ಕನ್ನಡಪ್ರಭ ವಾರ್ತೆ ಬಾಗಲಕೋಟೆಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಕೊಠಡಿಗಳ ಸುಸ್ಥಿತಿ ಕುರಿತು ಪರಿಶೀಲನೆ ನಡೆಸಲಾಗಿದ್ದರೂ ಮುಗುಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯ ಚಾವಣಿ ಕುಸಿದಿರುವುದು ಗಂಭೀರ ವಿಚಾರವಾಗಿದೆ. ಶಾಲೆಗಳಿಗೆ ತೆರಳಿ ಖುದ್ದಾಗಿ ಪರಿಶೀಲಿಸದೆ, ವರದಿ ನೀಡಿರುವ ಪಂಚಾಯತ್‌ ರಾಜ್ ಇಲಾಖೆಯ ಇಬ್ಬರು ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಜಿಪಂ ಸಿಇಒ ಗಜಾನನ ಬಾಲೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಕೊಠಡಿಗಳ ಸುಸ್ಥಿತಿ ಕುರಿತು ಪರಿಶೀಲನೆ ನಡೆಸಲಾಗಿದ್ದರೂ ಮುಗುಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯ ಚಾವಣಿ ಕುಸಿದಿರುವುದು ಗಂಭೀರ ವಿಚಾರವಾಗಿದೆ. ಶಾಲೆಗಳಿಗೆ ತೆರಳಿ ಖುದ್ದಾಗಿ ಪರಿಶೀಲಿಸದೆ, ವರದಿ ನೀಡಿರುವ ಪಂಚಾಯತ್‌ ರಾಜ್ ಇಲಾಖೆಯ ಇಬ್ಬರು ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಜಿಪಂ ಸಿಇಒ ಗಜಾನನ ಬಾಲೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಗುರುವಾರ ಮುಗುಳೊಳ್ಳಿ ತಾಂಡಾ ಸರ್ಕಾರಿ ಶಾಲೆಯ ಚಾವಣಿ ಕುಸಿದ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯತ್‌ ರಾಜ್, ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣ ಕುಡಿಯುವ ನೀರು ಯೋಜನೆಯ ಅಧಿಕಾರಿಗಳೊಂದಿಗೆ ಜರುಗಿದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಗುಳೊಳ್ಳಿ ಶಾಲೆಯ ಕೊಠಡಿಗಳು ಸುಸ್ಥಿತಿಯಲ್ಲಿವೆ ಎಂದು ವರದಿ ನೀಡಿದ್ದು, ಮಳೆ ಬಂದಾಗ ಎರಡು ಕೊಠಡಿಗಳು ಮಾತ್ರ ಸೋರುತ್ತವೆ ಎಂದು ನಮೂದಿಸಲಾಗಿತ್ತು. ಆದರೆ, ಇದೇ ಶಾಲೆಯ ಕೊಠಡಿಯ ಚಾವಣಿ ಕುಸಿದು ಘಟನೆ ಸಂಭವಿಸಿರುವುದರಿಂದ ಪರಿಶೀಲನಾ ವರದಿಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಮೂಡಿತು. ಈ ಹಿನ್ನೆಲೆಯಲ್ಲಿ ಸುಸ್ಥಿತಿ ಇದೆ ಎಂದು ವರದಿ ನೀಡಿದ ಇಬ್ಬರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದರು.

