ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಕಾರ್ಖಾನೆ ಮುಚ್ಚಲು ಬಿಡಲ್ಲ ಎನ್ನುತ್ತಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು ಇದಕ್ಕೆ ಏನು ಉತ್ತರ ಕೊಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರ ಸರ್ಕಾರವೇ ನೇರವಾಗಿ ವಿಐಎಸ್‌ಎಲ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಇಷ್ಟು ದಿನ ಕಾರ್ಖಾನೆ ವಿಚಾರದಲ್ಲಿ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದ ಸಂಸದರು ಈಗ ಯಾಕೆ ಮೌನವಾಗಿದ್ದಾರೆ. ಮಾಧ್ಯಮಗಳಿಗೆ ಯಾಕೆ ಹೇಳಿಕೆ ನೀಡುತ್ತಿಲ್ಲ. ಇನ್ನು ಎಷ್ಟು ದಿನ ಅಂತ ಸುಳ್ಳನ್ನೇ ಹೇಳಿಕೊಂಡು ತಿರುಗಾಡುತ್ತಾರೆ ಎಂದು ಕಿಡಿಕಾರಿದರು.
ಶಿವಮೊಗ್ಗ ನಗರ ಹಾಗೂ ಆನವಟ್ಟಿಯಲ್ಲಿ ಬೃಹತ್ ಪ್ರಮಾಣದ ಶೀತಲೀಕರಣ ಘಟಕ ಹಾಗೂ ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ಸುಮಾರು ನೂರು ಎಕರೆ ವಿಸ್ತೀರ್ಣದಲ್ಲಿ ಆಹಾರ ಸಂಸ್ಕರಣ ಘಟಕವನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಸಂಕಲ್ಪ ಕೈಗೊಳ್ಳಲಾಗಿದೆ ಎಂದು ಹೇಳಿದರು.ಅರಣ್ಯ ಭೂಮಿ ಸಾಗುವಳಿದಾರರಿಗೆ ರಕ್ಷಣೆ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಅರಣ್ಯ ಹಕ್ಕು ಕಾಯ್ದೆಯಲ್ಲಿ ವಯಸ್ಸಿನ ಕಾಲಮಿತಿಯನ್ನು 25 ವರ್ಷಕ್ಕೆ ಇಳಿಸಲು ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನ್ಯಾಯಾಲಯದ ಆದೇಶವಿರುವ ಪ್ರಕರಣಗಳನ್ನು ಮಾತ್ರ ಅರಣ್ಯ ಇಲಾಖೆ ತೆರವು ಕಾರ್ಯಾಚರಣೆ ನಡೆಸುತ್ತಿದೆ ಎಂದರು.
ಅಜೀಂ ಪ್ರೇಮ್ ಜಿ ಫೌಂಡೇಶನ್‌ನ ಸಹಯೋಗದೊಂದಿಗೆ ಸೆಪ್ಟೆಂಬರ್ 5ರಿಂದ ರಾಜ್ಯರಾದ್ಯಂತ ರಾಜ್ಯದ 56 ಲಕ್ಷ ಮಕ್ಕಳಿಗೆ ವಾರದ ಆರು ದಿನಗಳ ಕಾಲ ಮೊಟ್ಟೆ ಚಿಕ್ಕಿ ಮತ್ತು ಬಾಳೆಹಣ್ಣು ವಿತರಿಸಲು ಕ್ರಮವಹಿಸಲಾಗಿದೆ, ಅದಕ್ಕಾಗಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ನಿಂದ ಸುಮಾರು 1500 ಕೋಟಿ ರೂಪಾಯಿಗಳ ಆರ್ಥಿಕ ನೆರವು ದೊರೆಯಲಿದೆ ಎಂದರು.ಮುಂದಿನ ಶೈಕ್ಷಣಿಕ ಸಾಲಿನಿಂದ ಅನ್ವಯಗೊಳ್ಳುವಂತೆ ರಾಜ್ಯದ ಸುಮಾರು 25 ಸಾವಿರ ಮಕ್ಕಳಿಗೆ ನೀಟ್ ಮತ್ತಿತರ ಪರೀಕ್ಷೆಗಳಿಗೆ ಸಹಕಾರಿಯಾಗುವಂತೆ ಶಿಕ್ಷಣ ತರಬೇತಿಗಳನ್ನು ಸರ್ಕಾರದ ವತಿಯಿಂದಲೇ ನಡೆಸಲು ಉದ್ದೇಶಿಸಲಾಗಿದೆ. ರಾಜ್ಯದಾದ್ಯಂತ ಸಾವಿರದ 800 ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಿ 36,000 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗಿದೆ. 1700 ಕನ್ನಡ ಮತ್ತು ಆಂಗ್ಲ ಮಧ್ಯಮದ ಶಾಲೆಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಷಪ್ರಸ್ತುತ ಜೋಗದಲ್ಲಿ 1700 ಮೆಗಾ ವ್ಯಾಟ್ ವಿದ್ಯುತ್ ಉತ್ಪನ್ನ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎರಡು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪನ್ನ ಮಾಡಲು ಅಗತ್ಯ ಯೋಜನೆ ರೂಪಿಸಲಾಗುತ್ತಿದೆ ಎಂದರು.ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಿಸುವುದಿಲ್ಲ. ಯಾವ ಪರಿಷ್ಕರಣೆಯೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಪಂ ಸಿಇಒ ಎನ್ ಹೇಮಂತ್ , ಎಸ್ಪಿ ಜಿ.ಕೆ ಮಿಥುನ್ ಕುಮಾರ್, ವಿಧಾನಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಜಿಲ್ಲಾ ಗ್ಯಾರೆಂಟಿ ಯೋಜನೆಗಳು ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರ ಭೂಪಾಲ್,ಜಿ.ಡಿ ಮಂಜುನಾಥ್,ಕಲಗೋಡು ರತ್ನಾಕರ್ ಸೇರಿದಂತೆ ಹಲವರಿದ್ದರು.-----------
ಚಿತ್ರ: ಮಧು ಬಂಗಾರಪ್ಪ