ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಬದಿ ತ್ಯಾಜ್ಯ ತೆರವಿಗೆ ಜಿಪಂ ಸಿಇಒ ಸೂಚನೆ

| Published : May 17 2024, 12:31 AM IST

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಬದಿ ತ್ಯಾಜ್ಯ ತೆರವಿಗೆ ಜಿಪಂ ಸಿಇಒ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆಬದಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಸುರಿಯಲಾಗಿರುವ ತ್ಯಾಜ್ಯವನ್ನು ಮಳೆಗಾಲ ಪ್ರಾರಂಭವಾಗುವ ಮುಂಚಿತವಾಗಿ ವಿಲೇವಾರಿಗೊಳಿಸಬೇಕಿದೆ. ಈ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ಛಾಯಾಚಿತ್ರ ಸಹಿತ ವರದಿಯನ್ನು ಮೇ 20ರೊಳಗೆ ಕಚೇರಿಗೆ ಸಲ್ಲಿಸಬೇಕು ಎಂದು ಸಿಇಒ ಆದೇಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ರಾಶಿಗಳನ್ನು ತೆರವುಗೊಳಿಸುವ ಸಂಬಂಧಪಟ್ಟ ಗ್ರಾಮ ಪಂಚಾಯ್ತಿಗಳು ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ. ಆನಂದ್ ಕೆ. ಅವರು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಈ ಕುರಿತು ‘ಕನ್ನಡಪ್ರಭ’ದಲ್ಲಿ ಏ.30ರಂದು ಪ್ರಕಟವಾಗಿರುವ ಬಂಟ್ವಾಳ ವರದಿ ‘ರಸ್ತೆಯ ಇಕ್ಕೆಲಗಳಲ್ಲಿ ಕಸ ತೋರಣ’ವನ್ನು ಕೂಡ ಆದೇಶದಲ್ಲಿ ಜಿಪಂ ಸಿಇಒ ಉಲ್ಲೇಖಿಸಿದ್ದಾರೆ.

ರಸ್ತೆಬದಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಸುರಿಯಲಾಗಿರುವ ತ್ಯಾಜ್ಯವನ್ನು ಮಳೆಗಾಲ ಪ್ರಾರಂಭವಾಗುವ ಮುಂಚಿತವಾಗಿ ವಿಲೇವಾರಿಗೊಳಿಸಬೇಕಿದೆ. ಈ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ಛಾಯಾಚಿತ್ರ ಸಹಿತ ವರದಿಯನ್ನು ಮೇ 20ರೊಳಗೆ ಕಚೇರಿಗೆ ಸಲ್ಲಿಸಬೇಕು ಎಂದು ಸಿಇಒ ಆದೇಶಿಸಿದ್ದಾರೆ.

ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ತ್ಯಾಜ್ಯ ಬೀಳದಂತೆ ಕ್ರಮ ಕೈಗೊಳ್ಳಬೇಕು. ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕರು ಅಥವಾ ಗ್ರಾ.ಪಂ.ಗಳು ಸಂಗ್ರಹಿಸುವ ತ್ಯಾಜ್ಯವನ್ನು ಸುಡುವುದಕ್ಕೆ ಮತ್ತು ಭೂಭರ್ತಿ ಮಾಡುವುಕ್ಕೆ ಅವಕಾಶ ನೀಡಬಾರದು. ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ಗ್ರಾ.ಪಂ.ಗೆ ಒಂದು ಕಾಲೇಜು/ ವಿದ್ಯಾಸಂಸ್ಥೆ/ ಸರ್ಕಾರೇತರ ಸಂಸ್ಥೆಯನ್ನು ಗೊತ್ತುಪಡಿಸಿ, ಅವುಗಳಿಗೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಡಿ ಗ್ರಾ.ಪಂ.ಗಳನ್ನು ದತ್ತು ನೀಡುವ ಮೂಲಕ ಆ ಸಂಸ್ಥೆಯ ವಿದ್ಯಾರ್ಥಿಗಳು/ ಸ್ವಯಂ ಸೇವಕರ ಮೂಲಕ ಶ್ರಮದಾನ ಮತ್ತು ಸಮುದಾಯಕ್ಕೆ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸೂಚಿಸಿದ್ದಾರೆ.

45 ಗ್ರಾ.ಪಂ.ಗಳಲ್ಲಿ ಬ್ಲ್ಯಾಕ್‌ ಸ್ಪಾಟ್:

ದಕ್ಷಿಣ ಕನ್ನಡ ಜಿಲ್ಲೆಯ 9 ತಾಲೂಕು ವ್ಯಾಪ್ತಿಯ 45 ಗ್ರಾ.ಪಂ. ವ್ಯಾಪ್ತಿ ಬ್ಲ್ಯಾಕ್ ಸ್ಪಾಟ್ ಪ್ರದೇಶ ಎಂದು ಗುರುತಿಸಲಾಗಿದೆ. ಬಂಟ್ವಾಳ ತಾಲೂಕಿನ ಕನ್ಯಾನ, ಸಜಿಪಮುನ್ನೂರು, ಮಾಣಿ, ಪುದು, ನರಿಕೊಂಬು, ಬೆಳ್ತಂಗಡಿ ತಾಲೂಕಿನ ಮಾಲಾಡಿ, ಕುವೆಟ್ಟು ತಣ್ಣೀರುಪಂತ, ಚಾರ್ಮಾಡಿ, ಉಜಿರೆ, ಕಡಬ ತಾಲೂಕಿನ ಸುಬ್ರಹ್ಮಣ್ಯ, ಶಿರಾಡಿ, ಆಲಂಕಾರು, ನೆಲ್ಯಾಡಿ, ಸವಣೂರು, ಮಂಗಳೂರು ತಾಲೂಕಿನ ಅಡ್ಯಾರು, ನೀರುಮಾರ್ಗ, ಗಂಜಿಮಠ, ಗುರುಪುರ, ಮೂಡುಶೆಡ್ಡೆ, ಮೂಡುಬಿದಿರೆ ತಾಲೂಕಿನ ಪುತ್ತಿಗೆ, ಬೆಳುವಾಯಿ, ತೆಂಕಮಿಜಾರು, ಪಡುಮಾರ್ನಾಡು, ಕಲ್ಲಮುಂಡೂರು, ಮೂಲ್ಕಿಯ ಹಳೆಯಂಗಡಿ, ಪಡು ಪಣಂಬೂರು, ಕೆಮ್ರಾಲ್, ಕಿಲ್ಪಾಡಿ, ಬಳ್ಳುಂಜೆ, ಪುತ್ತೂರು ತಾಲೂಕಿನ ಕಬಕ, ಆರ್ಯಾಪು, ಉಪ್ಪಿನಂಗಡಿ, ನೆಕ್ಕಿಲಾಡಿ, ಒಳಮೊಗರು, ಸುಳ್ಯ ತಾಲೂಕಿನ ಕನಕಮಜಲು, ಜಾಲ್ಲೂರು, ಸಂಪಾಜೆ, ಬೆಳ್ಳಾರೆ, ಆಲೆಟ್ಟಿ, ಉಳ್ಳಾಲ ತಾಲೂಕಿನ ಅಂಬ್ಲಮೊಗರು, ಕೊಣಾಜೆ, ಪಜೀರು, ಮಂಜನಾಡಿ, ಬೆಳ್ಳ ಗ್ರಾ.ಪಂ.ಗಳನ್ನು ಗುರುತು ಮಾಡಲಾಗಿದೆ.