ಬಾಳೆಹೊನ್ನೂರುಭಾರತದ ಕಾಫಿ ಉದ್ಯಮಕ್ಕೆ ಅನನ್ಯ ಕೊಡುಗೆ ನೀಡಿ ಕಾಫಿ ಹೆಸರನ್ನು ಉತ್ತುಂಗಕ್ಕೆ ಕೊಂಡೊಯ್ದ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಗೆ 100ನೇ ವರ್ಷದ ಸಂಭ್ರಮ. ಈ ಹಿನ್ನೆಲೆಯಲ್ಲಿ ಡಿ.20ರಿಂದ 22ರವರೆಗೆ ಶತಮಾನೋತ್ಸವದ ಮೂಲಕ ಅವಿಸ್ಮರಣೀಯಗೊಳಿಸಲು ಕಾಫಿ ಮಂಡಳಿ ಮುಂದಾಗಿದೆ.

ಮೈಸೂರು ಸಂಸ್ಥಾನದ ಕೃಷಿ ನಿರ್ದೇಶಕರಿಂದ ಆರಂಭಗೊಂಡ ಸಂಸ್ಥೆ । ಹತ್ತು ದಶಕಗಳಿಂದ ಕಾಫಿ ಉದ್ಯಮಕ್ಕೆ ಗಣನೀಯ ಕೊಡುಗೆ । ನಾಳೆಯಿಂದ ವಿವಿಧ ಕಾರ್ಯಕ್ರಮಸಚಿನ್‌ಕುಮಾರ್ ಬಿ.ಎಸ್,

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಭಾರತದ ಕಾಫಿ ಉದ್ಯಮಕ್ಕೆ ಅನನ್ಯ ಕೊಡುಗೆ ನೀಡಿ ಕಾಫಿ ಹೆಸರನ್ನು ಉತ್ತುಂಗಕ್ಕೆ ಕೊಂಡೊಯ್ದ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಗೆ 100ನೇ ವರ್ಷದ ಸಂಭ್ರಮ. ಈ ಹಿನ್ನೆಲೆಯಲ್ಲಿ ಡಿ.20ರಿಂದ 22ರವರೆಗೆ ಶತಮಾನೋತ್ಸವದ ಮೂಲಕ ಅವಿಸ್ಮರಣೀಯಗೊಳಿಸಲು ಕಾಫಿ ಮಂಡಳಿ ಮುಂದಾಗಿದೆ.1925ರಲ್ಲಿ ಮೈಸೂರು ಸಂಸ್ಥಾನದ ಆಗಿನ ಕೃಷಿ ನಿರ್ದೇಶಕ ಡಾ. ಲೆಸ್ಲಿ ಸಿ.ಕೊಲ್ಮನ್ ಯಿಂದ ಬಾಳೆಹೊನ್ನೂರು ಸಮೀಪ ಮೈಸೂರು ಕಾಫಿ ಪ್ರಾಯೋಗಿಕ ಕೇಂದ್ರ (ಮೈಸೂರು ಕಾಫಿ ಎಕ್ಸ್ಫರಿಮೆಂಟ್ ಸ್ಟೇಷನ್)ಆರಂಭಿಸಿ ಸುಸಜ್ಜಿತ ಸಂಶೋಧನೆಗೆ ಬುನಾದಿ ಹಾಕಿದರು. ಸ್ವಾತಂತ್ರ್ಯ ನಂತರ ಭಾರತ ಸರ್ಕಾರದಿಂದ ಕಾಫಿ ಮಂಡಳಿ ರಚನೆಯಾಗಿ ಕಾಫಿ ಮಂಡಳಿ ಮೈಸೂರು ಕಾಫಿ ಪ್ರಾಯೋಗಿಕ ಕೇಂದ್ರವನ್ನು ಅಧೀನಕ್ಕೆ ಪಡೆದು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಎಂದು ಮರುನಾಮಕರಣ ಮಾಡಿತು.ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಅಸ್ತಿತ್ವಕ್ಕೆ ಬಂದ 10 ದಶಕಗಳಲ್ಲಿ ಭಾರತದ ಕಾಫಿ ಉದ್ಯಮದ ಬೆಳವಣಿಗೆಗೆ ಪ್ರಮುಖ ಕೊಡುಗೆಗಳನ್ನು ನೀಡಿದೆ. 