ಕೇಂದ್ರ ಬರ ಅಧ್ಯಯನ ತಂಡ ಮೊದಲು ಘೋಷಣೆಯಾದ 100 ತಾಲೂಕುಗಳ ಪಟ್ಟಿಯಲ್ಲಿನ ಕೃಷಿಭೂಮಿಗಳಿಗೆ ಭೇಟಿ ನೀಡಿ ಅಧ್ಯಯನ ಕೈಗೊಳ್ಳುವ ಕುರಿತು ಅಧಿಕಾರಿಗಳು ಪಟ್ಟಿ ಸಿದ್ಧಗೊಳಿಸಿದ ಹಿನ್ನೆಲೆಯಲ್ಲಿ ಕೇಂದ್ರದ ಬರ ಅಧ್ಯಯನ ತಂಡ ಕೊಟ್ಟೂರು, ಕೂಡ್ಲಿಗಿಗೆ ಬರುತ್ತಿಲ್ಲ

ಜಿ. ಸೋಮಶೇಖರ ಕೊಟ್ಟೂರು

ಬರಪೀಡಿತ ತಾಲೂಕೆಂದು ಎರಡನೇ ಪಟ್ಟಿಯಲ್ಲಿ ಸರ್ಕಾರ ಕೊಟ್ಟೂರ, ಕೂಡ್ಲಿಗಿ ತಾಲೂಕನ್ನು ಸೇರ್ಪಡೆಗೊಳಿಸಿದ್ದರೂ ಸೋಮವಾರ ಜಿಲ್ಲೆಗೆ ಆಗಮಿಸುವ ಕೇಂದ್ರ ಬರ ಅಧ್ಯಯನ ತಂಡ ಈ ಎರಡು ತಾಲೂಕಿಗೆ ಭೇಟಿ ನೀಡುವುದಿಲ್ಲ. ಇದು ಇಲ್ಲಿಯ ರೈತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಭಾರಿ ಪ್ರಮಾಣದ ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಕೂಡ್ಲಿಗಿ, ಕೊಟ್ಟೂರ ತಾಲೂಕನ್ನು ಬರಪೀಡಿತ ಎಂದು ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿರಲಿಲ್ಲ. ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ ಮತ್ತು ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮರಾಜ್ ನಾಯ್ಕ ಬರ ಪಟ್ಟಿಯಲ್ಲಿ ಸೇರಿಸುವಂತೆ ನಿರಂತರವಾಗಿ ಸರ್ಕಾರದ ಮೇಲೆ ಒತ್ತಡ ತಂದಿದ್ದರಿಂದ ರಾಜ್ಯ ಸರ್ಕಾರ ಕೆಲವು ದಿನಗಳ ಹಿಂದೆ ಕೊಟ್ಟೂರು, ಕೂಡ್ಲಿಗಿ ತಾಲೂಕುಗಳನ್ನು ಬರಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದೆ.

ಕೇಂದ್ರ ಬರ ಅಧ್ಯಯನ ತಂಡ ಮೊದಲು ಘೋಷಣೆಯಾದ 100 ತಾಲೂಕುಗಳ ಪಟ್ಟಿಯಲ್ಲಿನ ಕೃಷಿಭೂಮಿಗಳಿಗೆ ಭೇಟಿ ನೀಡಿ ಅಧ್ಯಯನ ಕೈಗೊಳ್ಳುವ ಕುರಿತು ಅಧಿಕಾರಿಗಳು ಪಟ್ಟಿ ಸಿದ್ಧಗೊಳಿಸಿದ ಹಿನ್ನೆಲೆಯಲ್ಲಿ ಕೇಂದ್ರದ ಬರ ಅಧ್ಯಯನ ತಂಡ ಕೊಟ್ಟೂರು, ಕೂಡ್ಲಿಗಿಗೆ ಬರುತ್ತಿಲ್ಲ. ಕೂಡ್ಲಿಗಿಯಲ್ಲಿ ಸಭೆ ಮಾತ್ರ ನಿಗದಿಯಾಗಿದೆ.

ಆತಂಕ: ಕೇಂದ್ರ ಬರ ಅಧ್ಯಯನ ತಂಡ ತನ್ನ ಪ್ರವಾಸದಲ್ಲಿ ಕೈಗೊಂಡ ಅಧ್ಯಯನದ ವರದಿ ಸಲ್ಲಿಸಿದ ನಂತರ ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ಮಂಜೂರಾಗುವ ಸಾಧ್ಯತೆಗಳಿವೆ. ಇದೀಗ ಪಟ್ಟಿಯಲ್ಲಿನ ತಾಲೂಕುಗಳಲ್ಲಿ ಅಧ್ಯಯನ ನಡೆಸದೇ ಇರುವುದು ಅಪಾರ ನಷ್ಟ ಅನುಭವಿಸಿರುವ ರೈತರಿಗೆ ಸಿಗಬೇಕಾದ ಬರ ಪರಿಹಾರ ಮತ್ತಷ್ಟು ತಡವಾಗುವ ಸಾಧ್ಯತೆಗಳು ದಟ್ಟವಾಗಿವೆ.

