ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಆರ್ಥಿಕವಾಗಿ ಹೆಚ್ಚು ಲಾಭದ ಏಕೈಕ ಉದ್ದೇಶದಿಂದ ವಾಣಿಜ್ಯ ಬೆಳೆಗೆ ರೈತ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇದರಿಂದಾಗಿ ಶತಮಾನದಿಂದ ಬೆಳೆಯುತ್ತಿದ್ದ ಸಿರಿಧಾನ್ಯಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿ.ವಿ. ಕುಲಪತಿ ಡಾ.ಆರ್.ಸಿ. ಜಗದೀಶ್ ಆತಂಕ ವ್ಯಕ್ತಪಡಿಸಿದರು.ತಾಲೂಕಿನ ಚುರ್ಚುಗುಂಡಿ ಗ್ರಾಮದಲ್ಲಿ ಗುರುವಾರ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಗೆ ವಿಜ್ಞಾನಗಳ ವಿವಿ, ಶಿವಮೊಗ್ಗದ ವಿಸ್ತರಣಾ ನಿರ್ದೇಶ ನಾಲಯ, ಹೈದರಾಬಾದಿನ ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ, ಚುರ್ಚುಗುಂಡಿಯ ಶ್ರೀ ಸಂಗಮೇಶ್ವರ ರೈತ ಉತ್ಪಾದಕರ ಸಹಕಾರ ಸಂಘ ವತಿಯಿಂದ ನಡೆದ ‘ಸಿರಿಧಾನ್ಯಗಳ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
ಒಣ ಪ್ರದೇಶದಲ್ಲಿ ಬೆಳೆಯಬಹುದಾದ ಸಿರಿಧಾನ್ಯಗಳು ಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡಿವೆ. ಕಾಳುಗಳನ್ನು ಕೊಡುವುದರ ಜೊತೆಗೆ ಮೇವನ್ನು ನೀಡುವುದರಿಂದ ರೈತ ರಿಗೆ ಸಿರಿಧಾನ್ಯಗಳು ಆಹಾರ, ಆದಾಯ ಹಾಗೂ ಆರೋಗ್ಯದ ಅವಶ್ಯಕತೆ ನೀಗಿಸುತ್ತದೆ. ಯಾವುದೇ ರಾಸಾಯನಿಕ ಸಿಂಪಡಿಸದೇ, ಹೆಚ್ಚಿನ ಇಳುವರಿ ಗಳಿಸಬಹುದು. ಅಧಿಕ ಪೌಷ್ಟಿಕಾಂಶ, ನಾರಿನಾಂಶ ಹೆಚ್ಚಾಗಿರುವ ಸಿರಿಧಾನ್ಯಗಳಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ರೈತರು ಕೇವಲ ಸಿರಿಧಾನ್ಯಗಳನ್ನು ಬೆಳೆಯದೆ, ಮೌಲ್ಯವರ್ಧನೆ ಮಾಡಿ ಹೆಚ್ಚಿನ ಆದಾಯ ಗಳಿಸಬಹುದಾಗಿದೆ ಎಂದು ವಿವರಿಸಿದರು.ಕೃಷಿ ವಿ.ವಿ.ಯ ಶಿಕ್ಷಣ ನಿರ್ದೇಶಕ ಹೇಮ್ಲಾ ನಾಯಕ್ ಮಾತನಾಡಿ, ಪ್ರಪಂಚದಲ್ಲಿ ಬೆಳೆಯಲು ಅಸಾಧ್ಯವಾದ ಬೆಳೆಗಳನ್ನು ದೇಶದಲ್ಲಿ ಬೆಳೆಯಲಾಗುತ್ತಿದೆ. ಭಾರತವು ವೈವಿಧ್ಯಮಯ ವಾತಾವರಣ ಹೊಂದಿದೆ. ರೈತರು ರಾಸಾಯನಿಕಗಳನ್ನು ಬಳಸದ ಸಿರಿಧಾನ್ಯಗಳನ್ನು ಜಾನುವಾರುಗಳಿಗೆ ನೀಡಿ ಎಂದರು.
ಭೂಸಿರಿ ಸಿರಿಧಾನ್ಯಗಳ ರೈತ ಉತ್ಪಾದಕರ ಕಂಪನಿ ನಿರ್ದೇಶಕ ಚಂದ್ರಕಾಂತ್ ಮಾತನಾಡಿ, ನವಣೆ, ಹಾರಕ, ಕೋರಲೆ, ಊದಲು, ಸಾಮೆಗಳನ್ನು ರೈತರಿಗೆ ವಿತರಿಸಿ, ಬೆಳೆದ ನಂತರ ರೈತರಿಂದ ನೇರವಾಗಿ ಖರೀದಿಸಿ, ಸಂಸ್ಕರಿಸಿ 22 ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ. ರಾಸಾಯನಿಕವಿಲ್ಲದೆ ಬೆಳೆದ ಸಿರಿಧಾನ್ಯಗಳಿಂದ ವಿವಿಧ ಖಾದ್ಯಗಳನ್ನು ಸಂಘದಿಂದ ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಸಂಗಮೇಶ್ವರ ರೈತ ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ಎಸ್.ಎಂ.ಸೂರ್ಯಕಾಂತ್ ಮಾತನಾಡಿ, ಸಿರಿಧಾನ್ಯಗಳ ಉತ್ಪಾದನೆ ಹೆಚ್ಚಿಸಿ ಪ್ರತಿಯೊಬ್ಬರೂ ಸೇವಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಮೌಲ್ಯವರ್ಧನೆ ಮೂಲಕ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಗಳ ಮಹತ್ವ ಸಾರಬೇಕಿದೆ ಎಂದು ತಿಳಿಸಿದರು.
ಗ್ರಾಮದಲ್ಲಿ ಜಾಥಾ ನಡೆಸಲಾಯಿತು. ಕೃಷಿ ವಿವಿ ವಿಜ್ಞಾನಿಗಳು, ವಿದ್ಯಾರ್ಥಿಗಳು, ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು, ಶ್ರೀ ಸಂಗಮೇಶ್ವರ ರೈತ ಸಹಕಾರಿ ಸಂಘದ ಸದಸ್ಯರು, ಸ್ಥಳೀಯ ರೈತರು ಹಾಗೂ ಮಹಿಳೆಯರು ಸಹಿತ ನೂರಾರು ಜನರು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ರಾಜೇಶ್ ಸ್ವಾಗತಿಸಿ, ಭರತ್ ನಿರೂಪಿಸಿ, ಅನುಷಾ ವಂದಿಸಿದರು.
-25ಕೆಎಸ್.ಕೆಪಿ2: ಶಿಕಾರಿಪುರ ತಾಲೂಕಿನ ಚುರ್ಚುಗುಂಡಿಯಲ್ಲಿ ಸಿರಿಧಾನ್ಯಗಳ ಕಾರ್ಯಾಗಾರವನ್ನು ಇರುವಕ್ಕಿ ಕೃಷಿ ವಿವಿ ಕುಲಪತಿ ಡಾ.ಜಗದೀಶ್ ಉದ್ಘಾಟಿಸಿದರು.