ಚಿಕ್ಕಮಗಳೂರುಪ್ರವಾಸೋದ್ಯಮ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾಫಿನಾಡು ಚಿಕ್ಕಮಗಳೂರಿಗೆ ರೈಲ್ವೆ, ರಸ್ತೆ, ಬಯಲು ಸೀಮೆಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳ ಅಭಿವೃದ್ಧಿ ಅಗತ್ಯವಾಗಿರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್‌ನಲ್ಲಿ ಈ ಎಲ್ಲಾ ಮೂಲ ಸೌಕರ್ಯಕ್ಕಾಗಿ ದೊಡ್ಡ ಪ್ರಮಾಣದ ಅನುದಾನವನ್ನೇ ಚಿಕ್ಕಮಗಳೂರು ಜಿಲ್ಲೆ ನಿರೀಕ್ಷಿಸಿದೆ.

- 2026-27ನೇ ಸಾಲಿನ ಬಜೆಟ್‌ನಲ್ಲಿ ಈ ಎಲ್ಲಾ ಮೂಲ ಸೌಕರ್ಯಕ್ಕಾಗಿ ದೊಡ್ಡ ಪ್ರಮಾಣದ ಅನುದಾನ ಸಿಗುವುದೇ..?

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾಫಿನಾಡು ಚಿಕ್ಕಮಗಳೂರಿಗೆ ರೈಲ್ವೆ, ರಸ್ತೆ, ಬಯಲು ಸೀಮೆಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳ ಅಭಿವೃದ್ಧಿ ಅಗತ್ಯವಾಗಿರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್‌ನಲ್ಲಿ ಈ ಎಲ್ಲಾ ಮೂಲ ಸೌಕರ್ಯಕ್ಕಾಗಿ ದೊಡ್ಡ ಪ್ರಮಾಣದ ಅನುದಾನವನ್ನೇ ಚಿಕ್ಕಮಗಳೂರು ಜಿಲ್ಲೆ ನಿರೀಕ್ಷಿಸಿದೆ.

ಅತೀ ಹೆಚ್ಚು ಕಾಫಿ ಬೆಳೆಯುವ ಪ್ರದೇಶವಾದ ಜಿಲ್ಲೆಯಲ್ಲಿ ಕಾಫಿ ಬೆಳೆಗಾರರಿಗೆ ಪೂರಕವಾದ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯೂ ಹೆಚ್ಚಿದೆ.

ಈಗಾಗಲೇ ಆಗುಂಬೆ -ಶೃಂಗೇರಿ- ಚಿಕ್ಕಮಗಳೂರು ಸಂಪರ್ಕ ಸಂಬಂಧ ಲೋಕೋಪಯೋಗಿ ಇಲಾಖೆಯ ರಸ್ತೆ ಇದ್ದು, ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಹಾಗೂ ಕಾರವಾರದಿಂದ ಉಳ್ಳಾಲದ ರೈಲ್ವೆ ಹಳಿ ಪಕ್ಕದಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೂ ಅನುದಾನ ನೀಡುವ ಸಾಧ್ಯತೆ ಇದೆ.

ಚಿಕ್ಕಮಗಳೂರು- ಬೇಲೂರು- ಹಾಸನ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಪಿಆರ್‌ ಸಿದ್ಧವಾಗುತ್ತಿದೆ. ಇದರೊಂದಿಗೆ ಕಡೂರು-ಚಿಕ್ಕಮಗಳೂರು-ಮಂಗಳೂರು ಹೆದ್ದಾರಿ ನಿರ್ಮಾಣಕ್ಕೆ ಭೂಸ್ವಾಧೀನ ಸೇರಿದಂತೆ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಕೇಂದ್ರ ಬಜೆಟ್‌ನಲ್ಲಿ ಅನುದಾನ ದೊರೆಯುವ ಆಶಾಭಾವನೆ ಇದೆ.

