ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಲೆ ಏರಿಕೆ ವಿರೋಧಿಸಿ ಜನಾಕ್ರೋಶ ಯಾತ್ರೆ ಮಾಡುತ್ತಿರುವ ಬಿಜೆಪಿಯವರಿಗೆ ಮಾನ, ಮರ್ಯಾದೆ ಏನೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಸಿದವರು ಯಾರು?. ಇದಕ್ಕೆ ಬಿಜೆಪಿಯವರು ಉತ್ತರ ಏನು ಹೇಳುತ್ತಾರೆ?. ಬೆಲೆ ಏರಿಕೆಗೆ ಮೋದಿ ಸರ್ಕಾರ ಕಾರಣ. ಕರ್ನಾಟಕದಲ್ಲಿ ಎಲ್ಲ ವಲಯದಿಂದ ₹7-8 ಸಾವಿರ ಕೋಟಿ ತೆರಿಗೆ ಹೆಚ್ಚಳವಾಗಿರಬಹುದು. ಹಾಲಿನ ಹೆಚ್ಚಿನ ದರ ಸರ್ಕಾರಕ್ಕೆ ಬರಲ್ಲ. ಅದು ರೈತರಿಗೆ ವರ್ಗಾವಣೆ ಆಗುತ್ತದೆ. ರೈತರಿಗೆ ಕೊಡಬೇಡಿ ಎಂದು ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆಯೇ?, ಇವರು ರೈತ ವಿರೋಧಿಗಳೇ ಎಂದು ಪ್ರಶ್ನಿಸಿದರು.
ಗ್ಯಾಸ್ ಬೆಲೆ ಹೆಚ್ಚಳ ಏಕೆ ಮಾಡಿದ್ದಾರೆ?. ಕಚ್ಚಾತೈಲ ಬೆಲೆ ಈಗ ಏನಿದೆ?. ಮನಮೋಹನ ಸಿಂಗ್ ಅವರ ಕಾಲದಲ್ಲಿ ಒಂದು ಬ್ಯಾರಲ್‌ಗೆ 120 ಡಾಲರ್ ಇದ್ದ ಬೆಲೆ ಈಗ 65 ಡಾಲರ್‌ಗೆ ಇಳಿಕೆಯಾಗಿದೆ. ಆದಾಗ್ಯೂ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಈಗ ಏಕೆ ಹೆಚ್ಚು ಮಾಡಿದ್ದೀರಿ?. ಬೆಲೆ ಏರಿಕೆ ಆಗಿರುವುದು ಬಿಜೆಪಿ ಕಾಲದಲ್ಲಿ. ಕೇಂದ್ರ ಸರ್ಕಾರದ ತಪ್ಪು ನೀತಿಯಿಂದಾಗಿ ಬೆಲೆ ಏರಿಕೆಯಾಗಿದೆ. ಸಿಂಗ್ ಅವರ ಕಾಲದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ₹ 400 ಇತ್ತು. ಸಬ್ಸಿಡಿ ನೀಡುತ್ತ ಬಂದಿದ್ದೇವು. ಆದರೆ, ಮೋದಿ ಸರ್ಕಾರ ಸಬ್ಸಿಡಿ ತೆಗೆದು ಹಾಕಿದೆ. ಅಡುಗೆ ಅನಿಲ ಬೆಲೆಯನ್ನು ಹೆಚ್ಚಳ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ ಎಂಬ ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸರ್ಕಾರದ ಆರ್ಥಿಕ ದಿವಾಳಿಗೆ ಬಿಜೆಪಿಯವರೇ ಕಾರಣ. ಅವರ ಕಾಲದಲ್ಲಿ ಕಾಮಗಾರಿಗಳಿಗೆ ಟೆಂಡರ್ ಕರೆದು ದುಡ್ಡು ಹೊಡೆದು ಹೋದರು. ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಕಾಲದಲ್ಲೇ ರಾಜ್ಯದ ಆರ್ಥಿಕ ವ್ಯವಸ್ಥೆ ಹಾಳಾಗಿ ಹೋಗಿದೆ. ನಮ್ಮ ಅವಧಿಯಲ್ಲಿ ಸರ್ಕಾರಿ ನೌಕರರ ಸಂಬಳ ನಿಂತು ಹೋಗಿದೆಯೇ?. ಸಾಮಾಜಿಕ ಪಿಂಚಣಿ ನಿಂತಿದೆಯೇ? ಹಾಗಿದ್ದ ಮೇಲೆ ದಿವಾಳಿತನ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ಜಗದೀಶ ಶೆಟ್ಟರ್ ಪ್ರತಿಪಕ್ಷ ನಾಯಕರಾಗಲು ಅಸಮರ್ಥರಾಗಿದ್ದರು. ಮುಖ್ಯಮಂತ್ರಿಯಾಗಲು ಕೂಡ ಅಸಮರ್ಥರಾಗಿದ್ದರು. ನಮ್ಮ ಪಕ್ಷಕ್ಕೆ ಬಂದಿದ್ದರು. ಇಲ್ಲಿ ಎಂಎಲ್‌ಸಿ ಆಗಿ ಮಜಾ ಮಾಡಿ, ಅಲ್ಲಿಗೆ ಹೋದರು ಎಂದು ಆರೋಪಿಸಿದರು.
ಜಾತಿ ಗಣತಿ ಬಗ್ಗೆ ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಪ್ರತಿಯೊಂದು ಕುಟುಂಬ ಆರ್ಥಿಕವಾಗಿ, ಸಾಮಾಜಿಕವಾಗಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕೆ?, ಬೇಡವೇ ಎಂದರು. ಜಾತಿ ಗಣತಿ ಕಾರ್ಯದಲ್ಲಿ ತೊಡಗಿದ್ದ ಸುಮಾರು 1.33 ಲಕ್ಷ ಶಿಕ್ಷಕರಲ್ಲಿ ಎಲ್ಲ ಸಮುದಾಯದವರೂ ಇದ್ದರು. ಹೇಗೆ ಸರ್ವೇ ಆಗಿಲ್ಲ ಎಂದು ಹೇಳುತ್ತೀರಿ ಎಂದು ಪ್ರಶ್ನಿಸಿದರು.2011ರಲ್ಲಿ ಜನಗಣತಿ ಆಗಿತ್ತು. ಅದು ಕೂಡ ನೂರಕ್ಕೆ ನೂರರಷ್ಟು ಆಗಿದೆಯಾ?. ಜಾತಿ ಗಣತಿ ವರದಿಯನ್ನು ನೇರವಾಗಿ ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ಬಾರದು. ಈ ವರದಿಯನ್ನು ಕ್ಯಾಬಿನೆಟ್‌ನಲ್ಲಿ ಮಂಡಿಸಿ, ವಿಸ್ತೃತವಾಗಿ ಚರ್ಚಿಸಿದ ಬಳಿಕ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.
ಬೆಳಗಾವಿಯನ್ನು ಯಾವ ಕಾರಣಕ್ಕೂ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರ ಸರ್ಕಾರ ಬೆಳಗಾವಿಯಲ್ಲಿ ಸ್ಮೃತಿ ಭವನ ನಿರ್ಮಿಸುತ್ತಿದೆ. ನಾವು ಕೂಡ ದಿಲ್ಲಿಯಲ್ಲಿ ಕರ್ನಾಟಕ ಭವನ ನಿರ್ಮಿಸಿದ್ದೇವೆ. ಒಕ್ಕೂಟ ವ್ಯವಸ್ಥೆಯಲ್ಲಿ, ಸಂವಿಧಾನದಲ್ಲಿ ಇದಕ್ಕೆ ಅವಕಾಶಗಳಿವೆ. ಆದರೆ, ನಮ್ಮ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳಲು ಬಾರದು. ಯಾವುದೇ ಕಾರಣಕ್ಕೂ ಬೆಳಗಾವಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.