ಶಾಲೆಗಳಿಗೆ ಕೇವಲ ನೀರು ಪೂರೈಸಿದರೆ ಸಾಲದು, ಪೂರೈಕೆಯಾಗುವ ನೀರಿನ ಗುಣಮಟ್ಟ ಹಾಗೂ ಸಂಗ್ರಹಿಸುವ ಟ್ಯಾಂಕ್‌ ಗಳ ಸ್ವಚ್ಛತೆಯನ್ನೂ ನಿಯಮಿತವಾಗಿ ಪರಿಶೀಲಿಸಬೇಕು. ಟ್ಯಾಂಕರ್‌ ಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕು. ಹುನಗುಂದ ತಾಲೂಕಿನಲ್ಲಿ ಶಾಲೆಯೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀರಿನ ಟ್ಯಾಂಕ್ ಸ್ವಚ್ಛವಾಗಿರದಿರುವುದು ಗಮನಕ್ಕೆ ಬಂದಿದ್ದು, ಸಂಬಂಧಿಸಿದ ಶಾಲೆಯ ಮುಖ್ಯಶಿಕ್ಷಕರಿಗೆ ನೋಟಿಸ್ ನೀಡಿ ಕ್ರಮಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಕಂಪೌಂಡ್, ಶಾಲಾ ಆವರಣ, ಕಟ್ಟಡ, ಚಾವಣಿ, ಕುಡಿಯುವ ನೀರು ಹಾಗೂ ಇತರೆ ಸುರಕ್ಷತಾ ಅಂಶಗಳನ್ನು ಮುಂಜಾಗ್ರತಾ ಕ್ರಮಕ್ಕಾಗಿ ಅಭಿಯಾನದ ರೂಪದಲ್ಲಿ ಕೆಲಸ ನಿರ್ವಹಿಸಲು ಸೂಚಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಹಂತದ ಶಾಲೆಯ ಮುಖ್ಯ ಗುರುಗಳಿಗೆ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು. ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಬೇಜವಾಬ್ದಾರಿತನ ತೋರುವವರ ಮೇಲೆ ನಿರ್ಧಾಕ್ಷಣ್ಯವಾಗಿ ಕ್ರಮಕೈಗೊಳ್ಳು ಕಟ್ಟುನಿಟ್ಟಿನ ಸೂಚನೆ ನೀಡಿದರು.ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಅಲ್ಲಮಪ್ರಭು ಅಲ್ಲಾಪೂರ, ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಕಾಂಬಳೆ, ಶಾಲಾ ಶಿಕ್ಷಣ ಇಲಾಖೆಯ ಉಪ ಸಮನ್ವಯಾಧಿಕಾರಿ ಪ್ರಮೋದಿನಿ ಬಲೂಲವಾಡಿ ಸೇರಿದಂತೆ ಪಿಆರ್ಇಡಿ, ಲೋಕೋಪಯೋಗಿ ಇಲಾಖೆಯ ಅಭಿಯಂತರರು ಹಾಗೂ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲೆಯ 1,424 ಶಾಲೆಗಳ 9,449 ಕೊಠಡಿಗಳ ಪೈಕಿ 6,961 ಕೊಠಡಿಗಳು ಸುಸ್ಥಿತಿಯಲ್ಲಿದ್ದು, 1,232 ಕೊಠಡಿಗಳು ಸಣ್ಣ ಹಾಗೂ 1,535 ಕೊಠಡಿಗಳು ದೊಡ್ಡ ದುರಸ್ತಿಗೆ ಒಳಪಟ್ಟಿವೆ. ಪ್ರಸ್ತುತ 8,367 ಕೊಠಡಿಗಳು ತರಗತಿ ನಡೆಸಲು ಯೋಗ್ಯವಾಗಿದ್ದು, 628 ಕೊಠಡಿಗಳು ಬೋಧನೆಗೆ ಯೋಗ್ಯವಲ್ಲ ಎಂದು ವರದಿ ನೀಡಲಾಗಿದೆ. ಮುಗುಳೊಳ್ಳಿ ಶಾಲೆಯ ಘಟನೆ ಹಿನ್ನಲೆಯಲ್ಲಿ ಬೋಧನೆಗೆ ಯೋಗ್ಯವಲ್ಲದ 628 ಶಾಲಾ ಕೊಠಡಿಗಳ ಮರು ಪರಿಶೀಲನೆಗೆ 15 ದಿನಗಳ ಕಾಲಾವಕಾಶ ನೀಡುವ ಮೂಲಕ ಜಿಒ ಟ್ಯಾಗ್ ಛಾಯಾಚಿತ್ರ ಒಳಗೊಂಡಂತೆ ಸಮಪರ್ಕ ವರದಿ ಸಲ್ಲಿಸಿ.-ಗಜಾನನ ಬಾಲೆ, ಸಿಇಒ, ಜಿಪಂ