ಕರಾವಳಿ ಸಂಪರ್ಕ ರೈಲ್ವೆ ಯೋಜನೆಗೆ ಭಾರೀ ನಿರೀಕ್ಷೆ

ಸಕಲೇಶಪುರದಿಂದ ಬೇಲೂರು ರೈಲ್ವೆ ಕಾಮಗಾರಿ ಪ್ರಗತಿಯಲ್ಲಿದ್ದು, ಬೇಲೂರಿನಿಂದ ಚಿಕ್ಕಮಗಳೂರಿಗೆ ಯೋಜನೆ ವಿಸ್ತರಣೆ ಕಾಮಗಾರಿಗೆ ಅನುದಾನ ನಿರೀಕ್ಷೆ ಮಾಡಲಾಗಿದೆ. ಶಿವಮೊಗ್ಗದಿಂದ ಶೃಂಗೇರಿ ಮಾರ್ಗವಾಗಿ ಮಂಗಳೂರು ಸಂಪರ್ಕಿಸುವ ಹೊಸ ರೈಲ್ವೆ ಯೋಜನೆಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಬಜೆಟ್‌ನಲ್ಲಿ ಈ ಯೋಜನೆ ಘೋಷಣೆ ಯಾದರೆ, ಬಯಲು ಸೀಮೆಯಿಂದ ಮಲೆನಾಡು ಮೂಲಕ ಕರಾವಳಿ ಸಂಪರ್ಕಿಸಲು ಅನುಕೂಲವಾಗಲಿದೆ. ಈ ಬಗ್ಗೆ ಬಾರಿ ಬಜೆಟ್‌ನಲ್ಲಿ ಭಾರೀ ಭರವಸೆ ಇದೆ.

ಅಡಕೆ ರೋಗ: ಸಂಶೋಧನಾ ಕೇಂದ್ರ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಉಡುಪಿ, ಮಂಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬೆಳೆಯುವ ಅಡಕೆ ಬೆಳೆಗೆ ಇತ್ತೀಚಿನ ದಿನಗಳಲ್ಲಿ ಹಳದಿ ಎಲೆ ರೋಗ ಬಾಧೆ ಹೆಚ್ಚಾಗಿದೆ. ಈ ರೋಗ ತಡೆ ಸಂಶೋಧನಾ ಕೇಂದ್ರವನ್ನು ಸರ್ಕಾರ ಘೋಷಣೆ ಮಾಡುವ ನಿರೀಕ್ಷೆ ಇದೆ.

ಪೆಪ್ಪರ್‌(ಮೆಣಸು) ಪಾರ್ಕ್‌

ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕಾಫಿ, ಏಲಕ್ಕಿ, ಅಡಕೆಯೊಂದಿಗೆ ಕಾಳು ಮೆಣಸು ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಇದರ ಸಮರ್ಪಕ ನಿರ್ವಹಣೆ, ವ್ಯಾಪಾರಕ್ಕೆ ನೆರವಾಗುವಂತೆಚಿಕ್ಕಮಗಳೂರು ಜಿಲ್ಲೆಗೆ ಪೆಪ್ಪರ್‌ ಪಾರ್ಕ್‌ ಘೋಷಣೆಯನ್ನು ಜಿಲ್ಲೆಯ ರೈತರ ನೀರಿಕ್ಷೆಯಲ್ಲಿದೆ.

ಸಿಗುತ್ತಾ ಭದ್ರಾ ಮೇಲ್ದಂಡೆಗೆ ಅನುದಾನ?

ಭದ್ರಾ ಮೇಲ್ದಂಡೆ ಯೋಜನೆಯ ಮೊದಲ ಹಂತ ಈಗಾಗಲೇ ಪೂರ್ಣಗೊಂಡು 2 ಹಂತ ಹಾಗೂ 3ನೇ ಹಂತದ ಯೋಜನೆ ಬಾಕಿ ಇದೆ. ಈ ನಡುವೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ ಕೇಂದ್ರ ಸರ್ಕಾರ 2023ರ ಬಜೆಟ್‌ನಲ್ಲಿ ₹5300 ಕೋಟಿ ಅನುದಾನ ನೀಡುವುದಾಗಿ ತಿಳಿಸಿತ್ತು. ಆದರೆ, ಈವರೆಗೂ ನೈಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಾದರೂ ಅನುದಾನ ನೀಡಿದರೆ, ಕಡೂರು, ತುಮಕೂರು ಸೇರಿದಂತೆ ಬಯಲು ಸೀಮೆಯ ಅನೇಕ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ.

ಸರ್ಫೇಸ್ಸಿ ಕಾಯ್ದೆಯಿಂದ ಕಾಫಿಬೆಳೆ ಹೊರಗಿಡುವ ನಿರೀಕ್ಷೆ

ಕಾಫಿ ಬೆಳೆಗಾರರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಮರುಪಾವತಿಸದ ವೇಳೆ ಬ್ಯಾಂಕ್‌ಗಳು ಸರ್ಫೆಸ್ಸಿ ಕಾಯ್ದೆ ಮುಂದಿಟ್ಟುಕೊಂಡು ಬೆಳೆಗಾರರ ತೋಟಗಳನ್ನು ಆನ್‌ಲೈನ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕಾಯ್ದೆ ಬೆಳೆಗಾರರಿಗೆ ಮರಣ ಶಾಸನವಾಗಿದ್ದು, ಸಕಾಲದಲ್ಲಿ ಸಾಲ ಮರುಪಾವತಿಗೆ ಸಾಧ್ಯವಾಗದ ಬೆಳೆಗಾರರು ತೋಟಗಳನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಸರ್ಫೇಸ್ಸಿ ಕಾಯ್ದೆಯಿಂದ ಕಾಫಿ ಬೆಳೆಯನ್ನು ಹೊರಗಿಡುವ ಆಶಾಭಾವನೆ ಕಾಫಿ ಬೆಳೆಗಾರರಿಗೆ.ಇಎಸ್‌ಐ ಆಸ್ಪತ್ರೆ ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ:

