ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸೆಸ್ಕ್ ತಾಲೂಕಿನಾದ್ಯಂತ ರೈತರಿಗೆ ಸಮರ್ಪಕ ಸೇವೆ ನೀಡುತ್ತಿಲ್ಲ. ಕಂಪನಿ ಗುತ್ತಿಗೆದಾರರ ನಿಯಂತ್ರಣದಲ್ಲಿದೆ. ಹೊಸ ಸಂಪರ್ಕಕ್ಕೆ ಹೆಚ್ಚುವರಿ ಹಣ ಪಡೆದು ರೈತರ ಸುಲಿಗೆ ಮಾಡುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ರೈತ ಮುಖಂಡರು ಸೆಸ್ಕ್ ಎಂಜಿನಿಯರ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಸೆಸ್ಕಾಂ ಉಪ ವಿಭಾಗೀಯ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ರೈತ ಮುಖಂಡರು ಇಲಾಖೆ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಣ ಮತ್ತು ಅಧಿಕಾರ ಬಲ ಇರುವವರಿಗೆ ನಿಯಮ ಮೀರಿ ವಿದ್ಯುತ್ ಪರಿವರ್ತಕ (ಟಿ.ಸಿ) ನೀಡುತ್ತಿರಾ. ಸಾಮಾನ್ಯ ರೈತರಿಗೆ ವರ್ಷಗಳು ಕಳೆದರೂ ಟಿ.ಸಿ ನೀಡದೆ ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ಸೆಸ್ಕ್ ರೈತರಿಗೆ ಸಮರ್ಪಕ ಸೇವೆ ನೀಡದೆ ಕಿರುಕುಳ ನೀಡುತ್ತಿದೆ. ಹಣ ಕಟ್ಟಿ ಟಿಸಿಗಾಗಿ ಕಾಯುತ್ತಿದ್ದರೂ ನಿಯಮಾನುಸಾರ ಟಿ.ಸಿ.ನೀಡುತ್ತಿಲ್ಲ. ಹಣ ಮತ್ತು ಅಧಿಕಾರ ಬಲ ಹೊಂದಿರುವವರಿಗೆ ಟಿಸಿ ವ್ಯವಸ್ಥೆ ಬೇಗ ಮಾಡಿಕೊಡಲಾಗುತ್ತಿದೆ. ಟಿ.ಸಿ ಅಳವಡಿಕೆಯಲ್ಲಿ ಜೇಷ್ಠತೆ ನಿಯಮ ಪಾಲಿಸಿ ಎಂದು ಆಗ್ರಹಿಸಿದರು.

ತಾಲೂಕಿನ ಗೋವಿಂದೇಗೌಡನ ಕೊಪ್ಪಲು ಗ್ರಾಮದ ರೈತ ಲೋಕೇಶ್ ಹೊಸ ಟಿ.ಸಿ. ಸಂಪರ್ಕಕ್ಕೆ 2012 ರಲ್ಲಿಯೇ 15 ಸಾವಿರ ರೂ ಹಣ ಕಟ್ಟಿದ್ದಾರೆ. ಇದುವರೆಗೂ ಟಿ.ಸಿ.ನೀಡಿಲ್ಲ. ಕೆಲವು ಕಡೆ ಗುತ್ತಿಗೆದಾರರು ಟಿ.ಸಿ ಅಳವಡಿಸಿಲು ರೈತರಿಂದ 1.5 ಲಕ್ಷ ರು ಹಣ ಪಡೆದಿದ್ದರೂ ಟಿ.ಸಿ ಮಾತ್ರ ಅಳವಡಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ತಾಲೂಕಿನ ಮಂಗನಹೊಸಹಳ್ಳಿಯಿಂದ ಕಳ್ಳನಕೆರೆ ಗ್ರಾಮದವರೆಗೆ ಹೊಸ ವಿದ್ಯುತ್ ಲೈನ್ ಹಾಕಲು ಕಂಬಗಳನ್ನು ಹಾಕಲಾಗಿದೆ. ವಿದ್ಯುತ್ ತಂತಿಗಳನ್ನು ಹಾಕಿಲ್ಲ. ಸಿಂಧುಘಟ್ಟ ಗ್ರಾಮದ ಬಳಿ ಟಿಸಿ ಐದಾರು ಸಲ ಸುಟ್ಟು ಹೋಗಿದೆ. ಸುಮಾರು 60 ಸಾವಿರ ರು. ವ್ಯಹಿಸಿ ಹಳೇ ಟಿ.ಸಿಯನ್ನೇ ಸರಿಪಡಿಸಲಾಗುತ್ತಿದೆಯೇ ವಿನಹಃ ಹೊಸ ಅಳವಡಿಕೆಗೆ ಮುಂದಾಗುತ್ತಿಲ್ಲ ದೂರಿದರು.