1930ರ ಆರಂಭದಲ್ಲಿ ಭೀತಿ ಹುಟ್ಟಿಸಿದ್ದ ಎಲೆ ತುಕ್ಕು ರೋಗದಿಂದ ಅರೇಬಿಕಾ ತೋಟ ಗಳನ್ನು ರಕ್ಷಿಸಲು ಬೋರ್ಡೆಕ್ಸ್ ಮಿಶ್ರಣ ಪರಿಚಯಿಸಿತು. ಸಂಸ್ಥೆಯ ಪ್ರಥಮ ವೈಜ್ಞಾನಿಕ ಅಧಿಕಾರಿ ಡಬ್ಲ್ಯೂ. ಡಬ್ಲ್ಯೂ. ಮಾಯ್ನೇ ಮೊಟ್ಟ ಮೊದಲ ಬಾರಿಗೆ ಕಾಫಿ ಎಲೆ ತುಕ್ಕು ರೋಗಕ್ಕೆ ಶೀಲಿಂದ್ರದ ವಿಭಿನ್ನ ಅಸ್ತಿತ್ವವನ್ನು ಗುರುತಿಸಿದರು. ಇದರಿಂದ ಮುಂದಿನ ಪೀಳಿಗೆ ಸಂಶೋಧಕರಿಗೆ ರೋಗ ನಿರೋಧಕ ತಳಿಗಳನ್ನು ಸಂಕರಣಗೊಳಿಸಲು ಸಾಧ್ಯವಾಯಿತು.1940ರಲ್ಲಿ ಸಂಸ್ಥೆ ಬಿಡುಗಡೆ ಮಾಡಿದ ಎಸ್ 795 ಅರೇಬಿಕಾ ತಳಿ ಕಾಫಿ ಬೆಳೆಗಾರರ ಸಮುದಾಯದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದು ಇತ್ತೀಚಿನವರೆಗೂ ವಿವಿಧ ಅರೇಬಿಕಾ ತಳಿಗಳಲ್ಲಿ ಇದು ಪ್ರಮುಖ ಸ್ಥಾನ ಪಡೆದಿದೆ. 1960ರಲ್ಲಿ ದೇಶದಲ್ಲಿ ಸಂಸ್ಥೆ ರೋಬಸ್ಟಾ ಕಾಫಿಯಲ್ಲಿ ತುಂತುರು ನೀರಾವರಿಯನ್ನು ಜನಪ್ರಿಯ ಮಾಡಿತು. ಸಂಸ್ಥೆ ಈ ವೇಳೆಗಾಗಲೇ ಸವರುವಿಕೆ, ಗೊಬ್ಬರ ಹಾಕುವುದು, ಕಳೆ ನಿಯಂತ್ರಣ, ಮಣ್ಣಿನ ಮತ್ತು ನೀರಿನ ಸಂರಕ್ಷಣೆ, ಕೀಟ ಹಾಗೂ ರೋಗಗಳ ಸಮಗ್ರ ನಿಯಂತ್ರಣ ಇತ್ಯಾದಿ ಬಹುತೇಕ ಫಸಲು ಉತ್ಪಾದಕ ತಂತ್ರಜ್ಞಾನವನ್ನು ಮಾನದಂಡವಾಗಿಸುವಲ್ಲಿ ಸಫಲವಾಯಿತು.1986 ಮತ್ತು 2007ರಲ್ಲಿ ಬಿಡುಗಡೆಗೊಳಿಸಿದ ಕಾವೇರಿ ತಳಿ ಮತ್ತು ಅರೆ ಕುಬ್ಜ ತಳಿ ಚಂದ್ರಗಿರಿಯನ್ನುಉತ್ತಮ ತಳಿ ಎಂದೇ ಗುರುತಿಸಲಾಗಿದೆ. ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯಿಂದ ಭಾರತ ಇಂದು ಕಾಫಿ ಉತ್ಪಾದನೆಯಲ್ಲಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ 7ನೇ , ರಫ್ತಿನಲ್ಲಿ 5ನೇ ಸ್ಥಾನದಲ್ಲಿದ್ದೆ. 100 ವರ್ಷಗಳ ಕಾಲ ನಿರಂತರವಾಗಿ ಕಾಫಿ ಉದ್ಯಮಕ್ಕೆ ಬಂಗಾವಲಾಗಿ ನಿಂತು ದೇಶದ ಪ್ರಮುಖ ವಾಣಿಜ್ಯ ಬೆಳೆಯಾಗಿ ವಿಶ್ವಮಟ್ಟಕ್ಕೆ ಏರಿಸಿ ಮುಂದುವರಿದ ದೇಶಗಳೊಂದಿಗೆ ಭಾರತ ನಿಲ್ಲುವಂತೆ ಮಾಡಿದ ಕೀರ್ತಿ ಈ ಸಂಸ್ಥೆಗಿದೆ. ಏಷ್ಯಾ ಖಂಡದ ಪ್ರಮುಖ ಕಾಫಿ ಸಂಶೋಧನಾ ಸಂಸ್ಥೆಗೆ ಮೈಸೂರು ಮಹಾರಾಜ ಕೃಷ್ಣರಾಜ ಒಡೆಯರ್‌ ಅವರು 1931ರಲ್ಲಿ ಭೇಟಿ ನೀಡಿ ಇಲ್ಲಿನ ಕಾರ್ಯವೈಖರಿಯನ್ನು ವೀಕ್ಷಿಸಿ ಶ್ಲಾಘಿಸಿದ್ದರು. ಸಂಸ್ಥೆಯಲ್ಲಿ ಈವರೆಗೆ ನೂರಾರು ವಿಜ್ಞಾನಿಗಳು, ತಂತ್ರ ಜ್ಞರು, ಸಾವಿರಾರು ಸಿಬ್ಬಂದಿ, ಕಾರ್ಮಿಕರ ಅವಿರತವಾಗಿ ಶ್ರಮಿಸಿದ್ದಾರೆ.

