ಚುನಾವಣೆಗಾಗಿ ಭಾರತ್‌ ರೈಸ್‌ ವಿತರಣೆ: ಸಿಎಂ

| Published : Jul 07 2024, 01:15 AM IST / Updated: Jul 07 2024, 12:25 PM IST

Siddaramaiah

ಸಾರಾಂಶ

ಬಿಜೆಪಿಯವರು ಲೋಕಸಭೆ ಚುನಾವಣೆ ಸೋಲುವ ಭಯದಿಂದ ಚುನಾವಣೆಗಾಗಿ ಸೀಮಿತವಾಗಿ ‘ಭಾರತ್ ಅಕ್ಕಿ’ (ಭಾರತ್‌ ರೈಸ್‌) ವಿತರಣೆ ಜಾರಿಗೆ ತಂದಿದ್ದರು. ಕೇಂದ್ರ ಬಿಜೆಪಿಯು ಬಡವರ ಪರವಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

 ಬೆಂಗಳೂರು :  ಬಿಜೆಪಿಯವರು ಲೋಕಸಭೆ ಚುನಾವಣೆ ಸೋಲುವ ಭಯದಿಂದ ಚುನಾವಣೆಗಾಗಿ ಸೀಮಿತವಾಗಿ ‘ಭಾರತ್ ಅಕ್ಕಿ’ (ಭಾರತ್‌ ರೈಸ್‌) ವಿತರಣೆ ಜಾರಿಗೆ ತಂದಿದ್ದರು. ಕೇಂದ್ರ ಬಿಜೆಪಿಯು ಬಡವರ ಪರವಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಬೆನ್ನಲ್ಲೇ ಪ್ರತಿ ಕೆ.ಜಿ.ಗೆ 29 ರು. ದರದಂತೆ ಅಕ್ಕಿ ವಿತರಿಸುವ ಭಾರತ್‌ ಅಕ್ಕಿ ಹಂಚಿಕೆ ನಿಲ್ಲಿಸಿದ ಕೇಂದ್ರದ ಕ್ರಮದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಚುನಾವಣೆ ಮುಗಿದ ತಕ್ಷಣ ಭಾರತ್‌ ಅಕ್ಕಿ ನಿಲ್ಲಿಸಿದ್ದಾರೆ ಎಂದರೆ ಅವರು ಚುನಾವಣೆಗಾಗಿಯೇ ಇದನ್ನು ಮಾಡಿದ್ದರು ಎಂಬುದು ಸ್ಪಷ್ಟ. ನಮ್ಮ ಅನ್ನಭಾಗ್ಯ ಯೋಜನೆಗೂ ಅಕ್ಕಿ ದಾಸ್ತಾನು ಇಟ್ಟುಕೊಂಡು ಕೊಡಲಿಲ್ಲ. 

ತಮ್ಮ ರಾಜಕೀಯ ದುರುದ್ದೇಶಕ್ಕೆ ಬಡವರಿಗೆ ಸಿಗಬೇಕಾಗಿದ್ದ ಅಕ್ಕಿ ನೀಡಲಿಲ್ಲ. ತನ್ಮೂಲಕ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದರು. ಆದರೆ ನಾವು ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಿಗೆ ಹಣವನ್ನೇ ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕಿದೆವು ಎಂದು ಹೇಳಿದರು.ಈಗಲೂ ಕೇಂದ್ರದಲ್ಲಿ ಅಕ್ಕಿ ದಾಸ್ತಾನಿದ್ದರೂ ನಾವು ಹಣಕ್ಕೆ ಕೇಳಿದರೂ ಕೊಡುತ್ತಿಲ್ಲ. ಜತೆಗೆ ಭಾರತ್‌ ಅಕ್ಕಿ ವಿತರಣೆಯನ್ನೂ ನಿಲ್ಲಿಸಿದ್ದಾರೆ. ಇದರಿಂದ ಕೇಂದ್ರ ಸರ್ಕಾರ ಬಡವರ ಪರವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಎಲ್ಲಾ ಜಾತಿಯವರಲ್ಲೂ ಬಡವರಿದ್ದಾರೆ. ಆದರೆ ಕೇಂದ್ರ ಬಿಜೆಪಿಯವರಿಗೆ ಬಡವರು ಎಂದರೆ ಅಸಡ್ಡೆ. ಹೀಗಾಗಿಯೇ ಅಕ್ಕಿ ನಿಲ್ಲಿಸಿದ್ದಾರೆ ಎಂದು ಟೀಕಿಸಿದರು.