ಸಾರಾಂಶ
ಡಾ. ಸಿ.ಜಿ. ಪಾಟೀಲ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ತಳಿ ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದರು. ಅಲ್ಲದೇ, ಅವರ ಸಂಶೋಧನೆಗಳು ಸಹ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗುವ ಅರ್ಹತೆ ಹೊಂದಿದ್ದವು.
ಧಾರವಾಡ:
ಸಸ್ಯಶಾಸ್ತ್ರ ಹಾಗೂ ತಳಿ ವಿಜ್ಞಾನ ಕ್ಷೇತ್ರದಲ್ಲಿ ಪ್ರೊ. ಸಿ.ಜಿ. ಪಾಟೀಲ ಕೊಡುಗೆ ಅಪಾರ. ಅದರಲ್ಲಿಯೂ ತಳಿ ವಿಜ್ಞಾನವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಕರ್ನಾಟಕ ವಿವಿಯಲ್ಲಿ ಪ್ರತ್ಯೇಕ ವಿಭಾಗ ಆರಂಭಿಸಲು ಕಾರಣರಾದ ಅವರು ಯುವ ಪೀಳಿಗೆಗೆ ದಾರಿದೀಪ ಎಂದು ಹಾಸನ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಸಿ. ತಾರಾನಾಥ ಹೇಳಿದರು.ಕರ್ನಾಟಕ ವಿಜ್ಞಾನ ಕಾಲೇಜಿನ ಹಳೆಯ ವಿದ್ಯಾರ್ಥಿ ಬಳಗದಿಂದ ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಡಾ. ಸಿ.ಜಿ. ಪಾಟೀಲ ಗುರುಸ್ಮರಣೆಯಲ್ಲಿ ಮಾತನಾಡಿದ ಅವರು, ಆ ಸಮಯದಲ್ಲಿ ತಳಿ ವಿಜ್ಞಾನಕ್ಕೆ ಸಾಕಷ್ಟು ಪ್ರೋತ್ಸಾಹ ಇದ್ದರೂ ಪ್ರತ್ಯೇಕ ವಿಭಾಗ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ವಿಭಾಗ ತೆರೆದು ತಳಿ ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ಬರಲು ಕಾರಣರಾದರು ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ. ಸುಭಾಷ ಹಿರೇಮಠ ಮಾತನಾಡಿ, ಡಾ. ಸಿ.ಜಿ. ಪಾಟೀಲ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ತಳಿ ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದರು. ಅಲ್ಲದೇ, ಅವರ ಸಂಶೋಧನೆಗಳು ಸಹ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗುವ ಅರ್ಹತೆ ಹೊಂದಿದ್ದವು ಎಂದು ಹೇಳಿದರು.ಕರ್ನಾಟಕ ವಿವಿ ವಿಶ್ರಾಂತ ಕುಲಸಚಿವ ಡಾ. ಎಸ್.ಬಿ. ಹಿಂಚಿಗೇರಿ ಮಾತನಾಡಿ, ಡಾ. ಸಿ.ಜಿ. ಪಾಟೀಲ ಅವರು ತಳಿ ವಿಜ್ಞಾನ ಮತ್ತು ಜೀವರಸಾಯನ ಶಾಸ್ತ್ರಕ್ಕೆ ಇರುವ ಗಾಢವಾದ ಸಂಬಂಧದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು ಎಂದರು.
ಪ್ರಾಂಶುಪಾಲ ಪ್ರೊ. ಡಿ.ಬಿ. ಕರಡೋಣಿ, ಕವಿವಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್.ಎನ್. ಅಗಡಿ, ವಿಜ್ಞಾನ ಕಾಲೇಜು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ. ಕೊಟ್ರೇಶ, ತಳಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಡೋರಿಸ್ ಸಿಂಗ್, ಡಾ. ಸುರೇಶ ಅರಕೇರಾ, ಪ್ರೊ. ನಡಕಟ್ಟಿ, ಡಾ. ಜಿ.ಎಚ್. ಮಳಿಮಠ ಇದ್ದರು.ಡಾ. ಎಂ.ಎಸ್. ಸಾಲುಂಕಿ ಅಧ್ಯಕ್ಷತೆ ವಹಿಸಿದ್ದರು. ಡಾ. ಬಾಬುರಾವ್ ಎಂ. ಶೇಗುಣಸಿ ಪ್ರಾಸ್ತಾವಿಕ ಮಾತನಾಡಿದರು. ಪಕ್ಷಿ ತಜ್ಞ ಪ್ರಕಾಶ ಗೌಡರು ಕಾರ್ಯಕ್ರಮ ನಿರೂಪಿಸಿದರು. ರೇವಯ್ಯ ಹಿರೇಮಠ, ಡಾ. ಶಿವಾಜಿ ಜಾಧವ್ ವಂದಿಸಿದರು. ಕರ್ನಾಟಕ ಕಾಲೇಜು, ದೃಷ್ಟಿ ಪ್ಯಾರಾಮೆಡಿಕಲ್ ಕಾಲೇಜಿನ ಶಿಕ್ಷಕ ವೃಂದ ಇತ್ತು.