ಸೆಸ್‌, ಶುಲ್ಕ ಕಡಿತ: ಕೆಸಿಸಿಐ ಹಾದಿ ತಪ್ಪಿಸಿದ ಪಾಲಿಕೆ

| Published : Apr 22 2025, 01:49 AM IST

ಸಾರಾಂಶ

ಪಾಲಿಕೆಯ ಈ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೆಸಿಸಿಐ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಆ ಕ್ಷಣವೇ ಮೇಯರ್‌ ಅವರೊಂದಿಗೆ ಮೊಬೈಲ್‌ನಲ್ಲೇ ಮಾತನಾಡಿ, ತಮ್ಮ ಅಸಮಾಧಾನವನ್ನು ಹೊರಹಾಕಿದರು. ಮುಂದೆ ಸರ್ಕಾರದೊಂದಿಗೆ ಹೋರಾಟ ನಡೆಸುವುದಾಗಿ ಸ್ಪಷ್ಟಪಡಿಸಿದರು.

ಹುಬ್ಬಳ್ಳಿ: ಟ್ಯಾಕ್ಸ್‌ ತುಂಬ ಬೇಡಿ ಎಂದು ಹೇಳಿದ್ದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ), ಇದೀಗ ನಮ್ಮ ಬೇಡಿಕೆ ಈಡೇರಿವೆ. ಆದಕಾರಣ ಎಲ್ಲ ಸಾರ್ವಜನಿಕರು ತೆರಿಗೆ ಪಾವತಿಸುವಂತೆ ಕರೆ ನೀಡಿದೆ. ಇದೇ ವೇಳೆ ಪಾಲಿಕೆಯು ಕಡಿತಗೊಳಿಸಿರುವ ಸೆಸ್‌ ಹಾಗೂ ಬಳಕೆದಾರರ ಶುಲ್ಕದ ಬಗ್ಗೆ ಕೆಸಿಸಿಐ ಪದಾಧಿಕಾರಿಗಳ ಹಾದಿ ತಪ್ಪಿಸಿರುವುದು ಬೆಳಕಿಗೆ ಬಂದಿತು.

ಪಾಲಿಕೆಯ ಈ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೆಸಿಸಿಐ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಆ ಕ್ಷಣವೇ ಮೇಯರ್‌ ಅವರೊಂದಿಗೆ ಮೊಬೈಲ್‌ನಲ್ಲೇ ಮಾತನಾಡಿ, ತಮ್ಮ ಅಸಮಾಧಾನವನ್ನು ಹೊರಹಾಕಿದರು. ಮುಂದೆ ಸರ್ಕಾರದೊಂದಿಗೆ ಹೋರಾಟ ನಡೆಸುವುದಾಗಿ ಸ್ಪಷ್ಟಪಡಿಸಿದರು.

ಆಗಿದ್ದೇನು?: ಪಾಲಿಕೆ ಆಸ್ತಿಕರ ಹೆಚ್ಚಳಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕೆಸಿಸಿಐ, ಈ ಸಂಬಂಧ 2-3 ಬಾರಿ ಸಾರ್ವಜನಿಕರ ಸಭೆ ನಡೆಸಿತ್ತು. ಜತೆಗೆ ಇದಕ್ಕಾಗಿ ಕ್ರಿಯಾ ಸಮಿತಿಯನ್ನು ರಚಿಸಿತ್ತು. ಹೋರಾಟಕ್ಕೆ ಸಿದ್ಧಗೊಂಡಿದ್ದ ಕೆಸಿಸಿಐ, ಈ ಸಮಸ್ಯೆ ಬಗೆಹರಿಯುವ ವರೆಗೂ ಸಾರ್ವಜನಿಕರು ಯಾರೂ ಟ್ಯಾಕ್ಸ್‌ ಪಾವತಿಸಬೇಡಿ ಎಂದು ಕೂಡ ಕರೆ ನೀಡಿತ್ತು.

ಈ ನಡುವೆ ಕೆಸಿಸಿಐ ಯಾವಾಗ ಈ ರೀತಿ ಕರೆ ಕೊಟ್ಟಿತು. ಒತ್ತಡಕ್ಕೆ ಮಣಿದ ಪಾಲಿಕೆಯು ಸೋಮವಾರ ಕೆಸಿಸಿಐ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿತ್ತು.