ಬೆಳೆಹಾನಿ: ಕೊಟ್ಟೂರು ತಾಲೂಕಿನಲ್ಲಿ 34,475 ಹೆಕ್ಟರ್ ಪ್ರದೇಶದ ಬೆಳೆಹಾನಿ ಸಂಭವಿಸಿದ್ದು, ಮುಂಗಾರಿನಲ್ಲಿ ಬಿದ್ದ ಮಳೆಯಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕೊಟ್ಟೂರು ತಾಲೂಕು ಮೊದಲ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಅನರ್ಹಗೊಂಡಿತು. ಮಳೆ ಅಲ್ಪಸ್ವಲ್ಪ ಬಂದಿದ್ದರೂ ನಂತರದಲ್ಲಿ ಪೂರ್ಣ ಮಳೆ ಕೈಕೊಟ್ಟಿದ್ದು ಬಿತ್ತನೆಯಾಗಿದ್ದ ಪೂರ್ಣ ಪ್ರಮಾಣದ ಬೆಳೆಗಳಾದ ಮೆಕ್ಕೆಜೋಳ, ರಾಗಿ, ಜೋಳ, ಇತರ ಬೆಳೆಗಳು ಸಂಪೂರ್ಣ ಹಾಳಾಗಿ ಹೋಗಿವೆ. ಪರಿಸ್ಥಿತಿ ಹೀಗಿದ್ದರೂ ಬರ ಪಟ್ಟಿಗೆ ಕೊಟ್ಟೂರು ಸೇರ್ಪಡೆಗೊಳ್ಳಲು ಅವಕಾಶ ದೊರಕಿರಲಿಲ್ಲ.

ಮುಂಗಾರು ಬೆಳೆ ಹಾಳಾಗಿದ್ದರಿಂದ ರೈತರು ಅವುಗಳನ್ನು ನಿರ್ಮೂಲನೆ ಮಾಡಿ ಹಿಂಗಾರು ಮಳೆಯಲ್ಲಿಯಾದರೂ ಬಿತ್ತನೆ ಮಾಡುವ ಆಶಯ ಹೊಂದಿದ್ದರು. ಈಗ ಆ ಆಶಾಭಾವನೆ ಸಹ ರೈತರಲ್ಲಿ ಕಮರಿದೆ. ಬಿತ್ತನೆಯಾಗಿದ್ದ 28,000 ಹೆಕ್ಟೇರ್‌ ಪ್ರದೇಶಗಳಲ್ಲಿ ತೇವಾಂಶದ ಕೊರತೆಯಿಂದ ಬೆಳೆಗಳು ಬಾಡಿ ಹೋಗಿವೆ. ಆಗಾಗ ಬೀಳುವ ಅಲ್ಪ ಮಳೆಗೆ ರೈತರು ಕೃಷಿ ಚಟುವಟಿಕೆ ಕೈಗೊಳ್ಳುವ ಪ್ರಯತ್ನ ಸಾಗಿಸಿದ್ದಾರೆ. ಅಲ್ಲದೇ ಮತ್ತೆ ಕೆಲವರು ಹೊಲಗಳಲ್ಲಿನ ಹಾಳಾದ ಬೆಳೆ ತಿನ್ನಲು ಕುರಿಗಳನ್ನು ಬಿಡ ತೊಡಗಿದ್ದಾರೆ.

ಕೊಟ್ಟೂರು ತಾಲೂಕಿನಲ್ಲಿ ತೀವ್ರ ಬರ ಇದ್ದರೂ ಸರ್ಕಾರ ಮೊದಲ ಪಟ್ಟಿಯಲ್ಲಿ ಸೇರಿಸದೇ ತಾರತಮ್ಯ ಮಾಡಿತ್ತು. ಸರ್ಕಾರದ ಮೇಲೆ ನಿರಂತರ ಒತ್ತಡ ತಂದ ಹಿನ್ನೆಲೆ ಬರಪಟ್ಟಿಯಲ್ಲಿ ಇತ್ತೀಚಿಗೆ ಸೇರಿಸಿದೆ. ಆದರೂ ಕೇಂದ್ರ ಅಧ್ಯಯನ ತಂಡ ಸೋಮವಾರ ತಾಲೂಕಿನಲ್ಲಿ ಅಧ್ಯಯನ ಮಾಡದಿರುವುದು ಸಹಜವಾಗಿ ರೈತರಲ್ಲಿ ಅಸಮಾಧಾನ ತಂದಿದೆ. ಬರ ಪರಿಹಾರ ರೈತರಿಗೆ ಸೂಕ್ತ ಪ್ರಮಾಣದಲ್ಲಿ ಸಿಗುವಂತಾಗಬೇಕು ಎಂದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ನೇಮರಾಜ್ ನಾಯ್ಕ ತಿಳಿಸಿದ್ದರು.

ಕೊಟ್ಟೂರು-ಕೂಡ್ಲಿಗಿ ತಾಲೂಕು ಎರಡನೇ ಹಂತದ ಬರ ಘೋಷಣೆಯಾದ ಹಿನ್ನೆಲೆ ಕೇಂದ್ರ ಅಧ್ಯಯನ ತಂಡ ಸೋಮವಾರ ಕೈಗೊಳ್ಳುವ ಪ್ರವಾಸ ಪಟ್ಟಿಯಲ್ಲಿ ಸೇರಿಕೊಂಡಿಲ್ಲ. ಇದರ ಬದಲಾಗಿ ಕೂಡ್ಲಿಗಿಯಲ್ಲಿ ಕೇಂದ್ರ ತಂಡ ಅಧಿಕಾರಿಗಳೊಂದಿಗೆ ಸಭೆ ನಡೆಸುವುದು ನಿಗದಿಯಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಕೃಷಿಯಾಧಿಕಾರಿ ತಿಳಿಸಿದ್ದಾರೆ.