ಜಿಲ್ಲೆಯಲ್ಲಿ ಕಾಫಿಬೆಳೆ, ಕಾಳುಮೆಣಸು, ಅಡಕೆ ವಾಣಿಜ್ಯ ಬೆಳೆಗಳು ಇಲ್ಲಿನ ಜನರ ಆರ್ಥಿಕ ಆಧಾರಸ್ತಂಭ. ಸಾವಿರಾರು ಕಾರ್ಮಿ ಕರು ಕಾಫಿತೋಟ, ಅಡಕೆ, ಕಾಳುಮೆಣಸು ತೋಟಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಗೊಂದು ಇಎಸ್‌ಐ ಆಸ್ಪತ್ರೆ ಮಾಡಬೇಕೆಂಬುದು ಇಲ್ಲಿನ ಜನರ ಬಹುವರ್ಷಗಳ ಬೇಡಿಕೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ಇಎಸ್‌ಐ ಆಸ್ಪತ್ರೆ ಘೋಷಣೆ ಮಾಡುವ ನಿರೀಕ್ಷೆಯೂ ಜನರಲ್ಲಿದೆ.

ವಿಮಾನ ನಿಲ್ದಾಣ ನಿರೀಕ್ಷೆ:

ಚಿಕ್ಕಮಗಳೂರು ಜಿಲ್ಲೆ ಪ್ರವಾಸೋದ್ಯಮಕ್ಕೆ ಜನಪ್ರಿಯತೆ ಹೊಂದಿದೆ. ಈ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಗೊಂದು ವಿಮಾನ ನಿಲ್ದಾಣ ನಿರ್ಮಿಸಬೇಕು. ವಿಮಾನಯಾನ ಯೋಜನೆ ರೂಪಿಸಬೇಕೆಂಬ ಬೇಡಿಕೆ ಹತ್ತಾರು ವರ್ಷಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮವಹಿಸಬಹುದೆಂಬ ಆಶಾಭಾವನೆಇದೆ.

ಪ್ರವಾಸೋದ್ಯಮ ಅಭಿವೃದ್ಧಿಗೆ ನೆರವು

ಕಾರವಾರದಿಂದ ಮಂಗಳೂರು ಕಡಲ ತಡಿಯಲ್ಲಿ ಪ್ರಯಾಣಿಕರಿಗೆ ಹಡಗು ಪ್ರಯಾಣ ಪರಿಚಯಿಸುವ ನಿರೀಕ್ಷೆ ಇದ್ದು, ಅದರಂತೆ ಚಿಕ್ಕಮಗಳೂರು ಪ್ರವಾಸೋದ್ಯಮ ಜಿಲ್ಲೆಯಾಗಿದ್ದು, ಕಾರವಾರ ಮತ್ತು ಮಂಗಳೂರು ಜತೆಗೆ ಇಲ್ಲಿನ ಪ್ರವಾಸಿಕೇಂದ್ರಗಳ ಅಭಿವೃದ್ಧಿಗೆ ಅನುದಾನ ನೀಡುವ ನಿರೀಕ್ಷೆ ಹೆಚ್ಚಿದೆ.--- ಕೋಟ್‌---

ಆಗುಂಬೆಯಿಂದ ಶೃಂಗೇರಿವರೆಗಿನ ಲೋಕೋಪಯೋಗಿ ಇಲಾಖೆ ರಸ್ತೆಯನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿ ಮಾಡ ಬೇಕು ಹಾಗೂ ಉಳ್ಳಾಲ ದಿಂದ ಕಾರವಾರ ವರೆಗಿನ ರೈಲ್ವೆ ಮಾರ್ಗದ ಪಕ್ಕದಲ್ಲಿ ರಸ್ತೆ ನಿರ್ಮಾಣ ಮಾಡಬೇಕೆಂದು ಕೇಂದ್ರ ಸರ್ಕಾರದ ಸಂಬಂಧ ಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರದ ಬಜೆಟ್‌ನಲ್ಲಿ ಅನುದಾನ ನೀಡುವ ಕೆಲಸ ಆಗಲಿದೆ.

- ಕೋಟಾ ಶ್ರೀನಿವಾಸ್‌ ಪೂಜಾರಿ, ಸಂಸದರು, ಚಿಕ್ಕಮಗಳೂರು- ಉಡುಪಿ (ಫೋಟೊ ಬಳಸಿ)