ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ: ಶ್ರೀನಿವಾಸ ಮಾನೆ

| Published : Jan 16 2025, 12:45 AM IST

ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ: ಶ್ರೀನಿವಾಸ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ತೆರಿಗೆ ಮತ್ತು ಸುಂಕದ ಮೂಲಕ ಕನ್ನಡಿಗರು ಪ್ರತಿವರ್ಷ ಕೇಂದ್ರ ಸರ್ಕಾರಕ್ಕೆ ₹ 4.50 ಲಕ್ಷ ಕೋಟಿ ಭರಿಸುತ್ತಿದ್ದಾರೆ. ಕೇಂದ್ರ ತೆರಿಗೆ ಪಾಲಿನ ರೂಪದಲ್ಲಿ ಕೇವಲ ₹ 45,000 ಕೋಟಿ ಮತ್ತು ಸಹಾಯಧನವಾಗಿ ₹ 15,000 ಕೋಟಿ ನೀಡುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮತ್ತೆ ಅನ್ಯಾಯ ಮಾಡಿದ್ದು, ಇತ್ತೀಚಿಗೆ ರಾಜ್ಯಗಳಿಗೆ ತೆರಿಗೆ ಮತ್ತು ಸುಂಕದ ಪಾಲಿನ ರೂಪದಲ್ಲಿ ಬಿಡುಗಡೆ ಮಾಡಿರುವ ಒಟ್ಟು ₹ 1.73 ಲಕ್ಷ ಕೋಟಿ ಪೈಕಿ ಕರ್ನಾಟಕಕ್ಕೆ ಬರೀ ₹ 6,310 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹೊಸದೇನಲ್ಲ, ಅದೀಗ ಮತ್ತೆ ಮುಂದುವರಿದಿದೆ. ಈ ಅನ್ಯಾಯದ ವಿರುದ್ಧ ನವದೆಹಲಿಯಲ್ಲಿ ಪ್ರತಿಭಟನೆ ಸಹ ನಡೆಸಿದರೂ ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಧಾವಿಸುತ್ತಿಲ್ಲ, ಕನ್ನಡಿಗರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ. ಧ್ವನಿ ಎತ್ತಿ ಈ ಅನ್ಯಾಯ ಪ್ರಶ್ನಿಸಬೇಕಿದ್ದ ಬಿಜೆಪಿ ನಾಯಕರು ಕೇಂದ್ರದ ಧೋರಣೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಕರ್ನಾಟಕ ಮತ್ತು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 5ರಷ್ಟು ಕನ್ನಡಿಗರಿದ್ದಾರೆ. ಜಿಡಿಪಿಯಲ್ಲಿ ಕನ್ನಡಿಗರ ಪಾಲಿನ ಪ್ರಮಾಣ ಶೇ. 8.4ರಷ್ಟಿದೆ. ಕೇಂದ್ರಕ್ಕೆ ಅತೀ ಹೆಚ್ಚು ಜಿಎಸ್‌ಟಿ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಅಲ್ಲದೇ ಜಿಎಸ್‌ಟಿ ಸಂಗ್ರಹ ಹೆಚ್ಚುತ್ತಲೇ ಸಾಗಿದೆ. ಆದರೆ ತೆರಿಗೆ ಹಂಚಿಕೆಯಲ್ಲಿ ಮಾತ್ರ ಕರ್ನಾಟಕದ ಪಾಲು ಕಡಿಮೆಯಾಗುತ್ತಿರುವುದು ದುರ್ದೈವದ ಸಂಗತಿ. ಕೇಂದ್ರ ಸರ್ಕಾರದ ಬಜೆಟ್ ಗಾತ್ರ 2018-19ರಲ್ಲಿ ₹ 24.42 ಲಕ್ಷ ಕೋಟಿಯಷ್ಟಿತ್ತು. ಆ ಗಾತ್ರವೀಗ 2024-25ನೇ ಸಾಲಿನಲ್ಲಿ ₹ 46.28 ಲಕ್ಷ ಕೋಟಿಗೆ ಹೆಚ್ಚಿದೆ. 2018-19ರಲ್ಲಿ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನೀಡಿರುವ ತೆರಿಗೆ ಪಾಲು ₹ 46,288 ಕೋಟಿಗಳಾಗಿದ್ದರೆ 2024-25ನೇ ಸಾಲಿಗೆ ₹ 44,485 ಕೋಟಿ ಮಾತ್ರ ಹಂಚಿಕೆಯಾಗಿದೆ. ಈ ಅಂಕಿ-ಅಂಶಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಕೇಂದ್ರ ಸರ್ಕಾರದಿಂದ ಕನಿಷ್ಠ ₹ ಒಂದು ಲಕ್ಷ ಕೋಟಿ ಹಂಚಿಕೆಯಾಗಬೇಕಿತ್ತು. ಆದರೆ ಬಿಡಿಗಾಸನ್ನು ನಮ್ಮ ರಾಜ್ಯಕ್ಕೆ ಹಂಚಿಕೆ ಮಾಡಿ ಕೈತೊಳೆದುಕೊಂಡು ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಶ್ರೀನಿವಾಸ ಮಾನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತೆರಿಗೆ ಮತ್ತು ಸುಂಕದ ಮೂಲಕ ಕನ್ನಡಿಗರು ಪ್ರತಿವರ್ಷ ಕೇಂದ್ರ ಸರ್ಕಾರಕ್ಕೆ ₹ 4.50 ಲಕ್ಷ ಕೋಟಿ ಭರಿಸುತ್ತಿದ್ದಾರೆ. ಕೇಂದ್ರ ತೆರಿಗೆ ಪಾಲಿನ ರೂಪದಲ್ಲಿ ಕೇವಲ ₹ 45,000 ಕೋಟಿ ಮತ್ತು ಸಹಾಯಧನವಾಗಿ ₹ 15,000 ಕೋಟಿ ನೀಡುತ್ತಿದೆ. ಒಟ್ಟಾರೆ ನಮ್ಮಿಂದ ಭರಿಸಿಕೊಂಡಿರುವ ಒಂದು ರು.ಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಬರೀ 13 ಪೈಸೆಯಷ್ಟೇ ವಾಪಸ್ ನೀಡುತ್ತಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಬಿಜೆಪಿ ಅಧಿಕಾರದಲ್ಲಿರುವ ಉತ್ತರದ ರಾಜ್ಯಗಳಿಗೆ ಯಥೇಚ್ಛವಾಗಿ ಕೇಂದ್ರ ಅನುದಾನ ನೀಡುತ್ತಿದ್ದು, ಕರ್ನಾಟಕಕ್ಕೆ ಮಾತ್ರ ಮೋಸ ಮಾಡುತ್ತಿದೆ. ಹೀಗಾದರೆ ಅಭಿವೃದ್ಧಿ, ಜನಕಲ್ಯಾಣ ಕೈಗೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿರುವ ಶಾಸಕ ಮಾನೆ, ಕೇಂದ್ರ ಸರ್ಕಾರ ನಿರಂತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದರೂ, ಮಲತಾಯಿ ಧೋರಣೆ ಪ್ರದರ್ಶಿಸುತ್ತಿದ್ದರೂ ಬಿಜೆಪಿ ನಾಯಕರು ಮಾತ್ರ ಜಾಣ ಮೌನಕ್ಕೆ ಜಾರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.