ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕದಲ್ಲಿ ಮಾವು ಬೆಳೆಗಾರರಿಗೆ ಕೊರತೆ ಬೆಲೆ ಪಾವತಿ ಹಾಗೂ ಮಾರುಕಟ್ಟೆ ಮಧ್ಯಸ್ಥಿಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಇದರಿಂದ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಮಾವು ಬೆಳೆಗಾರರಿಗೆ ಅನುಕೂಲ ಆಗಲಿದೆ.ಈ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಳೆದ ಜೂ.22ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಮಾಡಿದ್ದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ.
2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಒಪ್ಪಿಗೆ:ದೇವೇಗೌಡರ ಪತ್ರಕ್ಕೆ ಪ್ರತಿಕ್ರಿಯಿಸಿ ಪತ್ರ ಬರೆದಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸರ್ಕಾರ ಕರ್ನಾಟಕದಲ್ಲಿ 2025-26ನೇ ಮಾರುಕಟ್ಟೆ ಋತುವಿನಲ್ಲಿ ಬೆಲೆ ಕೊರತೆ ಪಾವತಿ ಯೋಜನೆಯಡಿ ಕ್ವಿಂಟಲ್‌ಗೆ 1,616 ರು. ಮಾರುಕಟ್ಟೆ ಹಸ್ತಕ್ಷೇಪ ಬೆಲೆಯಲ್ಲಿ 2.5 ಲಕ್ಷ ಮೆಟ್ರಿಕ್ ಟನ್ ಮಾವಿನಹಣ್ಣಿನ ಖರೀದಿಗೆ ಅನುಮೋದಿಸಿದೆ. ಸಕಾಲಿಕ ಮಾರುಕಟ್ಟೆ ಮಧ್ಯಸ್ಥಿಕೆ ಮೂಲಕ ರೈತರನ್ನು ಬೆಂಬಲಿಸಲು ಕೇಂದ್ರ ಬದ್ಧವಾಗಿದ್ದು, ಬೆಳೆಗಾರರ ಉತ್ಪನ್ನಗಳಿಗೆ ನ್ಯಾಯಯುತ ಆದಾಯ ಖಚಿತಪಡಿಸುತ್ತದೆ ಎಂದು ಕೇಂದ್ರ ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.
ಸಮಸ್ಯೆ ವಿವರಿಸಿ ಪತ್ರ ಬರೆದಿದ್ದ ಎಚ್‌ಡಿಡಿ:ಕರ್ನಾಟಕದ ಮಾವು ಬೆಳೆಗಾರರನ್ನು ಬೆಂಬಲಿಸಲು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು. ಕಡಿಮೆ ಇಳುವರಿ, ಹವಾಮಾನ ವೈಪರೀತ್ಯ ಮತ್ತು ಮಾವಿನಹಣ್ಣಿನ ಅಂತರಾಜ್ಯ ಸಾಗಣೆ ಮೇಲಿನ ನಿರ್ಬಂಧಗಳಿಂದ ತೀವ್ರ ಬೆಲೆ ಕುಸಿತವಾಗಿದೆ. ವಿಶೇಷವಾಗಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಬೆಂಗಳೂರು ಬೆಳೆಗಾರರ ನೆರವಿಗೆ ಬರಬೇಕು ಎಂದು ದೇವೇಗೌಡರು ಪತ್ರದಲ್ಲಿ ವಿವರಿಸಿದ್ದರು.
ನಫೇಡ್ ಮತ್ತು ಎನ್‌ಸಿಸಿಎಫ್ ಮೂಲಕ ಮಾವಿನ ಖರೀದಿಗಾಗಿ ಬೆಲೆ ಕೊರತೆ ಪಾವತಿ (ಪಿಡಿಪಿ) ಮತ್ತು ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯನ್ನು (ಎಂಐಎಸ್) ಪ್ರಾರಂಭಿಸುವಂತೆಯೂ ದೇವೇಗೌಡರು ಕೇಂದ್ರಕ್ಕೆ ಮನವಿ ಮಾಡಿದ್ದರು.;Resize=(128,128))
;Resize=(128,128))