ಕಡಲ್ಕೊರೆತ ಪರಿಶೀಲನೆ ನಡೆಸಿದ ಜಲಸಾರಿಗೆ ಮಂಡಳಿ ಸಿಇಒ

| Published : Aug 03 2024, 12:43 AM IST

ಕಡಲ್ಕೊರೆತ ಪರಿಶೀಲನೆ ನಡೆಸಿದ ಜಲಸಾರಿಗೆ ಮಂಡಳಿ ಸಿಇಒ
Share this Article
  • FB
  • TW
  • Linkdin
  • Email

ಸಾರಾಂಶ

ಮುಕ್ಕಚ್ಚೇರಿ ಪ್ರದೇಶದಲ್ಲಿ ಎಡಿಬಿ ಯೋಜನೆಯಡಿ ಟೆಟ್ರಾಪೋಡ್‌ಗಳಿಂದ ಮಾಡಿರುವ ತಡೆಗೋಡೆ ಕುಸಿದಿದ್ದು, ಇದನ್ನು ಅದಷ್ಟು ಬೇಗ ಪುನರ್‌ ನಿರ್ಮಿಸುವಂತೆಯೂ ಸ್ಥಳೀಯರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿ ತೀರದಲ್ಲಿ ಸುಮಾರು 13 ಪ್ರದೇಶಗಳಲ್ಲಿ ಕಡಲ್ಕೊರೆತ ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯರಾಮ್ ರಾಯ್ ಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಡಲ್ಕೊರೆತ ಬಾಧಿತ ಪ್ರದೇಶಗಳಾದ ಉಳ್ಳಾಲ ತಾಲೂಕು ಮೊಗವೀರಪಟ್ಣ, ಬಟ್ಟಪಾಡಿ, ಉಚ್ಚಿಲ ಹಾಗೂ ಸೀಗ್ರೌಂಡ್ ಪ್ರದೇಶಗಳಿಗೆ ಅವರು ಭೇಟಿ ನೀಡಿದರು.ಮೊಗವೀರಪಟ್ಣದಲ್ಲಿ ಎಡಿಬಿ ಯೋಜನೆಯಡಿ ಬರ್ಮ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಅಬ್ಬರದ ಅಲೆಗಳಿಂದ ತಡೆಗೋಡೆ ಕುಸಿದಿದೆ. ಹೀಗಾಗಿ ಮತ್ತೆ ಆದಷ್ಟು ಬೇಗ ಬರ್ಮ್‌ಗಳ ಮಧ್ಯೆ ತಡೆಗೋಡೆ ನಿರ್ಮಾಣ ಮಾಡುವಂತೆ ಸ್ಥಳೀಯರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.

ಮುಕ್ಕಚ್ಚೇರಿ ಪ್ರದೇಶದಲ್ಲಿ ಎಡಿಬಿ ಯೋಜನೆಯಡಿ ಟೆಟ್ರಾಪೋಡ್‌ಗಳಿಂದ ಮಾಡಿರುವ ತಡೆಗೋಡೆ ಕುಸಿದಿದ್ದು, ಇದನ್ನು ಅದಷ್ಟು ಬೇಗ ಪುನರ್‌ ನಿರ್ಮಿಸುವಂತೆಯೂ ಸ್ಥಳೀಯರು ಒತ್ತಾಯಿಸಿದರು.

ಸೋಮೇಶ್ವರ ಪುರಸಭಾ ವ್ಯಾಪ್ತಿಯ ಬಟ್ಟಪಾಡಿಯಲ್ಲಿ ರಸ್ತೆ ಸಂಪರ್ಕ ಮತ್ತಷ್ಟು ಕಡಿತಗೊಂಡಿದ್ದು, ಇದರ ಹಿಂಭಾಗದ ನಾಲ್ಕೈದು ಮನೆಗಳು ಅಪಾಯದ ಅಂಚಿನಲ್ಲಿವೆ. ಈ ಬಗ್ಗೆ ಪರಿಹಾರ ಕಂಡುಕೊಳ್ಳುವಂತೆ ಸಿಇಒ ಅವರು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಎಂಜಿನಿಯರ್ ಪ್ರಮೀತ್ ಬಿ.ಎಸ್., ಮಂಗಳೂರು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ರಾಜೇಶ್ ಕುಮಾರ್ ಎ., ಮನೋಹರ್ ಆಚಾರ್ಯ ವಿ.ಕೆ, ಬ್ಲಾಕ್ ಬ್ರಿಕ್ಸ್ ಸಲಹೆಗಾರ ಸಮೀಪ್ ಜೈನ್ ಮತ್ತಿತರರು ಇದ್ದರು.