-- (ಬಾಕ್ಸ್)-- 7 ಬೀಜಗಳ ನಂಬಿಕೆಯಿಂದ 7 ಲಕ್ಷ ಟನ್‌ಗಳ ಭರವಸೆಯತ್ತ 1925ರಲ್ಲಿ ಹಿಂದಿನ ಮೈಸೂರು ಸರ್ಕಾರದ ಅವಧಿಯಲ್ಲಿ ಬಾಳೆಹೊನ್ನೂರಿನಲ್ಲಿ ಕಾಫಿ ಪ್ರಯೋಗ ಕೇಂದ್ರದ ಹೆಸರಿನಲ್ಲಿ ಕಾಫಿ ಸಂಶೋಧನೆ ಪ್ರಾರಂಭವಾಯಿತು. ಆಗಿನ ಕೃಷಿ ನಿರ್ದೇಶಕ ವಿಜ್ಞಾನಿ ಡಾ. ಲೆಸ್ಲಿ ಸಿ. ಕೋಲ್ಮನ್ ಗೆ ಕಾಫಿಯ ಎಲೆ ತುಕ್ಕು ರೋಗಕ್ಕೆ ಪರಿಹಾರ ಕಂಡುಹಿಡಿಯುವ ಕಾರ್ಯ ವಹಿಸಲಾಯಿತು. ಸಣ್ಣ ಆರಂಭ ಈಗ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ (ಸಿಸಿಆರ್‌ಐ) ಆಗಿ ಎತ್ತರಕ್ಕೆ ನಿಂತಿದೆ. ನಂಬಿಕೆಯೊಂದಿಗೆ ಭಾರತದಲ್ಲಿ ನೆಟ್ಟ 7ಕಾಫಿ ಬೀಜಗಳು 7 ಲಕ್ಷ ಟನ್‌ಗಳ ಭರವಸೆಯತ್ತ ಸಾಗುತ್ತಿದೆ.

-- (ಬಾಕ್ಸ್) --ಶತಮಾನೋತ್ಸವಕ್ಕೆ ಸಂಶೋಧನಾ ಕೇಂದ್ರ ಸಜ್ಜುಶತಮಾನೋತ್ಸವಕ್ಕೆ ಸಂಶೋಧನಾ ಕೇಂದ್ರ ಸಂಪೂರ್ಣ ಸಜ್ಜಾಗಿದ್ದು, ಈಗಾಗಲೇ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ದೆಹಲಿ ಮೂಲದ ಇವೆಂಟ್ ಮ್ಯಾನೇಜ್‌ಮೆಂಟ್ ತಂಡಕ್ಕೆ ಕಾರ್ಯಕ್ರಮದ ಉಸ್ತುವಾರಿ ನೀಡಿ, ನೂರಾರು ಸಿಬ್ಬಂದಿ ಕಳೆದ ಒಂದು ವಾರದಿಂದ ಸ್ಥಳದಲ್ಲಿ ಬೀಡು ಬಿಟ್ಟು ಕಾರ್ಯಕ್ರಮಕ್ಕೆ ಸಿದ್ಧತೆ ಮಾಡುತ್ತಿದ್ದಾರೆ.ಮುಖ್ಯ ವೇದಿಕೆ, ಸಭಾಂಗಣ, ಬೆಳೆಗಾರರು, ಸಾರ್ವಜನಿಕರು ಕುಳಿತುಕೊಳ್ಳಲು ಆತ್ಯಾಧುನಿಕ ಪೆಂಡಾಲ್‌ಗಳನ್ನು ನಿರ್ಮಿಸಲಾಗಿದೆ. ಪ್ರದರ್ಶನ ಮಳಿಗೆಗಳು, ಫುಡ್‌ಕೋರ್ಟ್, ವ್ಯಾಪಾರ ಮಳಿಗೆಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ.