ಈರುಳ್ಳಿ ರಫ್ತು ನೀತಿ ನಿಷೇಧ ಹಿಂಪಡೆಯಲಿ

| Published : Jan 28 2024, 01:15 AM IST

ಸಾರಾಂಶ

ಮಳೆ ಬೆಳೆ ಇಲ್ಲದೇ ರೈತನ ಬದುಕು ಬೀದಿಗೆ ಬರುವಂತಾಗಿದೆ. ಕೂಡಲೇ ಸರ್ಕಾರ ಈರುಳ್ಳಿ ಬೆಳೆಗೆ ಕ್ವಿಂಟಲ್‌ಗೆ ₹3500 ರಿಂದ ಗರಿಷ್ಠ 5000ರವರೆಗೆ ಬೆಲೆ ನಿಗದಿ ಮಾಡಬೇಕು. ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧವನ್ನು ತಕ್ಷಣ ಹಿಂಪಡೆಯಬೇಕು

ಹುಬ್ಬಳ್ಳಿ: ಈರುಳ್ಳಿಗೆ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡುವುದು, ರಫ್ತು ನಿಷೇಧ ಹೇರಿದ್ದನ್ನು ಹಿಂಪಡೆಯುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳಗಾರರ ಸಂಘದ ರಾಜ್ಯಾಧ್ಯಕ್ಷ ಎನ್‌.ಎಂ. ಸಿದ್ದೇಶ್‌ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಈರುಳ್ಳಿಯ ಸರಮಾಲೆಯನ್ನು ಧರಿಸಿ ವಿನೂತನ ರೀತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ರೈತರು ಈರುಳ್ಳಿ ಬೆಳೆಗಾರರಿದ್ದಾರೆ. ಪ್ರಸ್ತುತ ಕ್ವಿಂಟಲ್‌ ಈರುಳ್ಳಿಗೆ ಕೇವಲ ₹1200 ರಿಂದ ₹1500ರ ವರೆಗೆ ಮಾತ್ರ ದರವಿದೆ. ಆದರೆ ಪ್ರತಿ ಕ್ವಿಂಟಲ್‌ ಈರುಳ್ಳಿ ಬೆಳೆಯಬೇಕೆಂದರೆ ₹1500-1800 ಖರ್ಚಾಗುತ್ತದೆ. ಇದರಿಂದ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರ ಬರೀ ಬಾಯಿ ಮಾತಲ್ಲಿ ಹೇಳುತ್ತಿದೆ.

ಮಳೆ ಬೆಳೆ ಇಲ್ಲದೇ ರೈತನ ಬದುಕು ಬೀದಿಗೆ ಬರುವಂತಾಗಿದೆ. ಕೂಡಲೇ ಸರ್ಕಾರ ಈರುಳ್ಳಿ ಬೆಳೆಗೆ ಕ್ವಿಂಟಲ್‌ಗೆ ₹3500 ರಿಂದ ಗರಿಷ್ಠ 5000ರವರೆಗೆ ಬೆಲೆ ನಿಗದಿ ಮಾಡಬೇಕು. ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧವನ್ನು ತಕ್ಷಣ ಹಿಂಪಡೆಯಬೇಕು. ಅತೀ ಹೆಚ್ಚು ಈರುಳ್ಳಿ ಬೆಳೆಯುವ ಗದಗ, ಹುಬ್ಬಳ್ಳಿ ಹಾಗೂ ಬೆಂಗಳೂರಲ್ಲಿ ಈರುಳ್ಳಿ ಶೇಖರಣಾ ಘಟಕ ಸ್ಥಾಪನೆ ಮಾಡಬೇಕು. ಸರ್ಕಾರ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ರೈತರ ಈ ಎಲ್ಲ ಬೇಡಿಕೆ ಈಡೇರಿಸದೇ ಹೋದಲ್ಲಿ, ಮುಂಬರುವ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೋರಾಟವನ್ನು ಹುಬ್ಬಳ್ಳಿಯಲ್ಲೇ ಆಯೋಜಿಸುತ್ತೇವೆ. ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಲೋಕಣ್ಣಾ ಉಳ್ಳಾಗಡ್ಡಿ, ಬಸವರಾಜ ಹಡಪದ, ತಿಪ್ಪಣ್ಣಾ ತಲ್ಲೂರ, ಬಸವರಾಜ ಹಡಪದ, ಮಂಜುನಾಥ ನಾವಿ, ಹನುಮಂತ ದುರಗನ್ನವರ ಸೇರಿದಂತೆ ಅನೇಕರಿದ್ದರು.

ಕನ್ಯಾ ಕೊಡ್ತಾ ಇಲ್ಲ: ರೈತರ ಮಕ್ಕಳಿಗೆ ಕನ್ಯಾ ಕೊಡುತ್ತಿಲ್ಲ. ಎಷ್ಟೇ ದೊಡ್ಡ ಶ್ರೀಮಂತ ರೈತರಿದ್ದರೂ ಕನ್ಯಾ ಕೊಡಲು ಹಿಂದೇಟು ಹಾಕುತ್ತಿದ್ದಾರೆ.ಇದಕ್ಕಾಗಿ ನಾವು ಮಕ್ಕಳಿಗೆ ರೈತಾಪಿ ಕೆಲಸ ಮಾಡಬೇಡಿ ಎಂದು ಹೇಳುವಂತಾಗಿದೆ ಎಂದು ಸಿದ್ದೇಶ ಬೇಸರಿಸಿಕೊಂಡರು.

ಗೌರವ ಧನ ಕೊಡಿ: ಸರ್ಕಾರ ಎಲ್ಲರಿಗೂ ಗೌರವ ಧನ ಕೊಡುತ್ತಿದೆ.ಅದೇ ರೀತಿ ರೈತರಿಗೂ ಗೌರವ ಧನ ಕೊಡಲಿ. ಪ್ರತಿ ತಿಂಗಳು ₹5 ಸಾವಿರ ಗೌರವ ಧನ ಕೊಡಲು ಕ್ರಮ ಕೈಗೊಳ್ಳಲಿ ಎಂದು ಈರುಳ್ಳಿ ಬೆಳೆಗಾರ ಬಸವರಾಜ ಹಡಪದ ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ತಿಂಗಳು ಗೌರವ ಧನ ಕೊಟ್ಟರೆ ನಮಗೆ ಯಾವ ಸಬ್ಸಿಡಿಯೂ ಬೇಡ. ಏನು ಬೇಡ ಎಂದರು. ನಾವು ನೆಮ್ಮದಿಯಿಂದ ಬದುಕು ನಡೆಸಬಹುದು ಎಂದರು.