ಸಾರಾಂಶ
ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸುಗಮ ಸಂಗೀತ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ, ಬೀದರ್
ಪರಂಪರೆ ನಗರಿಯಲ್ಲಿ ಎರಡು ದಿನಗಳ ‘ಬಿದರಿ ಉತ್ಸವ 2024’ಕ್ಕೆ ಬಿದರಿ ಸುಗಮ ಸಂಗೀತ ಗಾಯನ ಸ್ಪರ್ಧೆಯೊಂದಿಗೆ ಶನಿವಾರ ವಿದ್ಯುಕ್ತ ಚಾಲನೆ ದೊರೆಯಿತು.ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿವಿಧೆಡೆಯ ಸಂಗೀತ ಕಲಾವಿದರು ಉತ್ಸಾಹದಿಂದ ಪಾಲ್ಗೊಂಡರು.ಸ್ಪರ್ಧೆಯನ್ನು ಉದ್ಘಾಟಿಸಿದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಅವರು, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಬೆಳವಣಿಗೆಗೆ ಪೂರಕ ಚಟುವಟಿಕೆಗಳು ಹೆಚ್ಚು ನಡೆಯಬೇಕಾಗಿದೆ ಎಂದು ಹೇಳಿದರು.ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯು ಜಿಲ್ಲೆಯಲ್ಲಿ ಸಂಗೀತ ಕಲೆ ಬೆಳೆಸಲು ಶ್ರಮಿಸುತ್ತಿದೆ. ಬಿದರಿ ಉತ್ಸವದ ಮೂಲಕ ಸಂಗೀತ ಕಲಾವಿದರಿಗೆ ವೇದಿಕೆ ಒದಗಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬಾಬು ಪಾಸ್ವಾನ್, ಬಿದರಿ ಸುಗಮ ಸಂಗೀತ ಗಾಯನ ಸ್ಪರ್ಧೆ ಸಮಿತಿಯ ಅಧ್ಯಕ್ಷೆ ಭಾರತಿ ವಸ್ತ್ರದ್, ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ರೇಖಾ ಅಪ್ಪಾರಾವ್ ಸೌದಿ, ಪ್ರಮುಖರಾದ ಶ್ರೀಮಂತ ಸಪಾಟೆ, ಸುಬ್ಬಣ್ಣ ಕರಕನಳ್ಳಿ ಮತ್ತಿತರರು ಇದ್ದರು.ಸ್ವರೂಪಾರಾಣಿ ಅತಿಥಿಗಳನ್ನು ಪರಿಚಯಿಸಿದರು. ಡಾ.ಶ್ರೇಯಾ ಮಹೇಂದ್ರಕರ್ ನಿರೂಪಿಸಿದರು. ರೂಪಾ ಪಾಟೀಲ ಸ್ವಾಗತಿಸಿದರು. ವಿದ್ಯಾವತಿ ಬಲ್ಲೂರ ವಂದಿಸಿದರು. ನಂತರ ಬಿದರಿ ಹರಟೆ ಕಟ್ಟೆ, ಬಿದರಿ ಜಾನಪದ ನೃತ್ಯ ಕಾರ್ಯಕ್ರಮ ನಡೆದವು.ಸುಗಮ ಸಂಗೀತ ಸ್ಪರ್ಧೆಯಲ್ಲಿ ಸಾಕ್ಷಿ ಪ್ರಥಮ :
ಬಿದರಿ ಸುಗಮ ಸಂಗೀತ ಸ್ಪರ್ಧೆಯಲ್ಲಿ ಸಾಕ್ಷಿ (ಪ್ರಥಮ), ಪ್ರತೀಕ್ಷಾ (ದ್ವಿತೀಯ) ಹಾಗೂ ಯುಕ್ತಿ ಅರಳಿ (ತೃತೀಯ) ಬಹುಮಾನ ಪಡೆದರು.ಜಸ್ಕರಣ್ ಸಿಂಗ್ ಪ್ರಮುಖ ಆಕರ್ಷಣೆ :ಬಿದರಿ ಉತ್ಸವ 2024 ರ ಪ್ರಯುಕ್ತ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಭಾನುವಾರ (ಡಿ. 15) ಸಂಜೆ 6ಕ್ಕೆ ನಡೆಯಲಿರುವ ಸಂಗೀತ ಸಂಭ್ರಮದಲ್ಲಿ ಖ್ಯಾತ ಕಲಾವಿದರು ಗಾನ ಸುಧೆ ಹರಿಸಲಿದ್ದಾರೆ.