ಸಾರಾಂಶ
ದೇಶದಲ್ಲಿ ಶೇ. 10 ರಿಂದ 30ರಷ್ಟು ಕೃಷಿ ಬೆಳೆಗಳಲ್ಲಿ ಇಳುವರಿ ಕುಸಿಯುತ್ತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ವೈರಲ್ ಸೋಂಕಿನಿಂದ ಜಾಗತಿಕ ಬೆಳೆ ನಷ್ಟದಲ್ಲಿ ಅರ್ಧದಷ್ಟು ಪ್ರಮಾಣ ದೇಶದ ಕೃಷಿಯಲ್ಲಿ ಆಗುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ವಿಜ್ಞಾನಿ ಪ್ರೊ.ಎಚ್.ಎಸ್. ಸಾವಿತ್ರಿ ಹೇಳಿದರು.ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಸ್ಯ ಪೋಷಕಾಂಶ: ಮಾನವ ಪೌಷ್ಟಿಕತೆ ಮತ್ತು ತಾಂತ್ರಿಕ ನಾನಿನ್ಯತೆ’ ಕುರಿತ ಅಮೃತ ಮಹೋತ್ಸವ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿ, ದೇಶದಲ್ಲಿ ಶೇ. 10 ರಿಂದ 30ರಷ್ಟು ಕೃಷಿ ಬೆಳೆಗಳಲ್ಲಿ ಇಳುವರಿ ಕುಸಿಯುತ್ತಿದೆ. ಪ್ರಮುಖವಾಗಿ ಬಾಳೆ, ಭತ್ತ, ಟೊಮೆಟೊ, ಹತ್ತಿ, ನೆಲಗಡಲೆಗಳು ಹೆಚ್ಚು ಸೋಂಕಿಗೆ ಒಳಗಾಗುತ್ತಿವೆ ಎಂದು ಅವರು ತಿಳಿಸಿದರು.
ವೈರಲ್ ಪೋಟಿನ್ ಬಹುಕಾರ್ಯವಿಧಾನ ಒಳಗೊಂಡಿದ್ದು, ಅವುಗಳ ವಿನ್ಯಾಸ, ಕಾರ್ಯವೈಖರಿಯನ್ನು ಸದಾ ಬದಲಿಸುತ್ತಿರುತ್ತವೆ. ಅವುಗಳನ್ನು ಹತೋಟಿಗೆ ತರಬೇಕೆಂದರೆ ಸಂಶೋಧನೆಯನ್ನು ನಿರಂತರವಾಗಿ ಮುಂದುವರಿಸಬೇಕು ಎಂದು ಅವರು ಸಲಹೆ ನೀಡಿದರು.ಸಿ.ಎಫ್.ಟಿ.ಆರ್.ಐ ನಿವೃತ್ತ ನಿರ್ದೇಶಕ ಪ್ರೊ.ವಿ. ಪ್ರಕಾಶ್ ಮಾತನಾಡಿ, ಜಗತ್ತಿನಲ್ಲಿ ಆಹಾರ ತಂತ್ರಜ್ಞಾನದಲ್ಲಿ ಸಿ.ಎಫ್.ಟಿ.ಆರ್.ಐ ಪಾತ್ರ ಹಿರಿದು. ಜಗತ್ತಿನಲ್ಲಿ ಶಿಶು ಆಹಾರ ಮತ್ತು ಸಿದ್ಧಪಡಿಸಿದ ಆಹಾರ ಆವಿಷ್ಕರಿಸಿದ ಸಂಸ್ಥೆ ಎಂಬ ಹಿರಿಮೆಯೂ ಇದೆ ಎಂದರು.
ಸಸ್ಯ ಪೋಷಕಾಂಶಗಳನ್ನು ಸಿದ್ಧ ಆಹಾರವಾಗಿಸುವ ತಂತ್ರಜ್ಞಾನವನ್ನು ಸಂಸ್ಥೆ ಅಭಿವೃದ್ಧಿ ನಡೆದಿದೆ. ಸಿರಿಧಾನ್ಯ ಆಹಾರಗಳು ಮತ್ತೆ ಜನಪ್ರಿಯವಾಗಲು, ಹೊಸ ಮಾದರಿಯ ತಿನಿಸುಗಳನ್ನು ತಯಾರಿಸಿದೆ. ವೇಗನ್ ಮಿಲ್ಕ್ ಹೊಸ ಪೇಯವಾಗಿದ್ದು, ಆಸ್ಪತ್ರೆಗಳಲ್ಲೂ ನೀಡಲಾಗುತ್ತಿದೆ ಎಂದರು.ಸಂಸ್ಥೆಯ ನಿರ್ದೇಶಕಿ ಪ್ರೊ.ಶ್ರೀದೇವಿ ಅನ್ನಪೂರ್ಣ ಸಿಂಗ್ ಇದ್ದರು.