ಬಾಳೆಹೊನ್ನೂರು ಮುಖ್ಯರಸ್ತೆಯಿಂದ ಸೀಗೋಡು, ಸಿಸಿಆರ್‌ಐವರೆಗೆ ರಸ್ತೆಯ 2 ಬದಿಗಳಲ್ಲಿ ಸ್ವಾಗತ ಕೋರುವ ಬ್ಯಾನರ್, ಬಣ್ಣ ಬಣ್ಣದ ಧ್ವಜಗಳು, ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ. ಮುಖ್ಯರಸ್ತೆಗಳಲ್ಲಿ ಆಗಮಿಸಿದ ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳಲು ವಿಶೇಷ ಸೆಲ್ಫಿ ಜೋನ್ ನಿರ್ಮಿಸಲಾಗಿದೆ. ವಾಹನ ನಿಲುಗಡೆಗೆ ಬಾಳೆಹೊನ್ನೂರು-ಶೃಂಗೇರಿ ರಸ್ತೆಯ ಸೀಗೋಡು ಕ್ರೀಡಾಂಗಣ, ಜವಾಹರ ನವೋದಯ ವಿದ್ಯಾಲಯದ ಕ್ರೀಡಾಂಗಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರನ್ನು ಕರೆತರಲು 15 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಅತಿಥಿ ಗಳು, ವಿಐಪಿಗಳಿಗೆ ಆರ್‌ಎಸ್ ಬಿಸಿವಿ ಶಾಲೆಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆಇದೆ. ಅತಿಥಿಗಳನ್ನು ಕರೆತರಲು 5 ಎಲೆಕ್ಟ್ರಿಕ್ ವಾಹನಗಳ ವ್ಯವಸ್ಥೆಇದೆ.- (ಬಾಕ್ಸ್)-

ನೂರು ವರ್ಷಗಳ ಅಭಿವೃದ್ಧಿ ಪಕ್ಷಿ ನೋಟ - ಭಾರತದಲ್ಲಿ ಇಂದಿನ ಕಾಫಿ ಉತ್ಪಾದನೆಗೆ ಸಾಕ್ಷಿಯಾಗಿ 13 ಅರೇಬಿಕಾ ಮತ್ತು 3 ರೋಬಸ್ಟಾ ತಳಿಗಳ ಬಿಡುಗಡೆ.

- 300 ಅರೇಬಿಕಾ, 73 ರೋಬಸ್ಟಾ ಮತ್ತು 17 ಕಾಡು ಪ್ರಬೇಧ ಹೊಂದಿರುವ ವಿಶ್ವದ ಅತಿದೊಡ್ಡ ಕಾಫಿ ಅನುವಂಶಿಕ, ಸಂಪನ್ಮೂಲಗಳ ಭಂಡಾರ.- ತಂತ್ರಜ್ಞಾನದ ಪ್ರಮಾಣೀಕರಣ, ಸಮಯೋಚಿತ ತಾಂತ್ರಿಕ ಸಲಹೆ, ಪ್ರದೇಶವಾರು ಉತ್ಪಾದನೆ ಹೆಚ್ಚಿಸಲು ಪ್ರಾದೇಶಿಕ ಅಭ್ಯಾಸ ಅಭಿವೃದ್ಧಿ.-ಸಂಶೋಧನೆ, ಕಾಫಿ ಶಿಕ್ಷಣ, ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ.- ಆಧುನಿಕ ಸಂಶೋಧನಾ ಪ್ರಯೋಗಾಲಯ ಮತ್ತು ಕೇಂದ್ರ ಗ್ರಂಥಾಲಯ.- ಎನ್‌ಎಬಿಎಲ್ ಮಾನ್ಯತೆಯ ಕಾಫಿ ಗುಣಮಟ್ಟ ವಿಭಾಗದ ಪ್ರಯೋಗಾಲಯ.-- ಕೋಟ್೧--1925ರಿಂದಲೂ ಕಾಫಿ ಸಂಶೋಧನೆ ಬಗ್ಗೆ ನಿರಂತರ ಅಧ್ಯಯನ ನಡೆಸಿ 100 ವರ್ಷಗಳಲ್ಲಿ ಕಾಫಿ ಉದ್ಯಮಕ್ಕೆ ವಿಶಿಷ್ಟ ಕೊಡುಗೆ ನೀಡಿದೆ.