ಸಾರಾಂಶ
ಕನಕಗಿರಿ:
ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸಿಐಟಿಯು ತಾಲೂಕು ಸಮಿತಿಯಿಂದ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.ಸಂಘಟನೆ ತಾಲೂಕಾಧ್ಯಕ್ಷ ಮಲ್ಲಪ್ಪ ಮ್ಯಾಗಡೆ ಮಾತನಾಡಿ, 2019 ಹಾಗೂ 2020ನೇ ಸಂಸತ್ ಅಧಿವೇಶನದಲ್ಲಿ ಕಾರ್ಮಿಕ 29 ಕಾನೂನುಗಳ ಬದಲಾಗಿ ಕೈಗಾರಿಕಾ ಸಂಬಂಧಗಳ, ಸಾಮಾಜಿಕ ಭದ್ರತೆ, ಔದ್ಯೋಗಿಕ ಸುರಕ್ಷತೆ ಹಾಗೂ ವೇತನ ಕಾನೂನುಗಳನ್ನು ಅಂಗೀಕರಿಸಲಾಗಿದೆ. ಇದರಿಂದ ಕಾರ್ಮಿಕರ ಕಲ್ಯಾಣದ ಪರಿಕಲ್ಪನೆಯನ್ನು ದುರ್ಬಲಗೊಳಸಲಿವೆ. ಕಾರ್ಪೋರೆಟ್‌ಗಳಿಗೆ ಕಡಿವಾಣ ಇಲ್ಲದ, ಲಾಭಗಳಿಸುವ ರಹದಾರಿ ಈ ಕಾನೂನುಗಳಿಂದ ಆಗಲಿದೆ. ಈ ನಾಲ್ಕು ಕಾನೂನುಗಳು ಕಾರ್ಮಿಕರಿಗೆ ಮರಣ ಶಾಸನಗಳಾಗಿದ್ದು, ಕೇಂದ್ರ ಸರ್ಕಾರ ಕಾರ್ಮಿಕ ಕಾನೂನು ಹಿಂಪಡೆಯಬೇಕು. ಐತಿಹಾಸಿಕ ರೈತ ಚಳವಳಿಯ ಸಂದರ್ಭದಲ್ಲಿ ಭರವಸೆ ನೀಡಿದಂತೆ ರೈತರ ಕೃಷಿ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಖಾತ್ರಿಪಡಿಸುವ ಶಾಸನ ರೂಪಿಸಬೇಕೆಂದು ಒತ್ತಾಯಿಸಿದರು.
ಕಾರ್ಮಿಕ ಮುಖಂಡ ಬಾಳಪ್ಪ ಗದ್ದಿ ಮಾತನಾಡಿ, ಉದಾರವಾದಿ ನೀತಿಗಳನ್ನು ತೀವ್ರವಾಗಿ ಜಾರಿಗೊಳಿಸುವ ಕೇಂದ್ರ ಸರ್ಕಾರದ ನೀತಿಗೆ ಪರ್ಯಾಯ ನೀತಿಗಳನ್ನು ಕಂಡುಕೊಳ್ಳದೇ ಅದೇ ದಾರಿಯಲ್ಲಿ ರಾಜ್ಯ ಸರ್ಕಾರ ಮುಂದುವರಿಯುತ್ತಿದೆ ಎಂದು ಕಿಡಿಕಾರಿದೆ.ಸರ್ಕಾರ ಭರವಸೆ ನೀಡಿದಂತೆ ಕೆಲಸದ ಅವಧಿ ಹೆಚ್ಚಳ ಆದೇಶ ಹಿಂಪಡೆದಿಲ್ಲ. ಕನಿಷ್ಠ ವೇತನ ಪರಿಷ್ಕರಣೆ ಕರಡು ಹೊರಡಿಸಲಾಗಿದೆ. ವೈಜ್ಞಾನಿಕ ವೇತನ ಘೋಷಿಸಬೇಕು. ರಾಜ್ಯದಲ್ಲಿ 1.5 ಕೋಟಿ ತೀವ್ರ ಸಂಕಷ್ಟದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಬದುಕಿರುವಾಗಲೇ ಸಹಾಯಕ್ಕೆ ಬರುವ ಸಮಗ್ರ ಸಾಮಾಜಿಕ ಭದ್ರತಾ ಕಾರ್ಯಕ್ರಮ ಜಾರಿಗೊಳಿಸಿಲ್ಲ. ಅಂತಂತ್ರ ಸ್ಥಿತಿಯಲ್ಲಿರುವ ಕಾಯಂಯೇತರ ನೌಕರರ ಕಾಯಂಗೊಳಿಸುವ ಶಾಸನ ರೂಪಿಸಲು ಸಾಧ್ಯವಾಗಿಲ್ಲ. ರೈತ ವಿರೋಧಿ ತಿದ್ದುಪಡಿ, ಕೃಷಿ ಕಾಯ್ದೆಗಳನ್ನು ಈ ವರೆಗೂ ವಾಪಸ್ ಪಡೆಯಲು ಸಾಧ್ಯವಾಗಿಲ್ಲ. 2 ವರ್ಷಗಳ ಅವಧಿಯಲ್ಲಿ ರಾಜ್ಯದ ದುಡಿಯುವ ಜನರ ಬೇಡಿಕೆ ಈಡೇರಿಸದ ರಾಜ್ಯದ ಸರ್ಕಾರದ ಸಾಧನಾ ಸಮಾವೇಶ ಬುಟಾಟಿಕೆಯಾಗಿದೆ ಎಂದು ಆರೋಪಿಸಿದರು.
ಶಿರಸ್ತೆದಾರ ವಿ.ಎಚ್ ಹೊರಪೇಟೆ ಮನವಿ ಸ್ವೀಕರಿಸಿದರು.ಪ್ರಮುಖರಾದ ಹೊನ್ನಪ್ಪ, ಹುಸೇನಸಾಬ್ ತಾವರಗೇರಾ, ಶಿವು, ನಿಂಗಪ್ಪ, ಶಾಮಣ್ಣ, ಹುಸೇನಪ್ಪ, ವೀರೇಶ, ವೆಂಕಟೇಶ, ಮೌಲಾ ಹುಸೇನ್ ಸೇರಿದಂತೆ ಇತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))