ಸಾರಾಂಶ
* ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಭಿಮತ
ಕನ್ನಡಪ್ರಭ ವಾರ್ತೆ ಜಗಳೂರುಸ್ವಯಂ ಉದ್ಯೋಗ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ "ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಸಾಲ’ ಯೋಜನೆಯ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ವ್ಯಾಪಾರಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿರಿ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಸ್. ಪ್ರಕಾಶ್ ಹೇಳಿದರು.
ಪಟ್ಟಣದಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ ಯಾವುದೇ ಭದ್ರತೆ ಇಲ್ಲದೆ ಪ್ರತಿ ಬೀದಿ ಬದಿ ವ್ಯಾಪಾರಿಗೆ ಎಲ್ಲಾ ಬ್ಯಾಂಕ್ ಗಳಲ್ಲಿ ವ್ಯಾಪಾರಕ್ಕಾಗಿ ತಲಾ ₹೧೦ ಸಾವಿರ ಸಾಲ ನೀಡಲಾಗುತ್ತದೆ. ಅದನ್ನು ನಿಗದಿತ ಅವಧಿಯಲ್ಲಿ ಮರು ಪಾವತಿಸಿದಲ್ಲಿ ಹಂತ ಹಂತವಾಗಿ ₹೫೦ ಸಾವಿರದವರೆಗೆ ಸಾಲ ನೀಡಲಾಗುತ್ತದೆ. ಸಣ್ಣ ವ್ಯಾಪಾರಿಗಳು ಈ ಯೋಜನೆಯ ಲಾಭ ಪಡೆದು ತಮ್ಮ ವ್ಯಾಪಾರ ನಡೆಸಬಹುದಾಗಿದೆ. ಸ್ವಸಹಾಯ ಸಂಘಗಳು ಮತ್ತು ಪಿಎಂಇಜಿಪಿ ಯೋಜನೆಯಡಿ ನಿರುದ್ಯೋಗಿ ಯುವಜನರಿಗೆ ಸಾಲ ನೀಡಲಾಗುತ್ತದೆ ಎಂದು ವಿವರಿಸಿದರು.ಕೆನರಾಬ್ಯಾಂಕ್ ವ್ಯವಸ್ಥಾಪಕ ಹಣಮಂತ ಬೈರಗೊಂಡ ಮಾತನಾಡಿ ‘ಮುದ್ರಾ’ ಮುಂತಾದ ಯೋಜನೆಗಳಲ್ಲಿ ಯಾವುದೇ ಭದ್ರತೆ ಇಲ್ಲದೆ ₹೧೦ ಲಕ್ಷದವರೆಗೆ ಸ್ವಯಂ ಉದ್ಯೋಗ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುತ್ತಿದ್ದು, ಗ್ರಾಹಕರು ಶ್ರದ್ಧೆ ಮತ್ತು ಪರಿಶ್ರಮದಿಂದ ಚಿಕ್ಕ ಪ್ರಮಾಣದಲ್ಲಿ ವ್ಯಾಪಾರ, ಉದ್ದಿಮೆಗಳ ಪ್ರಾರಂಭಿಸಿ ಯಶಸ್ಸು ಪಡೆಯಬಹುದಾಗಿದೆ. ಮುಖ್ಯವಾಗಿ ಸಿಬಿಲ್ ಸ್ಕೋರ್ ನ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್ ಮಾತನಾಡಿ ಕೇಂದ್ರ ಸರ್ಕಾರದ ಮಹತ್ವದ ಆಯುಷ್ಮಾನ್ ಯೋಜನೆಯಡಿ ರು.೫ ಲಕ್ಷದವರೆಗೆ ಉಚಿತ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ಸರ್ಕಾರದ ಎಲ್ಲಾ ಯೋಜನೆಗಳ ಮಾಹಿತಿಯ ಬಗ್ಗೆ ಜನಸಾಮಾನ್ಯರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಸಂಕಲ್ಪ ಯಾತ್ರೆ ದೇಶಾದ್ಯಂತ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ರಶ್ಮಿರೇಖಾ, ಕೆಜಿಬಿ ವ್ಯವಸ್ಥಾಪಕ ಪ್ರದೀಪ್, ಮಂಜುನಾಥ್, ಲಕ್ಷ್ಮೀಪತಿ ಗೌಡ, ಬಸಪ್ಪ , ಪ.ಪಂ.ಸದಸ್ಯ ಪಾಪಲಿಂಗಪ್ಪ ಸೇರಿ ಇತರರಿದ್ದರು.