ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ರಾಜ್ಯ 223 ತಾಲೂಕುಗಳು ಬರ ಪೀಡಿತವೆಂದು ಘೋಷಣೆಯಾಗಿದ್ದರೂ ಸಹ ಎನ್‌ಡಿಆರ್‌ಎಫ್ ಯೋಜನೆಯಡಿ ಕೇಂದ್ರ ಸರ್ಕಾರ ಈವರೆಗೂ ರಾಜ್ಯಕ್ಕೆ ಹಣ ಬಿಡುಗಡೆ ಮಾಡಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ದೂರಿದರು.ತಾಲೂಕಿನ ವಿವಿಧ ಗ್ರಾಮಗಳಲಲಿ ಜನಸ್ಪಂದನಾ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮೈತ್ರಿ ಪಕ್ಷಗಳ ನಾಯಕರಿಗೆ ಮಾನ ಮರ್ಯಾದೆ ಗೌರವ ಘನತೆ ಇದ್ದರೆ ಲೋಕಸಭಾ ಚುನಾವಣೆಯೊಳಗೆ ಎನ್‌ಡಿಆರ್‌ಎಫ್ ಹಣ ಬಿಡುಗಡೆ ಮಾಡಿ ಇಲ್ಲದಿದ್ದರೆ ನಮ್ಮನ್ನು ಹಳ್ಳಿಯ ಜನರು ಊರೊಳಗೆ ಸೇರಿಸುವುದಿಲ್ಲ ಎಂದು ಪ್ರಧಾನಿ ಮೋದಿ ಅವರನ್ನು ಕೇಳಿಕೊಳ್ಳಲಿ ಎಂದು ಜೆಡಿಎಸ್ ಹಾಗೂ ಬಿಜೆಪಿ ನಾಯಕರನ್ನು ತಿವಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಅಭಿವೃದ್ಧಿ ಕೆಲಸಗಳಿಗೂ ಅನುದಾನ ಕೊಟ್ಟು ಸುಭಿಕ್ಷವಾಗಿ ಆಡಳಿತ ನಡೆಸುತ್ತಿದೆ. ಕಳೆದ ಐದು ವರ್ಷದಲ್ಲಿ ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಬರಬೇಕಿದ್ದ 1.78 ಸಾವಿರ ಕೋಟಿ ಹಣ ಇನ್ನೂ ಬಂದಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಸಹ ನಮ್ಮ ರಾಜ್ಯಕ್ಕೆ ಬರಬೇಕಿದ್ದ ಅನುದಾನವನ್ನು ಕೊಟ್ಟಿಲ್ಲ ಎಂದರು.ವಿಪಕ್ಷ ನಾಯಕ ಆರ್.ಅಶೋಕ್ ಅವರು ಉಪಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರೂ ಸಹ ಅವರಿಗೆ ರಾಜ್ಯದ ಆರ್ಥಿಕ ಸ್ಥಿತಿಗತಿ ಗೊತ್ತಿಲ್ಲ. ಅನುಭವದ ಕೊರತೆಯಿದೆ. ಅದಕ್ಕಾಗಿಯೇ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಹೇಳಿಕೆ ನೀಡುವ ಮೂಲಕ ಜನರ ದಿಕ್ಕು ತಪ್ಪಿಸುವುದಲ್ಲದೆ ಜಿಲ್ಲೆಯಲ್ಲಿ ಬೆಂಕಿಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈವರೆಗೂ ಒಟ್ಟು 14 ಬಾರಿ ಆರ್ಥಿಕ ಬಜೆಟ್ ಮಂಡಿಸಿ ಯಶಸ್ಸಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯರಿಂದ ಆರ್.ಅಶೋಕ್ ಕಲಿಯುವುದು ಬಹಳಷ್ಟಿದೆ ವಿನಃ ವಿಪಕ್ಷ ನಾಯಕರಿಂದ ನಾವ್ಯಾರು ಪಾಠ ಕಲಿಯಬೇಕಿಲ್ಲ ಎಂದರು.ಸರ್ಕಾರದ ವಿರುದ್ಧ ಮಾತನಾಡದಿದ್ದರೆ ಅವರ ಪಕ್ಷದವರೇ ಚಾಟಿ ಕೋಲು ತೆಗೆದುಕೊಳ್ಳುತ್ತಾರೆಂಬ ಕಾರಣಕ್ಕೆ ಅಶೋಕ್ ಸರ್ಕಾರ ರಾಜ್ಯವನ್ನು ದಿವಾಳಿ ಮಾಡುತ್ತಿದೆ ಎಂಬ ಹೇಳಿಕೆ ಕೊಟ್ಟಿರಬಹುದು. ಅಶೋಕ್ ನನಗೂ ಬಹಳ ಆತ್ಮೀಯರು, ಒಳ್ಳೆಯ ವ್ಯಕ್ತಿ ಆದರೇ ಏನು ಮಾಡೋದು ಗುಡ್‌ಫಾರ್ ನತಿಂಗ್ ಎಂದು ನಗುತ್ತಲೇ ವಿಪಕ್ಷ ನಾಯರನ್ನು ಜರಿದರು.
ಬಳಿಕ ತಾಲೂಕಿನ ಹರದನಹಳ್ಳಿ ಮತ್ತು ದೇವರಮಲ್ಲನಾಯ್ಕನಹಳ್ಳಿ ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ಥಳೀಯ ಜನರ ಸಮಸ್ಯೆ ಆಲಿಸಿ ಅಹವಾಲು ಸ್ವೀಕರಿಸಿದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷೆ ಪುಷ್ಪಾಂಜಲಿ ಗಿರೀಶ್, ತಹಸೀಲ್ದಾರ್ ನಯೀಂಉನ್ನೀಸಾ, ತಾಪಂ ಇಒ ಚಂದ್ರಮೌಳಿ, ಬಿಇಒ ಸುರೇಶ್, ಸಿಡಿಪಿಒ ಕೃಷ್ಣಮೂರ್ತಿ, ಆರ್‌ಎಫ್‌ಒ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಜಿಪಂ ಮಾಜಿ ಸದಸ್ಯ ಎಂ.ಪ್ರಸನ್ನ, ಮುಖಂಡರಾದ ಬಿ.ಎನ್.ವನರಾಜು, ಹಾಲ್ತಿ ಗಿರೀಶ್, ಪಿ.ಆರ್.ರಮೇಶ್, ಮಾಜಿ ತಾಪಂ ಸದಸ್ಯ ಹನುಮಂತಯ್ಯ, ತಿಬ್ಬನಹಳ್ಳಿ ರಮೇಶ್ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಗ್ರಾಪಂ ಸದಸ್ಯರು ಇದ್ದರು.