವಿವಿಧ ರಸ್ತೆಗಳಲ್ಲಿ ಸಂಚರಿಸಿತು.
ಆರ್‌ಎಸ್‌ಎಸ್‌ನ ಕೇಶವ ಬಲಿರಾಂ ಹೆಡ್ಗೆವಾರ್, ಗುರೂಜಿ ಹಾಗೂ ಮಾಧವ ಸದಾಶಿವ ಗೋಳ್ವಾಲ್ಕರ್ ಅವರ ಭಾವಚಿತ್ರಗಳನ್ನು ವಿವಿಧ ಹೂವುಗಳಿಂದ ಸಿಂಗರಿಸಿದ ತೆರೆದ ವಾಹದಲ್ಲಿರಿಸಿ, ಗಣವೇಷ ಧರಿಸಿದ್ದ 300ಕ್ಕೂ ಹೆಚ್ಚು ಸ್ವಯಂಸೇವಕರು ಭುಜದ ಮೇಲೆ ಬೆತ್ತ ಹೊತ್ತು ಭಗವಾಧ್ವಜದೊಂದಿಗೆ ಪಥಸಂಚಲನ ನಡೆಸುವ ಮೂಲಕ ದೇಶಾಭಿಮಾನ ಮೆರೆದರು. ಚಿಕ್ಕ ಮಕ್ಕಳೂ ಸಹ ಗಣವೇಷಧರಿಸಿ ಪಥಸಂಚನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಪಥಸಂಚಲನ ಸಾಗಿದ ಕೆಲವೆಡೆ ಮಹಿಳೆಯರು ರಸ್ತೆಗೆ ನೀರು ಹಾಕಿ ತಮ್ಮ ಮನೆ ಹಾಗೂ ಅಂಗಡಿ ಮುಂಭಾಗದಲ್ಲಿ ರಂಗೋಲಿ ಬಿಡಿಸಿ ದೇಶಭಕ್ತಿ ಮೆರೆದರು. ಟಿ.ಮರಿಯಪ್ಪ ವೃತ್ತ ಮತ್ತು ಮಂಡ್ಯ ಸರ್ಕಲ್‌ನಲ್ಲಿ ಜೆಸಿಬಿ ಯಂತ್ರದ ಮೂಲಕ ಪಥಸಂಚಲನಕ್ಕೆ ಪುಷ್ಪವೃಷ್ಟಿ ಮಾಡಿ ಗಣವೇಷಧಾರಿಗಳನ್ನು ಹುರಿದುಂಭಿಸಲಾಯಿತು.
ಪಥಸಂಚಲನಕ್ಕೆ ಯಾವುದೇ ಸಣ್ಣ ಪುಟ್ಟ ಸಮಸ್ಯೆ ಅಡ್ಡಿ ಉಂಟಾಗಬಾರದೆಂದು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪಟ್ಟಣದಲ್ಲಿಯೇ ಮೊಕ್ಕಾಂ ಹೂಡಿ ಪಥಸಂಚಲನ ಸಾಗುವ ಪ್ರಮುಖ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ನಿಗಾವಹಿಸಿದ್ದರು. ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್, ಬೆಳ್ಳೂರು ಪೊಲೀಸ್ ಠಾಣೆ ಪಿಎಸ್‌ಐ ವೈ.ಎನ್.ರವಿಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆ ರಾಜೇಂದ್ರ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.