ಕೇಂದ್ರ ಸರ್ಕಾರ ಕೃಷಿಕರ ಪರವಾಗಿ ನಿಲುವು ತಳೆಯಬೇಕಾಗಿದೆ: ತೇಲಪಂಡ ಪೂವಯ್ಯ

| Published : Sep 25 2024, 12:48 AM IST

ಕೇಂದ್ರ ಸರ್ಕಾರ ಕೃಷಿಕರ ಪರವಾಗಿ ನಿಲುವು ತಳೆಯಬೇಕಾಗಿದೆ: ತೇಲಪಂಡ ಪೂವಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಕರಿಮೆಣಸು ಮೇಲೆ ವಿಧಿಸಿರುವ ಜಿಎಸ್‌ಟಿಯನ್ನು ತೆಗೆದುಹಾಕುವ ಮೂಲಕ ಕೃಷಿಕರ ಪರವಾಗಿ ನಿಲುವು ತಳೆಯಬೇಕಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರಿಮೆಣಸು ಬೆಳೆ ಮೇಲೆ ಸರ್ಕಾರ ಜಿಎಸ್ ಟಿ ವಿಧಿಸಿರುವುದರಿಂದಾಗಿ ಬೆಳೆಗಾರರ ಸಮಸ್ಯೆ ಹೆಚ್ಚಾಗಿದ್ದು ಕೇಂದ್ರ ಸರ್ಕಾರ ಕರಿಮೆಣಸು ಮೇಲೆ ವಿಧಿಸಿರುವ ಜಿಎಸ್ ಟಿಯನ್ನು ತೆಗೆದುಹಾಕುವ ಮೂಲಕ ಕೃಷಿಕರ ಪರವಾಗಿ ನಿಲುವು ತಳೆಯಬೇಕಾಗಿದೆ ಎಂದು ಕೊಡಗು ಪ್ಲಾಂಟರ್ಸ್‌ ಅಸೋಸಿಯೇಷನ್ ನ ನಿರ್ದೇಶಕ ತೇಲಪಂಡ ಪೂವಯ್ಯ ಒತ್ತಾಯಿಸಿದ್ದಾರೆ.

ನಗರದಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪೂವಯ್ಯ, ಕರಿಮೆಣಸು ಫಸಲಿನ ಮೇಲೂ ಜಿಎಸ್ ಟಿ ವಿಧಿಸಿರುವುದು ಸರಿಯಾದ ಕ್ರಮವಲ್ಲ, ನಿಯಮಪ್ರಕಾರವಾಗಿ ಕರಿಮೆಣಸು ಜಿಎಸ್ ಟಿ ವ್ಯಾಪ್ತಿಗೆ ಸೇರಿದ್ದರೂ ಕೃಷಿ ಫಸಲಾಗಿರುವುದರಿಂದಾಗಿ ಜಿಎಸ್ ಟಿ ವಿಧಿಸುವುದರಿಂದ ವಿನಾಯಿತಿ ನೀಡಬಹುದಾಗಿದೆ. ಈ ನಿಟ್ಟಿನಲ್ಲಿ ಬೆಳೆಗಾರ ಸಂಘಟನೆಗಳು ಈಗಾಗಲೇ ಕೇಂದ್ರ ಸರ್ಕಾರದ ಗಮನ ಸೆಳೆದಿವೆ ಎಂದರು. ಕಾನೂನುಗಳನ್ನು ಏಕಪ್ರಕಾರವಾಗಿ ಬೆಳೆಗಾರರಿಗೂ ವಿಧಿಸುವುದರಿಂದಾಗಿ ಬೆಳೆಗಾರರ ಸಮಸ್ಯೆ ಮತ್ತಷ್ಟು ಹೆಚ್ಚಾಗಿ ಕೃಷಿ ಚಟುವಟಿಕೆಗಳಿಂದ ಅನೇಕರು ವಿಮುಖರಾಗುತ್ತಿರುವ ವಿದ್ಯಮಾನಕ್ಕೆ ಕಾರಣವಾಗಬಹುದು ಎಂದು ತೇಲಪಂಡ ಪೂವಯ್ಯ ಎಚ್ಚರಿಸಿದರು.

ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆ ಜ್ಯೋತಿಕಾ ಬೋಪಣ್ಣ ಮಾತನಾಡಿ, ಮಹಿಳೆಯರೇ ಸೇರಿ ಕಾಫಿ ಸೇವನೆಯನ್ನು ಪ್ರೋತ್ಸಾಹಿಸುವ ಸಂಘ ಸ್ಥಾಪಿಸಿ 23 ವರ್ಷಗಳು ಕಳೆದಿವೆ. ಸಂಘಕ್ಕೆ ಪ್ರತೀ ವರ್ಷವೂ ಯುವತಿಯರೂ ಸೇರಿದಂತೆ ಸದಸ್ಯೆಯರಾಗಿ ಹೆಚ್ಚಿನವರು ಸೇರ್ಪಡೆಯಾಗುತ್ತಿರುವುದು ಸಂಘದ ಬೆಳವಣಿಗೆ ನಿಟ್ಟಿನಲ್ಲಿ ಶ್ಲಾಘನೀಯವಾಗಿದೆ ಎಂದರು.

ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ಅನಿತಾ ನಂದ, ಜಂಟಿ ಕಾರ್ಯದರ್ಶಿ ರಾಣಿನರೇಂದ್ರ, ಸಂಘಟನಾ ಕಾರ್ಯದರ್ಶಿ ರೀಟಾ ದೇಚಮ್ಮ, ಖಜಾಂಜಿ ಕುಮಾರಿ ಕುಂಜ್ಞಪ್ಪ ವೇದಿಕೆಯಲ್ಲಿದ್ದರು. ಸರು ಸತೀಶ್ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಕಾರುಗುಂದದ ರಮ್ಯ ನರೇನ್ ಕಾಫಿ ಕೆಫೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯ ವಿವಿಧೆಡೆಗಳಿಂದ ನೂರಾರು ಮಹಿಳಾ ಸದಸ್ಯೆಯರು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.

ಕಾಫಿ ದಸರಾಕ್ಕೆ ಸಹಕಾರ: ಮಡಿಕೇರಿ ದಸರಾದಲ್ಲಿ ಈ ವರ್ಷದಿಂದ ಕಾಫಿ ದಸರಾ ಎಂಬ ಹೊಸ ಕಾರ್ಯಕ್ರಮ ಸೇರ್ಪಡೆಯಾಗುತ್ತಿದ್ದು, ಕಾಫಿಗೆ ಸಂಬಂಧಿಸಿದಂತೆ 32 ಮಳಿಗೆಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಅ. 6 ಮತ್ತು 7 ರಂದು ಕಾಫಿ ದಸರಾ ಸಂದರ್ಭ ಕಾಫಿ ಮತ್ತು ಇತರ ಕೃಷಿ ಸಂಬಂಧಿತ ಬೆಳೆಗಾರರಿಗೆ ಸೂಕ್ತ ಮಾಹಿತಿ ನೀಡಲಾಗುತ್ತದೆ. ಮಹಿಳಾ ಕಾಫಿ ಜಾಗೃತಿ ಸಂಘದ ಸದಸ್ಯೆಯರೂ ಕಾಫಿ ದಸರಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾಫಿ, ಮತ್ತಿತರ ಕೖಷಿ ಸಂಬಂಧಿತ ಬೆಳೆಗಳ ಮಾಹಿತಿಯ ಸದುಪಯೋಗ ಪಡೆದುಕೊಳ್ಳುವಂತೆ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್ ಟಿ ಕಾರ್ಯಕ್ರಮದಲ್ಲಿ ಮನವಿ ಮಾಡಿದರು. ಸಂಘದ ವತಿಯಿಂದ ಕಾಫಿ ದಸರಾಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಸಂಘದ ಅಧ್ಯಕ್ಷೆ ಜ್ಯೋತಿಕಾ ಬೋಪಣ್ಣ ಭರವಸೆ ನೀಡಿದರು.