ಉತ್ಪಾದನಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಆದ್ಯತೆ: ಜೋಶಿ

| Published : Aug 18 2025, 12:00 AM IST

ಉತ್ಪಾದನಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಆದ್ಯತೆ: ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ವರೂರಿನ ಗುಣಧರನಂದಿ ಮಹಾರಾಜರು 2004ರಲ್ಲಿ ಎಜಿಎಂ ಶಿಕ್ಷಣ ಸಂಸ್ಥೆ ಆರಂಭಿಸಿದರು. ಹಲವು ಶಿಕ್ಷಣ ಸಂಸ್ಥೆ ಆರಂಭಿಸಿ ಬಡ ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿದ್ದಾರೆ. ವಿವಿಧೆಡೆಯಿಂದ ಬರುವ ಅನುದಾನ ಸಮರ್ಪಕವಾಗಿ ಬಳಕೆ ಮಾಡುತ್ತಿದ್ದಾರೆ. ಇನ್ನೂ ಹೆಚ್ಚೆಚ್ಚು ಸಂಸ್ಥೆಗಳನ್ನು ತೆರೆದು ಶಿಕ್ಷಣ ನೀಡಲಿ.

ಹುಬ್ಬಳ್ಳಿ: ಜಗತ್ತಿನಲ್ಲಿ ಅತ್ಯಂತ ಯುವ ಜನಾಂಗ ಹೊಂದಿದ ಭಾರತಕ್ಕೆ ಮುಂಬರುವ ದಿನಗಳಲ್ಲಿ ಉಜ್ವಲ ಅವಕಾಶಗಳಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ತಾಲೂಕಿನ ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಎಜಿಎಂ ಸಮೂಹ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ಎಜಿಎಂ ರೂರಲ್ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ನವರತ್ನ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸೆಮಿಕಂಡಕ್ಟರ್, ಚಿಪ್ ಸೇರಿದಂತೆ ಉತ್ಪಾದನಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಇದರಿಂದ ಉತ್ತಮ ಅವಕಾಶಗಳು ಲಭಿಸಲಿವೆ ಎಂದರು.

ವರೂರಿನ ಗುಣಧರನಂದಿ ಮಹಾರಾಜರು 2004ರಲ್ಲಿ ಎಜಿಎಂ ಶಿಕ್ಷಣ ಸಂಸ್ಥೆ ಆರಂಭಿಸಿದರು. ಹಲವು ಶಿಕ್ಷಣ ಸಂಸ್ಥೆ ಆರಂಭಿಸಿ ಬಡ ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿದ್ದಾರೆ. ವಿವಿಧೆಡೆಯಿಂದ ಬರುವ ಅನುದಾನ ಸಮರ್ಪಕವಾಗಿ ಬಳಕೆ ಮಾಡುತ್ತಿದ್ದಾರೆ. ಇನ್ನೂ ಹೆಚ್ಚೆಚ್ಚು ಸಂಸ್ಥೆಗಳನ್ನು ತೆರೆದು ಶಿಕ್ಷಣ ನೀಡಲಿ ಎಂದರು.

ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಸ್ವಾಮೀಜಿ ತಮ್ಮದೆ ಆದ ಸಾಮ್ರಾಜ್ಯ ನಿರ್ಮಿಸಿದ್ದಾರೆ. ಇಲ್ಲಿ 8ರಿಂದ 10 ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬಡ ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ಶ್ರೀಗಳು ಮಾನವ ಧರ್ಮ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ ಮಾತನಾಡಿ, ಸ್ವಾಮೀಜಿಗಳು ತಾಂತ್ರಿಕ ಕಾಲೇಜಿನ ಮೂಲಕ ವಿದ್ಯೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಅನ್ನದಾನಕ್ಕಿಂತ ವಿದ್ಯೆ ಬಹಳ ಮುಖ್ಯ. ಹಿಂದೆ ಆಸ್ತಿ ಬಗ್ಗೆ ಹೇಳುತ್ತಿದ್ದರು. ಈಗ ಮಕ್ಕಳ ವಿದ್ಯೆ ಬಹಳ ಮುಖ್ಯ. ಹೀಗಾಗಿ, ಶಿಕ್ಷಣಕ್ಕೆ ಒತ್ತು ನೀಡುವಂತೆ ಹೇಳಿದ ಅವರು, ಎಲ್ಲ ಕ್ಷೇತ್ರದಲ್ಲಿ ಭಾರತ ವಿಶ್ವಮಟ್ಟದತ್ತ ಬೆಳೆಯುತ್ತಿದೆ ಎಂದರು.

ವರೂರ ಕ್ಷೇತ್ರದ ಗುಣಧರನಂದಿ ಮಹಾರಾಜರು ಮಾತನಾಡಿ, ಋಷಿಮುನಿಗಳ ನಾಡು ಭಾರತ. ರಾಜ್ಯದಲ್ಲಿ ಯಾರೂ ಅನಕ್ಷರಾಗದೆ ಅಕ್ಷರಸ್ಥರಾಗಬೇಕು ಎಂದು ಶಿಕ್ಷಣ ಸಂಸ್ಥೆ ಆರಂಭಿಸಲಾಗಿದೆ. ನನ್ನದು ವಾಣಿಜ್ಯೀಕರಣದ ಶಿಕ್ಷಣವಲ್ಲ. ಬಡವರು, ದೀನದಲಿತರು, ಅನಾಥರಿಗೆ ಶಿಕ್ಷಣ ಕೊಡಿಸುವುದೆ ನನ್ನ ಉದ್ದೇಶ. ವರೂರಿನಲ್ಲಿ ವಿಶ್ವದರ್ಜೆ ಶಿಕ್ಷಣ ನೀಡುವ ಉದ್ದೇಶವಿದ್ದು, ಮುಂದಿನ ದಿನಗಳಲ್ಲಿ ಮುಂಬಯಿ ಮತ್ತು ದೆಹಲಿಯವರು ಇಲ್ಲಿಗೆ ಬಂದು ಶಿಕ್ಷಣ ಪಡೆಯುವಂತಾಗಬೇಕು. ಒಳ್ಳೆಯ ಶಿಕ್ಷಣ ಕೊಟ್ಟರೆ ಅವರ ಜೀವನ ಉತ್ತಮವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಶಾಸಕ ಎಂ.ಆರ್. ಪಾಟೀಲ, ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ, ಅನಿಲಕುಮಾರ ಪಾಟೀಲ, ನಿಂಗಪ್ಪ ಸುತಗಟ್ಟಿ, ಮುಂಬಯಿಯ ರತ್ನ ವ್ಯಾಪಾರಿ ಹರ್ಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.