ಕೃಷ್ಣಂ ಪ್ರಣಯ ಸಖಿಯ ದ್ವಾಪರ ಹಾಡಿನ ಖ್ಯಾತಿಯ ಪಂಜಾಬ್‌ನ ಯುವ ಗಾಯಕ ಜಸ್ಕರಣಸಿಂಗ್ ಹಾಗೂ ಬೀದರ್‌ನ ಖ್ಯಾತ ಗಾಯಕಿ ರೇಖಾ ಸೌದಿ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಕಲಾವಿದರಾದ ಶ್ರೀನಾಥ ಕಮಲಾಪುರಕರ್, ರಾಜೇಶ ಕುಲಕರ್ಣಿ ಹಾಗೂ ಅಮಿತ್ ಜನವಾಡಕರ್, ಸಾಕ್ಷಿ, ಪ್ರತೀಕ್ಷಾ, ಯುಕ್ತಿ ಅರಳಿ ಸಹ ಗಾಯನ ಪ್ರಸ್ತುತಪಡಿಸಲಿದ್ದಾರೆ.ಗುರುರಾಜ ಹೊಸಕೋಟೆಗೆ ಬಿದರಿ ದತ್ತಿ ಪ್ರಶಸ್ತಿ :
2024ನೇ ಸಾಲಿನ ರಾಜ್ಯಮಟ್ಟದ ಬಿದರಿ ದತ್ತಿ ಪ್ರಶಸ್ತಿಗೆ ಖ್ಯಾತ ಚಲನಚಿತ್ರ ನಟ ಹಾಗೂ ಜಾನಪದ ಗಾಯಕ ಗುರುರಾಜ ಹೊಸಕೋಟೆ ಅವರನ್ನು ಆಯ್ಕೆ ಮಾಡಲಾಗಿದೆ.ಪ್ರತಿ ವರ್ಷ ಬಿದರಿ ಉತ್ಸವದಲ್ಲಿ ರಾಜ್ಯಮಟ್ಟದ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ವರ್ಷದ ಪ್ರಶಸ್ತಿ ನಾಲ್ಕನೆಯದ್ದು ಎಂದು ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷೆ ರೇಖಾ ಅಪ್ಪಾರಾವ್ ಸೌದಿ ತಿಳಿಸಿದ್ದಾರೆ.ವೈವಿಧ್ಯಮಯ ಕಾರ್ಯಕ್ರಮ ಆಯೋಜನೆ
ಬೀದರ್: ಬಿದರಿ ಉತ್ಸವ ಅಂಗವಾಗಿ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಭಾನುವಾರ (ಡಿ.15) ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.ಸಂಜೆ 5.30ಕ್ಕೆ ನಡೆಯುವ ಬಿದರಿ ಶಹನಾಯಿ ವಾದನ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಮಾರುತಿರಾವ್ ಮುಳೆ ಉದ್ಘಾಟಿಸುವರು. ಗಣ್ಯರು, ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳುವರು. ಸಂಜೆ 6ಕ್ಕೆ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಬಿದರಿ ಸಂಗೀತ ಸಂಭ್ರಮ ಜರುಗಲಿದೆ. ರಾತ್ರಿ 8.30ಕ್ಕೆ ಜರುಗಲಿರುವ ರಾಜ್ಯಮಟ್ಟದ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಉದ್ಘಾಟಿಸುವರು. ಹುಲಸೂರಿನ ಡಾ. ಶಿವಾನಂದ ಸ್ವಾಮೀಜಿ ಸಾನಿಧ್ಯ ವಹಿಸುವರು. ಖ್ಯಾತ ಚಲನಚಿತ್ರ ನಟ ಗುರುರಾಜ ಹೊಸಕೋಟೆ ಅವರಿಗೆ ರಾಜ್ಯಮಟ್ಟದ ಬಿದರಿ ದತ್ತಿ ಪ್ರಶಸ್ತಿ ಪ್ರದಾನ, ಅಧಿಕಾರಿಗಳು, ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳುವರು ಎಂದು ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ರೇಖಾ ಅಪ್ಪಾರಾವ್ ಸೌದಿ ತಿಳಿಸಿದ್ದಾರೆ.