ಕೇಂದ್ರದಿಂದ ಬೆಂಗಳೂರು ವಿವಿಗೆ ₹100 ಕೋಟಿ ಅನುದಾನ; ಮೋದಿ ಘೋಷಣೆ

| Published : Feb 21 2024, 02:11 AM IST

ಸಾರಾಂಶ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ವಿ.ಬಿ.ಕುಟಿನೋ ಸಭಾಂಗಣದಲ್ಲಿ ಮಂಗಳವಾರ ಪ್ರಧಾನಮಂತ್ರಿ ಮೋದಿ ಅವರಿಂದ ‘ಪ್ರಧಾನಮಂತ್ರಿ ಉನ್ನತ ಶಿಕ್ಷಣ ಅಭಿಯಾನ’ (ಪಿಎಂ-ಉಷಾ) ಯೋಜನೆಯ ವರ್ಚ್ಯುವಲ್ ಚಾಲನೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂಶೋಧನೆ, ಅಭಿವೃದ್ಧಿ, ಅವಿಷ್ಕಾರಗಳ ಮೂಲಕ ಬೆಂಗಳೂರು ವಿಶ್ವವಿದ್ಯಾಲಯ ಜಗತ್ತಿನ ಅಗ್ರ 200 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆಯುವ ಪ್ರಯತ್ನವನ್ನು ಮಾಡಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಎಸ್.ಆರ್. ನಿರಂಜನ್ ಹೇಳಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ವಿ.ಬಿ.ಕುಟಿನೋ ಸಭಾಂಗಣದಲ್ಲಿ ಮಂಗಳವಾರ ಪ್ರಧಾನಮಂತ್ರಿ ಮೋದಿ ಅವರಿಂದ ‘ಪ್ರಧಾನಮಂತ್ರಿ ಉನ್ನತ ಶಿಕ್ಷಣ ಅಭಿಯಾನ’ (ಪಿಎಂ-ಉಷಾ) ಯೋಜನೆಯ ವರ್ಚ್ಯುವಲ್ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಶ್ವವಿದ್ಯಾಲಯಗ‍ಳಲ್ಲಿ ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನೆ ಅಡಿ ಬೆಂಗಳೂರು ವಿವಿಗೆ ಲಭ್ಯವಾಗಿರುವ ₹100 ಕೋಟಿ ಅನುದಾನವನ್ನು ಸಂಶೋಧನೆ, ಮೂಲಸೌಕರ್ಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ವಿವಿಧ ವಲಯಗಳಲ್ಲಿನ ಬೆಂಗಳೂರು ವಿವಿ ಮಾಡಿರುವ ಉತ್ತಮ ಸಾಧನೆ, ಅಂಕಗಳ ಆಧಾರದ ಮೇಲೆ ದೊರಕಿರುವ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು. ಜಗತ್ತಿನ 200 ಅಗ್ರ ವಿವಿಗಳಲ್ಲಿ ಬೆಂಗಳೂರು ವಿವಿ ಒಂದಾಗಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಿದ್ದು, ಪರಿಷತ್ತು ಕೂಡ ಆ ದಿಸೆಯಲ್ಲಿ ಕೆಲಸ ಮಾಡುತ್ತಿದೆ. ಇಡೀ ರಾಜ್ಯಕ್ಕೆ ಮಾದರಿ ವಿಶ್ವವಿದ್ಯಾಲಯ ಆಗಬೇಕು ಎಂದು ಹೇಳಿದರು.

ಕುಲಪತಿ ಡಾ.ಎಸ್.ಎಂ. ಜಯಕರ ಮಾತನಾಡಿ, ಪಿಎಂ ಉಷಾ ಅನುದಾನದ ಮೂಲಕ ವಿಶ್ವವಿದ್ಯಾಲಯದಲ್ಲಿ ಬದಲಾವಣೆ ಪರ್ವ ಶುರುವಾಗಬೇಕು. ವಿಶ್ವವಿದ್ಯಾಲಯದ ಕರ್ತವ್ಯ ಮತ್ತು ಜವಾಬ್ದಾರಿ ಈಗ ಮತ್ತಷ್ಟು ಹೆಚ್ಚಾಗಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕಾರ್ಯ ಮಾಡಲಾಗುವುದು. ವಿದ್ಯಾರ್ಥಿಗಳು, ಪ್ರಾಧ್ಯಾಪಕರ ಅಭಿವೃದ್ಧಿಗೆ ಬೇಕಾದ ಸರ್ವ ಪ್ರಯತ್ನವನ್ನು ಮಾಡುವ ಮೂಲಕ ವಿಶ್ವವಿದ್ಯಾಲಯವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಲಾಗುವುದು ಎಂದರು.

ವಿಶ್ರಾಂತ ಉಪಕುಲಪತಿ ಕೆ.ಆರ್. ವೇಣುಗೋಪಾಲ್ ಮಾತನಾಡಿ, ವಿದ್ಯಾರ್ಥಿಗಳು ಗುಣಮಟ್ಟದ ಸಂಶೋಧನಾ ಪತ್ರಿಕೆಗಳನ್ನು ಮಂಡಿಸುವಂತೆ ಉಪನ್ಯಾಸಕರು ಮಾರ್ಗದರ್ಶನ ಮಾಡಬೇಕು. ಪೆಟೆಂಟ್ ತೆಗೆದುಕೊಳ್ಳಬೇಕು. ಹೆಚ್ಚು ಸಮಯವನ್ನು ವಿದ್ಯಾರ್ಥಿಗಳಿಗಾಗಿ ಮೀಸಲಿಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕುಲಸಚಿವ ಶೇಕ್ ಲತೀಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಯಾವುದಕ್ಕೆ ಅನುದಾನ ಬಳಕೆ?

ಹೊಸ ಕೋರ್ಸ್, ಶೈಕ್ಷಣಿಕ ಕಟ್ಟಡಗಳು, ಬಯಲು ರಂಗಮಂದಿರ, ಹಾಸ್ಟೆಲ್‌ಗಳ ನಿರ್ಮಾಣಕ್ಕೆ ₹50 ಕೋಟಿ ಮೀಸಲಿಡಲಾಗಿದೆ. ವಿಶ್ವವಿದ್ಯಾಲಯ ಕ್ಯಾಂಪಸ್ ಉನ್ನತೀಕರಣ, ನೆಟ್‌ವರ್ಕಿಂಗ್, ಕ್ರೀಡಾ ಸೌಲಭ್ಯಗಳ ಹೆಚ್ಚಳ, ಸ್ಮಾರ್ಟ್ ಕ್ಲಾಸ್, ಆರೋಗ್ಯ ಕೇಂದ್ರದ ಉನ್ನತೀಕರಣ, ಮ್ಯೂಸಿಯಂ ಉನ್ನತೀಕರಣ, ಡಿಜಿಟಲೀಕರಣ, ಹಸಿರು ಕ್ಯಾಂಪಸ್ ಯೋಜನೆಗೆ ₹30 ಕೋಟಿ ಮೀಸಲಿಡಲಾಗಿದೆ. ವೈಜ್ಞಾನಿಕ ಉಪಕರಣಗಳ ಖರೀದಿ, ವಿವಿಧ ವೃತ್ತಿ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ₹20 ಕೋಟಿ ಖರ್ಚು ಮಾಡಲು ವಿವಿ ಉದ್ದೇಶಿಸಿದೆ.