ಅಂತಾರಾಷ್ಟ್ರೀಯಮಟ್ಟದಲ್ಲಿ ಕಾಫಿ ಬೆಳೆಯಲ್ಲಿ ಉನ್ನತ ಸ್ಥಾನದಲ್ಲಿದೆ. ಸಂಶೋಧನಾ ಕೇಂದ್ರ ಬಿಡುಗಡೆ ಮಾಡಿದ ವಿನೂತನ ತಂತ್ರಜ್ಞಾನ, ಸಂಶೋಧನೆ ಗಳಿಂದ ವಿಸ್ತರಣಾ ವಿಭಾಗದ ಕಾರ್ಯಗಳಿಂದ ಹಾಗೂ ಬೆಳೆಗಾರರ ಉತ್ತಮ ಕಾರ್ಯನಿರ್ವಹಣೆಯಿಂದ ಕಾಫಿ ಕ್ಷೇತ್ರಕ್ಕೆ ಭಾರತ ತನ್ನದೇ ಆದ ಕೊಡುಗೆ ನೀಡಿದೆ.ಸಂಸ್ಥೆ ಬಿಡುಗಡೆ ಮಾಡಿರುವ ರೋಬಸ್ಟಾ ಸಿ*ಆರ್, ರೋಬಸ್ಟಾ ಕ್ಲೋನಲ್ ಗಿಡಗಳು ಅತ್ಯಂತ ಪ್ರಖ್ಯಾತಿ ಪಡೆದಿವೆ. ಟಿಶ್ಯೂ ಕಲ್ಚರ್ ಮೂಲಕ ಗಿಡಗಳನ್ನು ಬೆಳೆಯುವ ಪ್ರಯೋಗ ಸಂಸ್ಥೆ ಈಗಾಗಲೇ ಕೈಗೊಂಡು ಮುಂದಿನ ವರ್ಷದಿಂದ ಟಿಶ್ಯೂ ಕಲ್ಚರ್ ಗಿಡಗಳನ್ನು ಬೆಳೆಗಾರರಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಸಂಶೋಧನಾ ಕೇಂದ್ರ ಈಗಾಗಲೇ ೨೮೫ ಎಕರೆ ಪ್ರದೇಶದಲ್ಲಿ ವಿಶೇಷವಾಗಿ ಸಂಶೋಧಿಸಿ ಕಾಫಿ ಉತ್ಪಾದನೆ ಮಾಡುತ್ತಿದೆ. - ಡಾ. ಸೆಂಥಿಲ್‌ಕುಮಾರ್, ಸಂಶೋಧನಾ ನಿರ್ಧೇಶಕರುಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ.

ಚಿತ್ರ ವಿವರಗಳು೧೮ಬಿಹೆಚ್‌ಆರ್ ೨: ಸಂಶೋಧನಾ ಕೇಂದ್ರದ ಸ್ಥಾಪಕ ಡಾ. ಲೆಸ್ಲಿ ಸಿ.ಕೊಲ್ಮನ್೧೮ಬಿಹೆಚ್‌ಆರ್ ೩: ಮೈಸೂರು ಮಹಾರಾಜರು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದ ಸಮಯ೧೮ಬಿಹೆಚ್‌ಆರ್ ೪: ನೂತನ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ೧೮ಬಿಹೆಚ್‌ಆರ್ ೫: ೧೯೨೫ರಲ್ಲಿ ಆರಂಭಿಸಿದ್ದ ಹಳೆಯ ಕಾಫಿ ಸಂಶೋಧನಾ ಸಂಸ್ಥೆಯ ಕಟ್ಟಡ.೧೮ಬಿಹೆಚ್‌ಆರ್ ೬: ಬಾಳೆಹೊನ್ನೂರು-ಶೃಂಗೇರಿ ರಸ್ತೆಯ ಸೀಗೋಡು ಬಳಿ ಶತಮಾನೋತ್ಸವ ಸಂಭ್ರಮದ ಸ್ವಾಗತ ಕಮಾನು ಅಳವಡಿಸಿರುವುದು.೧೮ಬಿಹೆಚ್‌ಆರ್ ೭: ಸಂಶೋಧನಾ ಪಟ್ಟೆಯಲ್ಲಿ ಸೆಲ್ಫಿ ಕಾರ್ನರ್ ನಿರ್ಮಿಸಿರುವುದು