ಸಾರಾಂಶ
ತಿಪಟೂರು: ಭಾರತೀಯ ಹಿಂದೂ ಧರ್ಮದ ಸನಾತನ ಸಂಸ್ಕೃತಿಯ ಸಂಪತ್ತುಗಳಾದ ದಾನ ಧರ್ಮ, ಆಧ್ಯಾತ್ಮ, ಧಾರ್ಮಿಕ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕಿನಲ್ಲಿ ಸಂತೃಪ್ತಿ ಕಾಣಬಹುದು ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಗಡಿ ಭಾಗದ ಗ್ರಾಮವಾದ ಕಲ್ಲುಸಾದರಹಳ್ಳಿಯಲ್ಲಿ ಶ್ರೀ ಕರಿಯಮ್ಮದೇವಿಯವರ ದೇವಸ್ಥಾನದ ಪ್ರಥಮ ವರ್ಷದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದ ಅವರು, ಅಯೋಧ್ಯೆಯಲ್ಲಿ ಬಾಲರಾಮಮೂರ್ತಿ ಪ್ರತಿಷ್ಠಾಪನೆಯಾಗಿರುವುದು ವಿಶೇಷವಾಗಿದ್ದು, ಪ್ರತಿಷ್ಠಾಪನೆಯ ದಿನದಂದು ದೇಶಾದ್ಯಂತ ಸಾಂಕೇತಿಕವಾಗಿ ರಾಮನಾಮ ಜಪ ಮಾಡುವ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಯಿತು. ಇದೇ ರೀತಿ ನಮ್ಮ ಸನಾತನ ಧಾರ್ಮಿಕ ಪರಂಪರೆ, ಆಚರಣೆಗಳನ್ನು ಮುಂದುವರೆಸಿಕೊಂಡು ಹೋದಲ್ಲಿ ದೇಶ, ಸಮಾಜ ಅಭಿವೃದ್ಧಿಯಾಗುವ ಜೊತೆಗೆ ಜನರು ಸಂತೃಪ್ತಿ, ಶಾಂತಿಯನ್ನು ಕಂಡುಕೊಳ್ಳಬಹುದಾಗಿದೆ ಎಂದರು.ನಮ್ಮ ಪೂರ್ವಿಕರು ಧರ್ಮಮಾರ್ಗಿಗಳು ಹಾಗೂ ದೈವಭಕ್ತರಾಗಿದ್ದರು. ಅಪಾರ ಶ್ರದ್ದೆ, ಭಯ, ಭಕ್ತಿಗಳಿಂದಲೇ ಪರಮಾತ್ಮನನ್ನು ಕಾಣುತ್ತಿದ್ದರು. ಸುಖ ಮತ್ತು ದುಃಖ ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತ ಸಂತೃಪ್ತಿಯ ಜೀವನ ನಡೆಸುತ್ತಿದ್ದರು. ಗುರು-ಹಿರಿಯರು, ತಂದೆ-ತಾಯಿ ಮತ್ತು ಸಾಧು ಸಂತರನ್ನು ಗೌರವದಿಂದ ಕಾಣುತ್ತಿದ್ದರು. ಅದಕ್ಕಾಗಿಯೇ ಮಳೆ-ಬೆಳೆ ಆಗಿ ಸಮೃದ್ದರಾಗಿದ್ದರು. ಆದರೆ ಇಂದಿನ ಯುವ ಪೀಳಿಗೆಯಲ್ಲಿ ಇವೆಲ್ಲ ಕಣ್ಮರೆಯಾಗುತ್ತಿದ್ದು ಆಧುನಿಕತೆಯ ಭ್ರಮಾಲೋಕದಲ್ಲಿ ತೇಲಾಡುತ್ತಿದ್ದಾರೆ. ಯುವ ಪೀಳಿಗೆ ನಮ್ಮ ಸಂಸ್ಕೃತಿ, ಆಚಾರ-ವಿಚಾರ,ಸಂಪ್ರದಾಯಗಳನ್ನು ಮೈಗೂಡಿಸಿಕೊಳ್ಳಬೇಕು. ಪರಸ್ಪರ ಸಹಕಾರ, ಸೌಜನ್ಯದಿಂದ ಕೂಡಿದ ಸದ್ಗುಣಗಳನ್ನು ಬೆಳೆಸಿಕೊಂಡು ಸಹಬಾಳ್ವೆಯ ಜೀವನ ನಡೆಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕೆ.ಪಿ. ರುದ್ರಮುನಿಸ್ವಾಮಿ, ಕೆ.ಆರ್. ಅರುಣ್‌ಕುಮಾರ್, ತಾಪಂ ಮಾಜಿ ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್, ಗ್ರಾ.ಪಂ ಸದಸ್ಯರಾದ ಈಶ್ವರ್, ವಸಂತ್, ನಂದೀಶ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.