ಸಾರಾಂಶ
ಕನ್ನಡಪ್ರಭ ವಾರ್ತೆ ಗುಬ್ಬಿ
ಕೇಂದ್ರ ಸರ್ಕಾರಕ್ಕಾಗಲಿ ರಾಜ್ಯ ಸರ್ಕಾರಕ್ಕಾಗಲಿ ರೈತರ ಹಿತ ಕಾಯುವ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ ಗೋವಿಂದರಾಜು ಕಿಡಿಕಾರಿದರು.ತಾಲೂಕಿನ ಕಡಬ ಹೋಬಳಿಯ ಕೊಪ್ಪ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೂತನ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು ದೆಹಲಿಯಲ್ಲಿ ರೈತರು ಮಾಡಿದ್ದ ನಿರಂತರ ಹೋರಾಟದಿಂದಾಗಿ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು. ಆದರೆ ಈಗ ರೈತನ ಪಂಪ್ ಸೆಟ್ ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಹೊರಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರೈತರ ಜೇಬಿಗೆ ಕತ್ತರಿಯನ್ನು ಹಾಕುತ್ತಿದೆ. ಈ ಬೆಳವಣಿಗೆಯ ಬಗ್ಗೆ ರೈತರು ಧ್ವನಿ ಎತ್ತಬೇಕಿದೆ. ಕೊಪ್ಪ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಶಾಖೆಯ ಸ್ಥಾಪನೆಯಾಗಿರುವುದರಿಂದ ಸಂಘಟನೆಗೆ ಇಂಬು ಕೊಡಲಿದೆ ಎಂದರು. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಸರ್ಕಾರ ಬೆಂಬಲ ಬೆಲೆಯನ್ನು ನೀಡಿದರೆ ರೈತರು ಸಾಲಗಾರಾಗುವ ಅವಶ್ಯಕತೆ ಇರುವುದಿಲ್ಲ. ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಉತ್ತಮ ಬೆಲೆ ನಿಗದಿ ಮಾಡಿದರೆ ರಾಷ್ಟ್ರದಲ್ಲಿ ಆರ್ಥಿಕತೆ ಹೆಚ್ಚಾಗುತ್ತದೆ. ಯಾವುದು ಸುಮ್ಮನೆ ನಮ್ಮ ಬಳಿ ಬರುವುದಿಲ್ಲ ಎಲ್ಲವನ್ನು ಹೋರಾಟದ ಮೂಲಕ ಚಳುವಳಿಯ ಮೂಲಕವೇ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ರೈತರು ಸಂಘಟಿತರಾದರೆ ಬಂಡವಾಳ ಶಾಹಿ ಸರ್ಕಾರಗಳನ್ನು ಎಚ್ಚರಿಸಬಹುದು ಎಂದು ತಿಳಿದರು.ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ ಮಾತನಾಡಿ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಮದ್ಯವರ್ತಿ ಬಂದು ಬೆಲೆ ನಿಗದಿ ಮಾಡುತ್ತಾನೆ. ರೈತರು ಬೆಳೆದ ಬೆಳೆಗಳಿಗೆ ರೈತನೇ ಬೆಲೆ ನಿಗದಿ ಮಾಡಿ ಮಾರಾಟ ಮಾಡಬೇಕು. ಇದರಿಂದ ರೈತರ ಜೀವನ ಮಟ್ಟ ಹಾಗೂ ಆರ್ಥಿಕತೆ ಸುಧಾರಿಸುತ್ತದೆ. ಇಂದು ಜನರು ಆರಿಸಿರುವ ಸರ್ಕಾರಗಳು ನಗರಗಳನ್ನು ವೈಭವೀಕರಿಸುತ್ತಿವೆ. ನಗರಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿವೆ ಯುವಕರು ಕೃಷಿ ಮಾಡುವುದನ್ನು ಬಿಟ್ಟು ನಗರಗಳತ್ತ ವಲಸೆ ಹೋಗುತ್ತಿದ್ದಾರೆ ಇದನ್ನು ಮನಗಂಡು ಸರ್ಕಾರಗಳು ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚು ಹೆಚ್ಚು ಯೋಜನೆಗಳನ್ನು ರೂಪಿಸಬೇಕಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ಗುರು ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ಸಿ ಜಿ ಲೋಕೇಶ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗಿರಿಜಮ್ಮ, ಪಿ .ಟಿ .ಕುಮಾರ್, ಸಿದ್ದಲಿಂಗಪ್ಪ, ರೈತ ಸಂಘದ ತಾಲ್ಲೂಕು ಉಪಾಧ್ಯಕ್ಷ ಬಸವರಾಜಪ್ಪ ಹೋಬಳಿ ಅಧ್ಯಕ್ಷ ಯತೀಶ್ ವೆಂಕಟೇಶ್, ಲೋಕೇಶ್, ಸೇರಿದಂತೆ ಕೊಪ್ಪ ಗ್ರಾಮ ಶಾಖೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.