ಸಾರಾಂಶ
ಕನ್ನಡಪ್ರಭ ವಾರ್ತೆ, ಶಿವಮೊಗ್ಗ
ರಾಜ್ಯದಲ್ಲಿ ಬರಗಾಲ ಇದ್ದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡಲು ಹಿಂದೇಟು ಹಾಕುತ್ತಿದೆ. ಅದರ ಬಗ್ಗೆ ಮಾತನಾಡಿದ ಬಿಜೆಪಿ ನಾಯಕರು ಈಗ ಬರ ಅಧ್ಯಯನ ಮಾಡುತ್ತಿದ್ದಾರೆ. ರಾಜ್ಯದ ಜನತೆ ಬಗ್ಗೆ ಮೊಸಳೆ ಕಣ್ಣೀರು ಹಾಕುವುದು ಬಿಟ್ಟು ಕೇಂದ್ರದಿಂದ ಅನುದಾನ ತರಲು ಪ್ರಯತ್ನಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಕುಟುಕಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯ ಸರ್ಕಾರ ಬರಗಾಲಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಂಡಿದೆ. ಸುಮಾರು 34 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ಕೇಂದ್ರ ಸರ್ಕಾರಕ್ಕೆ ₹17 ಸಾವಿರ ಕೋಟಿ ನೀಡಬೇಕೆಂದು ಮನವಿ ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರ ಇದುವರೆಗೆ ಒಂದು ಪೈಸೆ ಕೂಡ ನೀಡಿಲ್ಲ. ರಾಜ್ಯದ ಬಿಜೆಪಿ ಸಂಸದರು ಮೌನವಾಗಿದ್ದಾರೆ. ಈಗ ನಾಟಕ ಕಂಪನಿಯಿಂದ ಬರ ಅಧ್ಯಯನ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಒಡೆದ ಮನೆ: ಇಷ್ಟು ದಿನ ಖಾಲಿ ಇದ್ದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈಗ ಬಿ.ವೈ.ವಿಜಯೇಂದ್ರ ಅವರನ್ನು ತಂದು ಕೂರಿಸಿದ್ದಾರೆ. ಬಿಜೆಪಿಯವರು ಕುಟುಂಬ ರಾಜಕೀಯ ಮಾಡುವುದಿಲ್ಲ. ಕಾಂಗ್ರೆಸ್‌ನವರು ಮಾತ್ರ ಕುಟುಂಬ ರಾಜಕೀಯ ಮಾಡುತ್ತಾರೆ ಎನ್ನುತ್ತಾರೆ. ಈಗ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡಿದ್ದಾರೆ. ಈಗ ಯಾರು ಬಿಜೆಪಿಯವರು ಕುಟುಂಬ ರಾಜಕೀಯದ ಬಗ್ಗೆ ಮಾತನಾಡುತ್ತಿಲ್ಲ ಎಂದು ವ್ಯಂಗ್ಯವಾಡಿದರು. ಬಿಜೆಪಿ ಸರ್ಕಾರದ ಜಲಜೀವನ್ ಮಿಷನ್ ಯೋಜನೆ ಸಂಪೂರ್ಣ ಹಳ್ಳಹಿಡಿದಿದೆ. ಟೆಂಡರ್ ಕೆರೆಯುವಲ್ಲಿ, ಕಾಮಗಾರಿಗಳಲ್ಲಿ ಸಾಕಷ್ಟು ಭ್ರಷ್ಟಾಚಾರಗಳಾಗಿವೆ. ರಾಜ್ಯ ಸರ್ಕಾರ ಇದನ್ನು ಕೂಡ ತನಿಖೆ ಮಾಡಬೇಕು. ಬಿಜೆಪಿ ಈಗಾಗಲೇ ಒಡೆದ ಮನೆಯಂತಾಗಿದೆ. ಬಹಳಷ್ಟು ಬಿಜೆಪಿಗರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರುತ್ತಾರೆ ಎಂದು ಭವಿಷ್ಯ ನುಡಿದರು.ಇನ್ನು ವರ್ಗಾವಣೆಗೊಂಡಿರುವ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಕರ್ತವ್ಯಕ್ಕೆ ಹಾಜರಾಗುವುದು ಬಿಟ್ಟು ಇಲ್ಲದ ರಾಜಕಾರಣ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಸೆಡ್ಡು ಹೊಡೆಯುತ್ತಿದ್ದಾರೆ. ಸರ್ಕಾರಿ ನಿಯಮದ ಪ್ರಕಾರ ವರ್ಗಾವಣೆ ಸಹಜವಾಗಿದೆ. ಇದನ್ನು ತಿಳಿಯದ ಷಡಾಕ್ಷರಿ ವಾತಾವರಣವನ್ನೇ ಕೆಡಿಸಲು ಹೊರಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಮಾತನಾಡುವ ನೈತಿಕತೆ ಇವರಿಗೇನಿದೆ? ವರ್ಗಾವಣೆ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಮಾಜಿ ಶಾಸಕ ಆರ್.ಪ್ರಸನ್ನಕುಮಾರ್, ಜಿ.ಡಿ. ಮಂಜುನಾಥ್, ಪ್ರಮುಖರಾದ ವೈ.ಎಚ್. ನಾಗರಾಜ್, ಶಂಕರಘಟ್ಟ ರಮೇಶ್, ಸಿ.ಎಸ್. ಚಂದ್ರಭೂಪಾಲ್, ಇಕ್ಕೇರಿ ರಮೇಶ್, ಕಲಗೋಡು ರತ್ನಾಕರ್, ಚಂದನ್ ಇದ್ದರು.- - -