ಚನ್ನಗಿರಿ ತಾಲೂಕಿನ ವಿವಿಧ ಗ್ರಾಮಗಳಿಗೆ ದಾವಣಗೆರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಶನಿವಾರ ಬೆಳಕಿನ ನಡೆ ಗ್ರಾಮಗಳ ಕಡೆ ಕಾರ್ಯಕ್ರಮದಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಮತ್ತು ಇವುಗಳ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಕುಂದುಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

- ಬೆಳಕಿನ ನಡೆ ಗ್ರಾಮಗಳ ಕಡೆ ಕಾರ್ಯಕ್ರಮ। ಗ್ರಾಮೀಣ ಸಮಸ್ಯೆಗಳ ಪರಿಶೀಲನೆ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ವಿವಿಧ ಗ್ರಾಮಗಳಿಗೆ ದಾವಣಗೆರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಶನಿವಾರ ಬೆಳಕಿನ ನಡೆ ಗ್ರಾಮಗಳ ಕಡೆ ಕಾರ್ಯಕ್ರಮದಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಮತ್ತು ಇವುಗಳ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಕುಂದುಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ತಾಲೂಕಿನ ಅಜ್ಜಿಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಜಲಜೀವನ ಮಿಷನ್ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸಿದರು. ಗ್ರಾಮಕ್ಕೆ ಬೇಕಾಗಿರುವ ಸೌಲಭ್ಯಗಳ ಕುರಿತಂತೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದರು.

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿದ ಅಧಿಕಾರಿಗಳು ಇದರ ಉತ್ತಮ ನಿರ್ವಹಣೆ ಹಾಗೂ ಸುಚಿತ್ವವನ್ನು ಗಮನಿಸಿ ಗ್ರಾ.ಪಂ ಪಿಡಿಒ ಸತೀಶ್ ಅವರನ್ನು ಪ್ರಶಂಸಿಸಿದರು. ಅನಂತರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದರು. ಇದೇ ಗ್ರಾಮದ ಗ್ರಂಥಾಲಯಕ್ಕೆ ಭೇಟಿ ನೀಡಿ ಕಟ್ಟಡಕ್ಕೆ ಅಕರ್ಷಕ ಬಣ್ಣ ಬಳಿಸುವಂತೆ ಹಾಗೂ ಗ್ರಾಮದ ಜನರು ಪ್ರತಿದಿನ ಗ್ರಂಥಾಲಯಕ್ಕೆ ಬಂದು ಸರ್ಕಾರದ ಯೋಜನೆಗಳು ಮತ್ತು ರಾಜ್ಯದ ಹಾಗುಹೋಗುಗಳ ಬಗ್ಗೆ ತಿಳಿದುಕೊಳ್ಳಬೇಕು. ಅನಂತರ ಸರ್ಕಾರಿ ಶಾಲೆಗೆ ಭೇಟಿ ನೀಡಿ ಶಾಲಾ ಕೊಠಡಿಗಳ ದುರಸ್ತಿ ಬಗ್ಗೆ ಪರಿಶೀಲನೆ ನಡೆಸಿದರು.

ತಾಲೂಕಿನ ಮರವಂಜಿ ಗ್ರಾಮದ ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಾಲಯದ ರಿಜಿಸ್ಟರ್‌ಗಳು, ದಾಸ್ತಾನಿನ ಪರಿಶೀಲನೆ ನಡೆಸಿದರು. ಅನಂತರ ಅದೇ ಗ್ರಾಮದಲ್ಲಿರುವ ಅಯುಷ್ ಮಾನ್ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಆಸ್ಪತ್ರೆಗೆ ಬೇಕಾದ ಮೂಲಸೌಲಭ್ಯಗಳು, ಔಷಧಿಗಳ ಬಗ್ಗೆ ಮಾಹಿತಿ ಪಡೆದರು. ಸರ್ಕಾರಿ ಶಾಲೆಗೆ ಭೇಟಿ ನೀಡಿ ಶಾಲೆಗೆ ಕಾಂಪೌಂಡ್, ಶೌಚಾಲಯ, ಆಟದ ಮೈದಾನವನ್ನು ಸ್ವಚ್ಛವಾಗಿ ಮಾಡಲು ನರೇಗಾ ಯೋಜನೆಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸ್ಥಳದಲ್ಲಿದ್ದ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಈಶ್ವರ್ ಅವರಿಗೆ ಸೂಚನೆ ನೀಡಿದರು.

ಅನಂತರ ಜಮ್ಮಾಪುರ, ಹೊನ್ನೇಬಾಗಿ, ಕೊರಟಿಕೆರೆ ಗ್ರಾಮಗಳ ಶುದ್ಧ ನೀರಿನ ಘಟಕ, ಸರ್ಕಾರಿ ಶಾಲೆ, ಗ್ರಂಥಾಲಯ ಪರಿಶೀಲನೆ ನಡೆಸಿದರು.

ಈ ಸಂದರ್ಭ ತಾಪಂ ಇಒ ಪ್ರಕಾಶ್, ಗ್ರಾಮೀಣ ಕುಡಿಯುವ ನೀರು ಯೋಜನೆಯ ಆಭಿಯಂತರ ಲೋಹಿತ್, ಈಶ್ವರ್, ಗ್ರಾ.ಪಂ.ಗಳ ಪಿಡಿಒಗಳು ಹಾಜರಿದ್ದರು.

- - -

-31ಕೆಸಿಎನ್ಜಿ3: ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿ ಸರ್ಕಾರಿ ಶಾಲೆಗೆ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು.

-31ಕೆಸಿಎನ್ಜಿ4: ಜಿಪಂ ಸಿಇಒ ಗ್ರಾಮದ ಕುಂದುಕೊರತೆಗಳ ಬಗ್ಗೆ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದರು.