ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಸೂರು- ಕುಶಾಲನಗರ ನಡುವಿನ ರಾಷ್ಟ್ರೀಯ ಹೆದ್ದಾರಿ ಪಕ್ಕ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಹಸಿರು ನಿಶಾನೆ ತೋರಿರುವುದರಿಂದ ರೈತರಿಗೆ ಆಗುತ್ತಿದ್ದ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಯಶಸ್ವಿಯಾಗಿದ್ದಾರೆ ಎಂದು ರೈತ ಮುಖಂಡ ಬೆಳಗೊಳ ಸುನೀಲ್ ತಿಳಿಸಿದರು.ಕಾಮಗಾರಿಯ ಕುಂದು ಕೊರತೆಗಳನ್ನು ಆಲಿಸಲು ಸೆ.೧೯ರಂದು ಬೆಳಗೊಳದ ಶ್ರೀಆಂಜನೇಯ ದೇವಾಲಯದ ಬಳಿ ಬೆಳಗ್ಗೆ ೧೦ ಗಂಟೆಗೆ ರೈತರ ಸಭೆ ಕರೆಯಲಾಗಿದೆ. ರೈತರ ನಿಯೋಗವನ್ನು ರವೀಂದ್ರ ಶ್ರೀಕಂಠಯ್ಯ ಅವರು ದೆಹಲಿಗೆ ಕರೆದೊಯ್ದು ಕೇಂದ್ರ ಸಚಿವರಾದ ಕುಮಾರಸ್ವಾಮಿ, ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿಸಿ ಸಮಸ್ಯೆ ಪರಿಹಾರಕ್ಕೆ ಮಾರ್ಗೋಪಾಯ ಸೂಚಿಸಿದ್ದಾರೆ. ಈ ವಿಚಾರವನ್ನು ಅಂದು ವಿಸ್ತಾರವಾಗಿ ತಿಳಿಸಲು ಸಭೆ ಕರೆಯಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೈಸೂರು- ಕುಶಾಲನಗರ ನಡುವೆ ನಡೆಯುತ್ತಿರುವ ರಾಷ್ಟ್ರೀಯ ಕಾಮಗಾರಿಯಲ್ಲಿ ಸ್ಥಳೀಯರ ಅನುಕೂಲಕ್ಕಾಗಿ ಸರ್ವೀಸ್ ರಸ್ತೆ ನೀಡದೇ ತರಾತುರಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿರುವುದಾಗಿ ಹೇಳಿದರು.ಈ ಹಿಂದೆ ಜಿಲ್ಲಾಧಿಕಾರಿ, ಶ್ರೀರಂಗಪಟ್ಟಣ ಶಾಸಕ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸಭೆ ನಡೆಸಿದ್ದರು. ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆ ಇರಲಿದೆ ಎಂದು ಹೇಳಿದ್ದರು. ಆದರೆ ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಯ ಡಿಪಿಆರ್‌ನಲ್ಲಿ ಸರ್ವೀಸ್ ರಸ್ತೆ ಸೌಲಭ್ಯ ಇರುವುದಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ ಎಂದರು.
ಈ ವಿಷಯವನ್ನು ಶಾಸಕರ ಗಮನಕ್ಕೆ ತಂದಾಗ ಶಾಸಕರು ಸಭೆ ನಡೆಸಿ, ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಪರವಾಗಿ ಮಾತನಾಡಿದ್ದು ರೈತರಲ್ಲಿ ಅಸಮಾಧಾನ ಮೂಡಿಸಿತ್ತು. ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಬಳಿ ಸಮಸ್ಯೆ ಹೇಳಿಕೊಂಡ ಹಿನ್ನೆಲೆ ಸ್ಥಳದಲ್ಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ಸಚಿವರು ಸಮಸ್ಯೆ ಆಲಿಸಿ ದೆಹಲಿಗೆ ಬರಲು ಹೇಳಿ, ಅನಾರೋಗ್ಯದ ನಡುವೆಯೂ ರೈತರ ಸಮಸ್ಯೆ ಆಲಿಸಿದರು ಎಂದರು.ಸಮಸ್ಯೆ ಆಲಿಸಿದ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆಯ ಮನವರಿಕೆ ಮಾಡಿದ ಹಿನ್ನೆಲೆ. ಸಮಸ್ಯೆ ಬಗೆಹರಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳಿಗೆ ನಿತಿನ್ ಗಡ್ಕರಿ ಸೂಚನೆ ಮೇರೆಗೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಸಭೆ ಏರ್ಪಡಿಸಲಾಗಿದೆ. ಹೆದ್ದಾರಿಗೆ ಭೂಮಿ ನೀಡಿದ ರೈತರು ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಹೋರಾಟಗಾರ ಚಂದನ್, ರೈತ ಮುಖಂಡರಾದ ಅಶ್ವತ್ ನಾರಾಯಣ್, ಗಿರೀಶ್, ಸುನಿಲ್, ಪ್ರಭಾಕರ್ ಇದ್ದರು.