ಮುಂಡಗೋಡ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಮತ್ತು ''ಡಿಜಿಟಲ್ ಇಂಡಿಯಾ'' ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲೂಕಿನ ಮಳಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಕೇಂದ್ರ ಸರ್ಕಾರದ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಯಾದ ಒಎನ್‌ಜಿಸಿ ಸಿಎಸ್‌ಆರ್‌ ನಿಧಿಯಡಿ, ಜನಶ್ರೀಧಾನ್ ಫೌಂಡೇಶನ್ ವತಿಯಿಂದ ಅತ್ಯಾಧುನಿಕ ಸ್ಮಾರ್ಟ್ ಬೋರ್ಡ್‌ಗಳು ಹಾಗೂ ಶಾಲೆಯ ವಿದ್ಯುತ್ ಸ್ವಾವಲಂಬನೆಗಾಗಿ ಅಳವಡಿಸಲಾದ ೫ ಕಿವ್ಯಾ ಸೌರ ವಿದ್ಯುತ್ ಉಪಕರಣಗಳನ್ನು ಶನಿವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದ್ದು, ಸ್ಮಾರ್ಟ್ ಬೋರ್ಡ್ ಮತ್ತು ಟ್ಯಾಬ್‌ಗಳ ಮೂಲಕ ವಿದ್ಯಾರ್ಥಿಗಳು ದೃಶ್ಯ-ಶ್ರವ್ಯ ಮಾಧ್ಯಮದ ಕಲಿಕೆಯನ್ನು ಸುಲಭವಾಗಿ ಆಸ್ವಾದಿಸಬಹುದಾಗಿದೆ. ಅಲ್ಲದೆ, ಸೌರ ವಿದ್ಯುತ್ ಘಟಕದ ಸ್ಥಾಪನೆಯಿಂದಾಗಿ ಶಾಲೆ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿದ್ದು, ನಿರಂತರ ಡಿಜಿಟಲ್ ಕಲಿಕೆಗೆ ಇದು ಭದ್ರ ಬುನಾದಿ ಒದಗಿಸಲಿದೆ. ಈ ಅಭಿವೃದ್ಧಿ ಕಾರ್ಯ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೊಸ ವೇಗ ನೀಡಲಿದೆ ಎಂದು ಸಂಸದರು ಆಶಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ತಾಲೂಕಿನ ಆಯ್ದ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳಲು ಪೂರಕವಾದ ''ಶಿಕ್ಷಾ ಟ್ಯಾಬ್''ಗಳನ್ನು ವಿತರಿಸಲಾಯಿತು.

ಜನಶ್ರೀಧಾನ್ ಫೌಂಡೇಶನ್‌ನ ಅಧಿಕಾರಿ ಮೃತ್ಯುಂಜಯ ದೀಕ್ಷಿತ, ಕಿರಣ ಡಿ.ಎಂ., ಶಿರಸಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಆರ್. ನಾಯ್ಕ, ಮುಂಡಗೋಡ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ, ತಾಲೂಕು ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ್, ಅಶೋಕ್ ಚಲವಾದಿ, ಕೃಷ್ಣ ಭರತನಳ್ಳಿ ಹಾಗೂ ಶಾಲಾಭಿವೃದ್ದಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.