ತೆರಿಗೆ ಪಾಲು ನೀಡುವಲ್ಲಿ ಕೇಂದ್ರ ಅನ್ಯಾಯ ಮಾಡಿಲ್ಲ: ರವಿಕುಮಾರ

| Published : Mar 07 2024, 01:46 AM IST

ಸಾರಾಂಶ

ರಾಜ್ಯಕ್ಕೆ ಅನ್ಯಾಯವಾಗಿದ್ದರೆ ನ್ಯಾಯಾಲಯಕ್ಕೆ ಹೋಗಬಹುದಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನ್ಯಾಯ ಮಾಡಿಲ್ಲ.

ಮರಿಯಮ್ಮನಹಳ್ಳಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆ ಪಾಲನ್ನು ಸರಿಯಾಗಿ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರೋಪ ಸತ್ಯಕ್ಕೆ ದೂರವಾದದ್ದು, ಇದು ಚುನಾವಣಾ ಗಿಮಿಕ್‌ ಆಗಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ರವಿಕುಮಾರ್ ಟೀಕಿಸಿದರು.

ಇಲ್ಲಿನ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಸ್. ಕೃಷ್ಣನಾಯ್ಕ್ ಅವರ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯಕ್ಕೆ ಅನ್ಯಾಯವಾಗಿದ್ದರೆ ನ್ಯಾಯಾಲಯಕ್ಕೆ ಹೋಗಬಹುದಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನ್ಯಾಯ ಮಾಡಿಲ್ಲ. ಹಿಂದಿನ ಕಾಂಗ್ರಸ್ ಸರ್ಕಾರಕ್ಕೆ ಹೋಲಿಸಿದರೆ ದೊಡ್ಡ ಪಾಲು ಬರುತ್ತಿದೆ. ಅಲ್ಲದೇ ಶೇ. 10ರಷ್ಟು ಜಿಎಸ್ಟಿ ಪಾಲು ಹೆಚ್ಚಿಸಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡವಳಿಕೆಯನ್ನು ಗಮನಿಸಿದರೆ ರಾಜ್ಯದಲ್ಲಿ ಬರಗಾಲವೇ ಇಲ್ಲವೆನೋ ಎನಿಸುತ್ತಿದೆ. ಖರ್ಚು​ವೆಚ್ಚ ಕಡಿಮೆ ಮಾಡಬೇಕಾದ ಸಂಕಷ್ಟದ ಪರಿಸ್ಥಿತಿಯಲ್ಲಿ ಒಂದಿಷ್ಟೂ ಕಾಳಜಿ ಇಲ್ಲದಂತೆ ಖರ್ಚು ಮಾಡುತ್ತಿದ್ದಾರೆ. ಬಜೆಟ್ ಬಳಿಕ 85ಕ್ಕೂ ಹೆಚ್ಚು ಸಂಪುಟ ದರ್ಜೆಯ ಸ್ಥಾನಗಳನ್ನು ಹೆಚ್ಚಿಸಿ ವೆಚ್ಚ ಏರಿಸಿದ್ದಾರೆ. 34 ಹೊಸ ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಮನೆ ನವೀಕರಣಕ್ಕೆ ₹6.40 ಕೋಟಿ ವೆಚ್ಚ ಮಾಡಿದ್ದಾರೆ ಎಂದು ಆರೋಪಿಸಿದರು.

ವಿಪ ಸದಸ್ಯೆಹೇಮಲತಾ ನಾಯಕ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಭದ್ರವಾಡಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಬಲ್ಲಾಹುಣ್ಸಿ ರಾಮಣ್ಣ, ಕಾರ್ಯದರ್ಶಿ ಎಸ್‌.ಎಂ. ವೀರೇಶ್ವರಸ್ವಾಮಿ, ಮಂಡಲ ಅಧ್ಯಕ್ಷ ಬೆಣಕಲ್ ಪ್ರಕಾಶ್, ಪಪಂ ಸದಸ್ಯ ಕೆ. ಮಂಜುನಾಥ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ, ಕಾರ್ಯದರ್ಶಿ ಹನುಮನಾಯ್ಕ, ಡಣಾಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಈ. ಅಂಬರೀಶ್, ಎಸ್ಟಿ ಮೋರ್ಚಾ ಅಧ್ಯಕ್ಷ ಎಚ್.ಬಿ. ಕೃಷ್ಣ, ನಗರ ಅಧ್ಯಕ್ಷ ಈ. ಶ್ರವಣಕುಮಾರ್, ಬಿಜೆಪಿ ಮುಖಂಡರಾದ ಎಂ. ಬದ್ರಿನಾಥ ಶೆಟ್ಟಿ, ಎಂ. ಕೀರ್ತಿರಾಜ್‌ ಜೈನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.