ಧಾರವಾಡ:

ಎಐಯುಟಿಯುಸಿ ಜಿಲ್ಲಾ ಸಮಿತಿ ವತಿಯಿಂದ ಅಂತಾರಾಷ್ಟ್ರೀಯ ಕಾರ್ಮಿಕ ದಿನದ ಅಂಗವಾಗಿ ಕಲಾಭವನ ಮೈದಾನದಿಂದ ಕಾರ್ಮಿಕರ ಮೆರವಣಿಗೆ ಮತ್ತು ಸಾಹಿತ್ಯ ಭವನದಲ್ಲಿ ಸಭಾ ಕಾರ್ಯಕ್ರಮ ಜರುಗಿತು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ, ಇಂದು ಪ್ರಬಲ ಕಾರ್ಮಿಕ ಹೋರಾಟದ ಅನುಪಸ್ಥಿತಿಯಲ್ಲಿ ಕಾರ್ಪೋರೇಟ್ ಮಾಲೀಕರು ಅತಿ ಲಾಭದ ದುರಾಸೆಗೆ ಕಾರ್ಮಿಕ ಕಾಯ್ದೆ ಹೊಸಕಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ ದೇಶದಲ್ಲಿ ''''ವ್ಯಾಪಾರ ಸ್ನೇಹಿ'''' ವಾತಾವರಣ ಸೃಷ್ಟಿಸುವ ನೆಪದಲ್ಲಿ 4 ಲೇಬರ್ ಕೋಡ್‌ ಜಾರಿಗೆ ತಂದಿದೆ. ಈ ಮೂಲಕ 29 ಕಾರ್ಮಿಕ ಪರವಾದ ಕಾನೂನು ನೆಲಸಮ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಯಂ ಉದ್ಯೋಗಗಳ ಸ್ಥಾನವನ್ನು ನಿಗದಿತ ಅವಧಿಯ ಉದ್ಯೋಗಗಳು ಆಕ್ರಮಿಸಲಿವೆ. ಅಷ್ಟೇ ಅಲ್ಲದೆ ಲೇಬರ್ ಕೋಡ್ ಹೆಸರಲ್ಲಿ ಕಾರ್ಮಿಕ ಸಂಘಟನೆ ಹಾಗೂ ಪ್ರಜಾತಾಂತ್ರಿಕ ಹಕ್ಕುಗಳನ್ನು ದಮನ ಮಾಡುತ್ತಾ, ಹೋರಾಟದ ಧ್ವನಿ ಹತ್ತಿಕ್ಕಲಾಗುತ್ತಿದೆ ಎಂದರು.

ಗುತ್ತಿಗೆ-ಹೊರಗುತ್ತಿಗೆ ಪದ್ಧತಿ ಹೆಸರಲ್ಲಿ ಕನಿಷ್ಠ ವೇತನ, ಪಿಎಫ್, ಇಎಸ್‌ಐ, ರಜೆ, ಸೇವಾಭದ್ರತೆ ಮುಂತಾದ ಸೌಲಭ್ಯಗಳಿಂದ ಕಾರ್ಮಿಕರು ವಂಚನೆಗೆ ಒಳಗಾಗುತ್ತಿದ್ದಾರೆ. ದುಬಾರಿ ಬೆಲೆ ಏರಿಕೆಯ ದಿನಗಳಲ್ಲಿ 5 ವರ್ಷಕ್ಕೊಮ್ಮೆ ಪರಿಷ್ಕರಣೆ ಆಗಬೇಕಾಗಿದ್ದ ಕನಿಷ್ಠ ವೇತನ 8 ವರ್ಷ ಕಳೆದರೂ ರಾಜ್ಯ ಸರ್ಕಾರ ಜಾರಿ ಮಾಡಿಲ್ಲ. ಸ್ಕೀಮ್ ಅಡಿಯಲ್ಲಿ ಕೆಲಸ ಮಾಡುವ ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ದೂರದ ಮಾತು, ಕನಿಷ್ಠ ಪಕ್ಷ ಅವರನ್ನು ಕಾರ್ಮಿಕರೆಂದು ಪರಿಗಣಿಸಲು ಸರ್ಕಾರಗಳು ಸಿದ್ಧವಿಲ್ಲ. ಸಮಾಜದ ಸ್ವಾಸ್ಥ್ಯಕ್ಕೆ, ಮಹಿಳಾ ಮತ್ತು ಮಕ್ಕಳ ಆರೋಗ್ಯಕ್ಕಾಗಿ ದುಡಿಯುವ ಈ ಹೆಣ್ಣು ಮಕ್ಕಳ ಸಮೂಹಕ್ಕೆ ಸರ್ಕಾರವೇ ಶೋಷಕನಾಗಿದೆ. ಕೇಂದ್ರ-ರಾಜ್ಯ ಸರ್ಕಾರಗಳ ಈ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಎಲ್ಲೆಡೆ ಕಾರ್ಮಿಕ ಹೋರಾಟಗಳು ಬುಗಿಲೆಳುತ್ತಿವೆ. ಆ ಕಾರ್ಮಿಕ ಹೋರಾಟಗಳು ಯಶಸ್ವಿಯಾಗಲು ಮೇ ದಿನದ ತ್ಯಾಗ ಬಲಿದಾನಗಳು ಸ್ಪೂರ್ತಿಯಾಗಲಿ ಎಂದರು.


