ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಕೇಂದ್ರ ಸರ್ಕಾರ ಬಡವರು, ರೈತರು ಕೂಲಿಕಾರರು ಮತ್ತು ಮಹಿಳೆಯರನ್ನು ನಿರ್ಲಕ್ಷಿಸುತ್ತಿದೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯೆ ಟಿ.ಪಿ.ಶೋಭಾ ಆಕ್ರೋಶ ವ್ಯಕ್ತಪಡಿಸಿದರು.ಅಣ್ಣೂರು ಗ್ರಾಮದಲ್ಲಿ ಸಿಪಿಐಎಂ ಪಕ್ಷದ ಭಾರತೀನಗರ ಶಾಖೆ 5ನೇ ಸಮ್ಮೇಳನದಲ್ಲಿ ಮಾತನಾಡಿ, ಕೇಂದ್ರದಲ್ಲಿ ಕಳೆದ ಹತ್ತು ವರ್ಷದಿಂದ ಈಚೆಗೆ ಅಧಿಕಾರ ಮಾಡುತ್ತಿರುವ ಬಿಜೆಪಿ ಮೋದಿ ಸರ್ಕಾರ ದೇಶದ ಅಭಿವೃದ್ಧಿಗೆ ಮುಂದಾಗದೇ ಬಡವರು, ರೈತರು ಕೂಲಿಕಾರರು ಮತ್ತು ಮಹಿಳೆಯರನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ರೈತ ವಿರೋಧಿ ಕೃಷಿ ಕಾಯ್ದೆಗಳ ಜಾರಿ, ಉದ್ಯೋಗ ಖಾತ್ರಿಯಲ್ಲಿ ಅನುದಾನ ಕಡಿತ, ದೇಶದಲ್ಲಿ ಕೋಮುವಾದಿ ವಿಷ ಬೀಜ ಬಿತ್ತುವುದು, ಜಾತ್ಯತೀತ ಭಾರತವನ್ನು ವಿಂಗಡಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ದೂರಿದರು.ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಬಿ.ಹನುಮೇಶ್ ಮಾತನಾಡಿ, ತೈಲ ಬೆಲೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೂಡಲೇ ಕಡಿಮೆಗೊಳಿಸಬೇಕು. ದುಡಿಯುವ ವರ್ಗವಾದ ರೈತರು, ಕೂಲಿಕಾರ್ಮಿಕರು, ಮಹಿಳೆಯರ ಮತ್ತು ನಿರುದ್ಯೋಗದ ಬಗ್ಗೆಯಾಗಲಿ ಸಂಸತ್ ನಲ್ಲಿ ಚರ್ಚೆಯಾಗಿಲ್ಲ. ಬಂಡವಾಳಶಾಯಿಗಳಿಗೆ ಅನುಕೂಲ ಕಲ್ಪಿಸಿ ಬಡವರನ್ನು ವಂಚಿಸುತ್ತಲೇ ಬರುತ್ತಿದ್ದಾರೆ ಎಂದು ಕಿಡಿಕಾರಿದರು.
ಸಮ್ಮೇಳನದ ಧ್ವಜಾರೋಹಣವನ್ನು ಶಾಖೆ ಸದಸ್ಯ ಕಾಮ್ರೇಡ್ ವಿಷಕಂಠೇಗೌಡ ನೆರವೇರಿಸಿದರು. ಅಗತ್ಯ ವಸ್ತುಗಳ ಬೆಲೆ ಇಳಿಕೆ, ಉದ್ಯೋಗ ಖಾತ್ರಿಯಲ್ಲಿ 200 ದಿನ ಕೆಲಸ ನೀಡಿ 600 ರು. ಕೂಲಿ ಹಣ ನೀಡಬೇಕು. ದಲಿತರ ಮೇಲಿನ ದೌರ್ಜನಗಳು ನಿಲ್ಲಬೇಕು, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆಯಾಗಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.ಇದೇ ವೇಳೆ ಭಾರತೀನಗರದ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಎಲ್ಲ ಮೂಲ ಸೌಕರ್ಯ ನೀಡಬೇಕು. ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಬೇಕು, ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬಸರಾಜು ಮಾಡಲು ಬದಲಿ ರಸ್ತೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಎಲ್ಲಾ ಸರ್ಕಾರಿ ಶಾಲೆಗಳನ್ನು ಗುಣಮಟ್ಟಗೊಳಿಸಬೇಕೆಂದು ನಿರ್ಣಯಿಸಲಾಯಿತು.
ಸಮ್ಮೇಳನದಲ್ಲಿ ಅಣ್ಣೂರು ಡಿ.ಸಿದ್ದರಾಜ ಅವರನ್ನು ನೂತನ ಶಾಖೆ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಸಿಪಿಎಂ ಜಿಲ್ಲಾ ಸಮಿತಿ ಸದಸ್ಯೆ ಡಿ.ಕೆ.ಲತಾ, ಶಾಖಾ ಸದಸ್ಯರಾದ ಮಂಚೇಗೌಡ, ಚಂದ್ರಣ್ಣ, ರಾಮಚಂದ್ರ, ಮಹದೇವಸ್ವಾಮಿ, ನಾಗಮ್ಮ, ಜವರೇಗೌಡ, ತಮ್ಮೇಗೌಡ ಸೇರಿದಂತೆ ಹಲವರಿದ್ದರು.