ತಾಲೂಕಿನಾದ್ಯಂತ ನೂರಾರು ತೋಟದ ಮನೆಗಳಿವೆ. ಇಲ್ಲಿ ವಾಸಿಸುತ್ತಿರುವ ರೈತ ಕುಟುಂಬಗಳಿಗೆ ನಿರಂತರ ವಿದ್ಯುತ್ ಸಂಪರ್ಕ ನೀಡಿಲ್ಲ. ಐಪಿ ಸೆಟ್ ವಿದ್ಯುತ್ ಸಂಪರ್ಕವನ್ನೆ ಮನೆಗಳಿಗೆ ಬಳಕೆ ಮಾಡಲಾಗುತ್ತಿದೆ. ನಿತ್ಯ 7 ಗಂಟೆ ಕಾಲ ಮಾತ್ರ ವಿದ್ಯುತ್ ನೀಡುವುದರಿಂದ ನಿವಾಸಿಗಳು ರಾತ್ರಿ ವೇಳೆ ಕತ್ತಲಿನಲ್ಲಿಯೇ ವಾಸಿಸಬೇಕಾಗಿದೆ ಎಂದರು.

ತಾಲೂಕಿನಾದ್ಯಂತ ಚಿರತೆ ಹಾವಳಿ ವ್ಯಾಪಕವಾಗಿ ಕುಟುಂಬಗಳು ಜೀವ ಭಯದಲ್ಲಿ ಬದುಕುತ್ತಿವೆ. ತೋಟದ ಮನೆಗಳಿಗೆ ಎನ್.ಜೆ.ವೈ ಮೂಲಕ ನಿರಂತರ ವಿದ್ಯುತ್ ನೀಡಬೇಕು. ಸುಟ್ಟು ಹೋದ ಟಿಸಿ ಇಳಿಸಲು ಮತ್ತು ರಿಪೇರಿಗಾಗಿ ಸಾಗಿಸಲು ಇಲಾಖೆ ವಾಹನಗಳನ್ನು ಬಳಕೆ ಮಾಡಬೇಕು. ಗುತ್ತಿಗೆದಾರರು ವಸೂಲಿ ಮಾಡಿರುವ ಅಕ್ರಮ ಹಣದ ಬಗ್ಗೆ ಮಾಹಿತಿ ಪಡೆಯಲು ತನಿಖಾ ತಂಡ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಸೆಸ್ಕಾಂ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಮಾತನಾಡಿ, ಅನಧಿಕೃತ ವಿದ್ಯುತ್ ಸಂಪರ್ಕದಿಂದಾಗಿ ಕೆಲವು ಕಡೆ ಓವರ್ ಲೋಡ್ ಆಗಿ ಟಿ.ಸಿ ಗಳು ಸುಟ್ಟು ಹೋಗುತ್ತಿವೆ. ಅನುದಾನ ಕೊರತೆಯಿಂದ ಹೊಸ ಟಿ.ಸಿ ಅಳವಡಿಕೆ ಮಾಡಿಲ್ಲ. ಎನ್.ಜೆ.ವೈ ಯೋಜನೆ ಮೂಲಕ 24 ಘಂಟೆಗಳ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುತ್ತಿದೆ. ವಿದ್ಯುತ್ ಸಂಪರ್ಕ ಪಡೆಯಲು ರೈತರು ಇಲಾಖೆ ನಿಯಮಗಳಿಗೆ ವಿರುದ್ದವಾಗಿ ಒಪ್ಪಂದ ಮಾಡಿಕೊಂಡಿದ್ದರೆ ಅದಕ್ಕೂ ಇಲಾಖೆಗೂ ಯಾವುದೇ ಸಂಬಂಧವಿಲ್ಲ. ರೈತರು ಇಲಾಖೆ ಜೊತೆ ಸಹಕರಿಸಿದರೆ ಇಲಾಖೆ ಜವಾಬ್ದಾರಿಯುತವಾಗಿ ಕೆಲಸ ಮಾಡಲಿದೆ ಎಂದರು.

ಸಭೆಯಲ್ಲಿ ರೈತ ಮುಖಂಡರಾದ ಸಿಂಧಘಟ್ಟ ಮುದ್ದುಕುಮಾರ್, ಅಕ್ಕಿಮಂಚನಹಳ್ಳಿ ಹೊನ್ನೇಗೌಡ, ಕರೋಟಿ ತಮ್ಮಯ್ಯ, ಸೆಸ್ಕಾಂ ಇಇ ಪುಟ್ಟಸ್ವಾಮಿ, ಎಇಇ ಶಂಕರ್, ಎ.ಇ ಗಳಾದ ಜಿ.ಎಸ್.ಸತೀಶ್,ಶಿವರಾಂ, ನಂದನ್, ಜೆ.ಇ ಗಳಾದ ರವೀಂದ್ರ ಕುಮಾರ್, ಶಿವಶಂಕರ ಮೂರ್ತಿ, ಶುಭಾಂಕ್, ಹರೀಶ್, ಸುನೀಲ್, ನಾಗರಾಜು, ಕರುಣಾ, ಗಜೇಂದ್ರ ಹಲವರು ಇದ್ದರು.