ಸಾರಾಂಶ
ನಗರದ ಗವಿಮಠದಲ್ಲಿ ಬಸವ ಪಟ ಆರೋಹಣ ಮೂಲಕ ಗವಿಸಿದ್ದೇಶ್ವರ ಜಾತ್ರೆಗೆ ವಿದ್ಯುಕ್ತ ಚಾಲನೆ ಶನಿವಾರ ಸಂಜೆ ಸಿಕ್ಕಿತು.
ಬಸವಪಟ ಆರೋಹಣ ಮೂಲಕ ಅನ್ನದಾತರಿಗೆ ಸಮೃದ್ಧಿ ಸಿಗಲೆಂದು ಪೂಜೆ । ಶೋಭಾಯಮಾನವಾದ ಪಂಚ ಕಳಸ
ಕನ್ನಡಪ್ರಭ ವಾರ್ತೆ ಕೊಪ್ಪಳನಗರದ ಗವಿಮಠದಲ್ಲಿ ಬಸವ ಪಟ ಆರೋಹಣ ಮೂಲಕ ಗವಿಸಿದ್ದೇಶ್ವರ ಜಾತ್ರೆಗೆ ವಿದ್ಯುಕ್ತ ಚಾಲನೆ ಶನಿವಾರ ಸಂಜೆ ಸಿಕ್ಕಿತು.
ಶ್ರೀಗವಿಮಠದ ಕರ್ತೃಗದ್ದುಗೆಯ ಮುಂಭಾಗದಲ್ಲಿ ಪೂಜಾ ಕೈಂಕರ್ಯದ ಮೂಲಕ ಬಸವ ಪಟ ಆರೋಹಣ ಜರುಗಿತು. ಭಕ್ತರೆಲ್ಲರೂ ಕೂಡಿಕೊಂಡು ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರವಿರುವ ಬಸವಪಟಕ್ಕೆ ಪೂಜೆ ಸಲ್ಲಿಸಿದರು. ನೈವೇದ್ಯ ಸಮರ್ಪಿಸಿದರು. ಬಳಿಕ ನೈವೇದ್ಯವನ್ನು ಶ್ರದ್ಧೆಯಿಂದ ಕೈಯಲ್ಲಿ ಹಿಡಿದು ಶ್ರೀ ಗವಿಮಠದ ಕರ್ತೃ ಗದ್ದುಗೆಯ ಸುತ್ತ ಐದು ಸಾರಿ ಪ್ರದಕ್ಷಿಣೆ ಹಾಕುತ್ತಾ ಗವಿಸಿದ್ಧೇಶ್ವರನ ಜಯಘೋಷಗಳೊಂದಿಗೆ ಕರ್ತೃಗದ್ದುಗೆಯ ಮುಂಭಾಗದ ಎದುರಿಗಿರುವ ಶಿಲಾಸ್ತಂಭಕ್ಕೆ ಬಸವಪಟವನ್ನು ಆರೋಹಣಗೊಳಿಸಿದರು.ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪೃಕೃತಿ ಇವುಗಳಿಗೆ ಪೂಜೆ ಸಲ್ಲಿಸಿ, ಶ್ರೀ ಗವಿಸಿದ್ಧನ ಸನ್ನಿಧಿಯ ಈ ನಾಡಿನಲ್ಲಿ ಸದಾಕಾಲ ಉತ್ತಮ ಮಳೆ, ಉತ್ತಮ ಬೆಳೆ ಬಂದು ರೈತಾಪಿ ವರ್ಗಕ್ಕೆ ಸುಖ, ಶಾಂತಿ, ಸಮೃದ್ಧಿ ಸದಾ ದೊರೆಯಲೆಂದು ಪೂಜೆ ಸಲ್ಲಿಸಲಾಯಿತು.
ಗದ್ದುಗೆಯ ಮೇಲೆ ಶೋಭಾಯಮಾನವಾದ ಪಂಚಕಳಸ:ನಗರದ ಗವಿಮಠದಲ್ಲಿ ಶನಿವಾರ ಸಂಜೆ ೫ ಗಂಟೆಗೆ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಪಂಚಕಳಸಗಳು ಶೋಭಾಯಮಾನವಾದವು. ಸಾಮಾನ್ಯವಾಗಿ ಎಲ್ಲ ಮಠಮಾನ್ಯಗಳಿಗೆ ಒಂದೇ ಕಳಸವಿರುತ್ತದೆ. ಆದರೆ ಕೊಪ್ಪಳದ ಶ್ರೀಗವಿಮಠದ ಕರ್ತೃ ಶ್ರೀಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಐದು ಕಳಸಗಳು ಶೋಭಾಯಮಾನವಾಗಿರುತ್ತವೆ.
ಪಂಚ ಕಳಸಗಳ ಆರೋಹಣ ನಂತರ ಜಂಗಮಪುಂಗವರಿಗೆ ಪ್ರಸಾದ, ಜಂಗಮರಾಧನೆ ಕಾರ್ಯ ಜರುಗಿತು.ಬಾಳೆಹಣ್ಣು ಎಸೆಯದಿರಲು ಮನವಿ:
ನಗರದ ಶ್ರೀ ಗವಿಮಠದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಜ.15ರಂದು ಜರುಗುವ ಮಹಾರಥೋತ್ಸವ ಸಾಗುವ ಸಂದರ್ಭ ಭಕ್ತರು ತಮ್ಮ ಭಕ್ತಿಯಿಂದ ಉತ್ತತ್ತಿ ಮಾತ್ರ ಅರ್ಪಣೆ ಮಾಡಬೇಕು. ಬಾಳೆಹಣ್ಣನ್ನು ಯಾವುದೇ ಕಾರಣಕ್ಕೂ ಎಸೆಯಬಾರದು. ಇದರಿಂದಾಗಿ ಭಕ್ತರು ಸಂಚರಿಸಲು ತೊಂದರೆಯಾಗುತ್ತದೆ. ಜೊತೆಗೆ ಸ್ವಚ್ಛತೆ ಮಾಡಲು ತೊಂದರೆಯಾಗುತ್ತದೆ. ಮುನ್ನಚ್ಚೆರಿಕೆಯ ಕ್ರಮವಾಗಿ ಬಾಳೆಹಣ್ಣನ್ನು ಎಸೆಯಬಾರದೆಂದು ಹಾಗೂ ಬಾಳೆಹಣ್ಣನ್ನು ಮಾರಾಟ ಮಾಡುವವರು ಸಹ ಮಹಾರಥೋತ್ಸವ ಆವರಣದಲ್ಲಿ ಮಾರಾಟ ಮಾಡಬಾರದೆಂದು ಗವಿಮಠದ ಪ್ರಕಟಣೆ ತಿಳಿಸಿದೆ.