ಸಾರಾಂಶ
ದಾವಣಗೆರೆ : ಜಾತಿಗಣತಿಗೆ ಮುಂದಾಗಿರುವ ಕೇಂದ್ರ ಸರ್ಕಾರದವರು ರಾಹುಲ್ ಗಾಂಧಿ ಅವರನ್ನು ಕಾಪಿ ಮಾಡುತ್ತಿದ್ದಾರೆ. ಅವರೇನು ಮಾಡುತ್ತಾರೋ ಮಾಡಲಿ. ನಮ್ಮದು ಅಭ್ಯಂತರವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿಗೆ ಮುಂದಾಗುವ ಮೂಲಕ ಕೇಂದ್ರ ಸರ್ಕಾರದವರು ರಾಹುಲ್ ಗಾಂಧಿ ಅವರನ್ನು ಕಾಪಿ ಮಾಡುತ್ತಿದ್ದಾರೆ ಎಂದರು.
ದುರ್ಬಲ ವರ್ಗದವರಿಗೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಶಕ್ತಿ ತುಂಬಲು ನಾವು ಮರುಸಮೀಕ್ಷೆ ಮಾಡುತ್ತಿದ್ದೇವೆ. ನಿಯಮಾನುಸಾರ ಮರುಸಮೀಕ್ಷೆ ಕೈಗೊಳ್ಳಲು ನಮ್ಮ ಸರ್ಕಾರ ಮುಂದಾಗಿದೆ. ಕಾಂತರಾಜು ಆಯೋಗದ ವರದಿ ಜಾರಿಯಾಗಿದ್ದರೆ ಹಿಂದುಳಿದ ವರ್ಗಕ್ಕೆ ಶಕ್ತಿ ಬರುತ್ತಿತ್ತು ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ವಿಮಾನ ದುರಂತ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ: ಡಿಕೆಶಿ
ಅಹಮದಾಬಾದ್ ವಿಮಾನ ದುರಂತದ ಕುರಿತು ನಾವು ಯಾವುದೇ ರಾಜಕೀಯ ಮಾಡುವುದಿಲ್ಲ. ಹೆಣದ ಮೇಲೆ ರಾಜಕೀಯ ಮಾಡುವುದೇನಿದ್ದರೂ ಬಿಜೆಪಿ ಮತ್ತು ಜೆಡಿಎಸ್ ಕೆಲಸ. ನಾವು ಅವರಂತೆ ನೀಚ ರಾಜಕೀಯ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ವಿಮಾನ ಅಪಘಾತದಂಥ ದುರ್ಘಟನೆ ದೇಶದಲ್ಲಿ ಮಾತ್ರವಲ್ಲ, ಪ್ರಪಂಚದಲ್ಲಿ ಎಲ್ಲೂ ಸಂಭವಿಸಬಾರದು. ವಿಮಾನ ಅಪಘಾತಕ್ಕೀಡಾದ ಸ್ಥಳ ನೋಡಿದರೆ ಅಘಾತವಾಗುತ್ತದೆ. ವಿಮಾನ 500 ಮೀಟರ್ ಮುಂದೆ ಹೋಗಿ ಅಪ್ಪಳಿಸಿದ್ದರೆ ಸಾವಿರಾರು ಮಂದಿ ಸಾವಿಗೀಡಾಗುತ್ತಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಾವು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದೆವು. ವಿಮಾನ ಅಪಘಾತದಿಂದ ಗಾಯಗೊಂಡಿರುವ ವೈದ್ಯಕೀಯ ವಿದ್ಯಾರ್ಥಿಗಳನ್ನೂ ಮಾತನಾಡಿಸಿ, ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ ಎಂದರು.
ವಿಮಾನ ಅಪಘಾತ ನಂತರ ನಾಗರಿಕ ವಿಮಾನಯಾನ ಸಚಿವರ ಕಾರ್ಯವೈಖರಿ ಕುರಿತು ಪ್ರಶ್ನೆ ಮೂಡುತ್ತಿರುವ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ-ಜೆಡಿಎಸ್‌ನವರಿಗೆ ಹೆಣದ ಮೇಲೆ ರಾಜಕೀಯ ಮಾಡುವುದೇ ಕೆಲಸ. ಆದರೆ, ನಾವು ಅವರ ಮಟ್ಟಕ್ಕೆ ಇಳಿಯುವುದಿಲ್ಲ. ಈ ವಿಚಾರದಲ್ಲಿ ಅನೇಕ ತಾಂತ್ರಿಕ ಅಂಶಗಳಿವೆ. ಅವುಗಳ ಬಗ್ಗೆ ಮಾತನಾಡಲು ನಾನು ತಜ್ಞನಲ್ಲ. ಈ ವಿಚಾರವನ್ನು ರಾಜಕೀಯಗೊಳಿಸುವ ವ್ಯಕ್ತಿ ನಾನಲ್ಲ. ಈ ಸಮಯದಲ್ಲಿ ಕೇಂದ್ರ ಸಚಿವರನ್ನು ಟೀಕಿಸುವುದಿಲ್ಲ. ಇದು ದೇಶದ ಗಂಭೀರ ವಿಚಾರ ಎಂದು ಹೇಳಿದರು.