ಕೇಂದ್ರದ ಎನ್‌ಇಪಿ ಅರ್ಥಹೀನ: ಪ್ರೊ.ರಾಮ್‌ ರಾಮಸ್ವಾಮಿ

| Published : Oct 19 2024, 12:15 AM IST

ಕೇಂದ್ರದ ಎನ್‌ಇಪಿ ಅರ್ಥಹೀನ: ಪ್ರೊ.ರಾಮ್‌ ರಾಮಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಜ್ಞಾನ-ವಿಜ್ಞಾನ ಸಮಿತಿಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಗರದ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿಆರಂಭವಾದ ಎರಡು‌ ದಿನಗಳ ಟೀಚರ್ ಶೈಕ್ಷಣಿಕ ಹಬ್ಬದಲ್ಲಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮ್ ರಾಮಸ್ವಾಮಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ದೇಶದ ಶಿಕ್ಷಣ ನೀತಿಯಲ್ಲಿ ಬದಲಾವಣೆ ಅಗತ್ಯವಾಗಿತ್ತು, ಆದರೆ ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅರ್ಥಹೀನವಾದುದು, ಈ‌ ನೀತಿಯಲ್ಲಿ ಹಲವಾರು ಮಿತಿಗಳಿವೆ. ಆದ್ದರಿಂದ ಈ ನೀತಿಯನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂದು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮ್ ರಾಮಸ್ವಾಮಿ ಹೇಳಿದ್ದಾರೆ.

ಭಾರತ ಜ್ಞಾನ-ವಿಜ್ಞಾನ ಸಮಿತಿಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಗರದ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿಆರಂಭವಾದ ಎರಡು‌ ದಿನಗಳ ಟೀಚರ್ ಶೈಕ್ಷಣಿಕ ಹಬ್ಬದಲ್ಲಿ ಅವರು ಮಾತನಾಡಿದರು.

ನೂತನ ಎನ್ಇಪಿಯಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನಾನೂಕೂಲವಾಗಲಿದೆ ಮತ್ತು ಸಮಾಜದಲ್ಲಿ ಶೈಕ್ಷಣಿಕ ಅಸಮಾನತೆ ಹೆಚ್ಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಲ್ಲಿ ದೇಶದ ಔಷಧಿ ವಿಜ್ಞಾನ, ವೈದ್ಯಕೀಯ ಶಿಕ್ಷಣ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಯಿಂದಾಗಿ ನಮ್ಮ ಜೀವಿತಾವಧಿ ಹೆಚ್ಚಾಗಿದೆ. ಆದರೆ ಜನಸಂಖ್ಯೆಯ ಪ್ರಮಾಣದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚುತ್ತಿಲ್ಲ. ಈಗಲೂ ನಮ್ಮ ದೇಶದಲ್ಲಿ ಶೇ 25ರಷ್ಟು ಜನರು ಅನಕ್ಷರಸ್ಥರಾಗಿದ್ದಾರೆ. ಕಡ್ಡಾಯ ಪ್ರಾಥಮಿಕ ಶಿಕ್ಷಣವು ಜಾರಿಯಾಗಿಲ್ಲ ಎಂದರು.

ದೇಶದ ಜಿಡಿಪಿಯಲ್ಲಿ ಶೇ 6ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕೆಂದು ಕೊಠಾರಿ ಆಯೋಗ ಶಿಫಾರಸು ಮಾಡಿತ್ತು. ಆದರೆ ನಮ್ಮ ಸರ್ಕಾರಗಳು ಶೇ 3ರಷ್ಟು ಕೂಡ ಮೀಸಲಿರಿಸದಿರುವುದು ದುರಂತ ಎಂದರು.

ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಮಾತನಾಡಿ, ಸರ್ಕಾರದ ನಿರ್ಲಕ್ಷ ನೀತಿಯಿಂದಾಗಿಯೇ ಅನುದಾನಿತ ಶಿಕ್ಷಣ ಸಂಸ್ಥೆಗಳು ಮುಚ್ಚುತ್ತಿವೆ. ಇರುವ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಹೊಸ ನೇಮಕಾತಿ ನಡೆಯುತ್ತಿಲ್ಲ. ಜೊತೆಗೆ ಸರ್ಕಾರಗಳು ಆಂಗ್ಲ ಮಾಧ್ಯಮ ಶಾಲೆಗಳಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿವೆ ಎಂದು ವಿಷಾದಿಸಿದರು.

ಉನ್ನತ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳು ತಮ್ಮ ಅನೇಕ ಅಧಿಕಾರವನ್ನೇ ಕಳೆದುಕೊಂಡಿವೆ. ಕುಲಪತಿಗಳು ಸರ್ಕಾರದ ಗುಲಾಮರಾಗಿ ಬದಲಾಗಿದ್ದಾರೆ. ವಿ.ವಿ.ಗಳಲ್ಲಿಯೂ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಆಪಾದಿಸಿದರು.

ಜ್ಞಾನಿವಿಜ್ಞಾನ ಸಮಿತಿ ಕೋಶಾಧಿಕಾರಿ ಪ್ರೊ. ಕಮಲ್‌ ಲೊಡಾಯ ಅಧ್ಯಕ್ಷತೆ ವಹಿಸಿದ್ದರು. ವಿಷಯ ತಜ್ಞರಾದ ಶುಭಂಕರ್ ಚಕ್ರವರ್ತಿ, ಪ್ರಶಾಂತ್‌ ಬಾಬು, ಕಾರ್ಯಕ್ರಮದ ಸಂಘಟಕ ಉದಯ್ ಗಾಂವಕರ್, ಅಭಿಲಾಶಾ, ಸಂತೋಷ್ ನಾಯಕ್ ಪಟ್ಲ ಇದ್ದರು.