ಸಭೆಯಲ್ಲಿ ಯುಜಿಡಿ, ಘನತ್ಯಾಜ್ಯ ನಿರ್ವಹಣೆ ಸೆಸ್‌ ರದ್ದುಪಡಿಸಿದ್ದನ್ನು, ಘನತ್ಯಾಜ್ಯ ನಿರ್ವಹಣೆ ಬಳಕೆದಾರರ ಶುಲ್ಕವನ್ನು ಖಾಲಿ ನಿವೇಶನಕ್ಕೆ ಕಡಿಮೆ ಮಾಡಿರುವುದನ್ನು ತಿಳಿಸಿದ್ದಾರೆ. ಅದು ನಿರಂತರ ಎಂಬ ಭಾವನೆಯೊಂದಿಗೆ ಒಪ್ಪಿಕೊಂಡಿದ್ದ ಕೆಸಿಸಿಐ, ಇದನ್ನು ತಿಳಿಸಲು ಪತ್ರಿಕಾಗೋಷ್ಠಿ ಕರೆದಿತ್ತು. ಆದರೆ, ಸೆಸ್‌ ಹಾಗೂ ಶುಲ್ಕ ರದ್ದುಪಡಿಸಿರುವುದು ಅಥವಾ ಕಡಿತಗೊಳಿಸಿರುವುದು ತಾತ್ಕಾಲಿಕ ಮಾತ್ರ. ಮುಂದಿನ ವರ್ಷದಿಂದ ಮತ್ತೆ ಜಾರಿಯಾಗಬಹುದು ಎಂಬುದನ್ನು ಮೇಯರ್‌ ತಿಳಿಸಿದನ್ನು ಗಮನಕ್ಕೆ ತಂದಾಗ, ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ತಕ್ಷಣವೇ ಮೇಯರ್‌ ಅವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ ಮುನವಳ್ಳಿ ಅವರು, ಸೆಸ್‌ ಹಾಗೂ ಶುಲ್ಕ ಕಡಿಮೆ ಮಾಡಿರುವುದು ತಾತ್ಕಲಿಕವೇ? ಈ ವರ್ಷ ಮಾತ್ರವೇ ಎಂದು ಪ್ರಶ್ನಿಸಿದರು. ಅದಕ್ಕೆ ಮೇಯರ್‌ ಕೂಡ ಹೌದು ಸರ್‌, ಅದನ್ನು ನಿರಂತರವಾಗಿ ಇಲ್ಲದಂತೆ ಮಾಡಲು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು. ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಸ್ಪಷ್ಟಪಡಿಸಿದರು.

ಬಳಿಕ ಮಾಧ್ಯಮದವರಿಗೆ, ಈ ವರ್ಷಕ್ಕೆ ಮಾತ್ರ ಎಂದು ಹೇಳುತ್ತಿದ್ದಾರೆ. ಮುಂದೆ ಏನು ಮಾಡಬೇಕು ಎಂಬುದನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ. ಅವರು ಠರಾವು ಪಾಸ್‌ ಮಾಡಿದ ಮೇಲೆ ನಾವು ಸಂಸ್ಥೆಯಿಂದ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಸರ್ಕಾರದೊಂದಿಗೆ ಹೋರಾಟ ಮುಂದುವರಿಸುತ್ತೇವೆ ಎಂದರು.

ಟ್ಯಾಕ್ಸ್‌ ತುಂಬಿ: ಸದ್ಯ ನಮ್ಮ ಕೆಲ ಬೇಡಿಕೆಗಳು ಈಡೇರಿವೆ. ಆದಕಾರಣ ಸಾರ್ವಜನಿಕರು ತೆರಿಗೆಯನ್ನು ಪಾವತಿಸಬೇಕು. ಮೇ 20ರವರೆಗೆ ಶೇ. 5ರಷ್ಟು ವಿನಾಯಿತಿ ಇದೆ. ಆದಕಾರಣ ಅಷ್ಟರೊಳಗೆ ಪಾವತಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ವೇಳೆ ಕೆಸಿಸಿಐ ಅಧ್ಯಕ್ಷ ಎಸ್‌.ಪಿ. ಸಂಶಿಮಠ, ಪದಾಧಿಕಾರಿಗಳಾದ ರಮೇಶ ಪಾಟೀಲ, ವಿನಯ ಜವಳಿ, ಮಹೇಂದ್ರ ಸಿಂಘಿ, ರವೀಂದ್ರ ಬಳಿಗಾರ ಸೇರಿದಂತೆ ಹಲವರಿದ್ದರು.