ಅಧ್ಯಕ್ಷತೆ ವಹಿಸಿದ್ದ ಭುವನಾ ಬಳ್ಳಾರಿ, ಮೇ ದಿನವನ್ನು ಪ್ರತಿ ವರ್ಷ ಕೇವಲ ಸಂಪ್ರದಾಯದಂತೆ ಆಚರಿಸದೆ ಕಾರ್ಮಿಕ ಹಕ್ಕುಗಳ ಹರಣದ ವಿರುದ್ಧ, ಬಂಡವಾಳಶಾಹಿ ಪರ ನೀತಿಗಳ ವಿರುದ್ಧ ಹೋರಾಟಗಳನ್ನು ಮತ್ತಷ್ಟು ತೀವ್ರಗೊಳಿಸುವ ಸಂಕಲ್ಪ ದಿನವನ್ನಾಗಿ ಆಚರಿಸಬೇಕಿದೆ ಎಂದು ಹೇಳಿದರು.

ಈ ವೇಳೆ ವ್ಯಾಲೇಸ್ ಕೈಗಾರಿಕಾ ಯೂನಿಯನ್ ಕಾರ್ಯದರ್ಶಿ ಭೀಮಸೇನ್ ಎಣ್ಣಿ, ಉಪಾಧ್ಯಕ್ಷ ಕಲ್ಲಪ್ಪ ಅಳಗವಾಡಿ, ಶ್ರೀನಾಥ್ ದುಂಡಪ್ಪನವರ, ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಯೋಗಪ್ಪ ಜೊತೆಪ್ಪನವರ, ಉಪಾಧ್ಯಕ್ಷ ಅಲ್ಲಾಭಕ್ಷ ಕಿತ್ತೂರ್, ರಿಯಾಜ್ ತಡಕೋಡ್‌, ಮಾರುತಿ ವಿಟೋಜಿ, ಆಶಾ ಕಾರ್ಯಕರ್ತೆಯರ ಸಂಘದ ಉಪಾಧ್ಯಕ್ಷೆ ರೇಣುಕಾ ಬೋಗಾರ್, ನಂದಾ ದೊಡಮನಿ, ಗೀತಾ ಮಲ್ಲನಗೌಡರ, ಹಾಸ್ಟೆಲ್ ಕಾರ್ಮಿಕರ ಸಂಘದ ಉಪಾಧ್ಯಕ್ಷರು ಶೈನಾಜ್ ಹುದೇಡಮನಿ, ಪದ್ಮಾವತಿ ಪತ್ತಾರ, ಬಿಸಿಯೂಟ ಕಾರ್ಮಿಕರ ಸಂಘದ ಉಪಾಧ್ಯಕ್ಷರು ಜಾಹಿದಾ ಹೊಂಬಳ, ಲಲಿತಾ ಹೊಸಮನಿ, ಕೆಜಿಬಿವಿ ಯೂನಿಯನ್ ಮಾಬುಬಿ ಗಂಜಿಗಟ್ಟಿ ಸೇರಿದಂತೆ ಇತರರು ಇದ್ದರು.