ಸಾರಾಂಶ
ಇದು ಎರಡು ವರ್ಷಗಳ ಹಿಂದೆ ಕೇರಳದ ಮಲಯಾಳಂ ಪತ್ರಿಕೆಯಲ್ಲಿ ಬಂದಿರುವ ಫೋಟೋವನ್ನು ಬಳಸಿಕೊಂಡು ಪುತ್ತೂರಿನ ಕೆಯ್ಯೂರಿನಲ್ಲಿ ಚಡ್ಡಿ ಗ್ಯಾಂಗ್ ಬಂದು ಮನೆಯವನ್ನು ಬೆದರಿಸಿದೆ ಎಂಬ ಸುಳ್ಳು ಸುದ್ದಿ ಎಂದು ಪೊಲೀಸರು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಮಂಗಳೂರಿನಲ್ಲಿ ಭಾರೀ ಸದ್ದು ಮಾಡಿದ್ದ ಚಡ್ಡಿ ಗ್ಯಾಂಗ್ ದರೋಡೆಕೋರರಂತೆಯೇ ಕೆಯ್ಯರಿನಲ್ಲೂ ಚಡ್ಡಿ ಗ್ಯಾಂಗ್ ದರೋಡೆಕೋರರು ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿದೆ ಎಂಬ ವರದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಬುಧವಾರ ಬೆಳಗ್ಗಿನಿಂದಲೇ ಹರಿದಾಡಿತ್ತು. ಅಲ್ಲದೆ ಇದಕ್ಕೊಂದು ಫೋಟೋವನ್ನು ಜೋಡಿಸಲಾಗಿದ್ದು, ಈ ಫೋಟೋದಲ್ಲಿ ಚಡ್ಡಿ ಗ್ಯಾಂಗ್‌ಗೆ ಸಂಬಂಧಿಸಿದಂತೆ ಕಾಣುವ ಇಬ್ಬರ ಫೋಟೋಗಳಿತ್ತು.ಆದರೆ ಇದು ಎರಡು ವರ್ಷಗಳ ಹಿಂದೆ ಕೇರಳದ ಮಲಯಾಳಂ ಪತ್ರಿಕೆಯಲ್ಲಿ ಬಂದಿರುವ ಫೋಟೋವನ್ನು ಬಳಸಿಕೊಂಡು ಪುತ್ತೂರಿನ ಕೆಯ್ಯೂರಿನಲ್ಲಿ ಚಡ್ಡಿ ಗ್ಯಾಂಗ್ ಬಂದು ಮನೆಯವನ್ನು ಬೆದರಿಸಿದೆ ಎಂಬ ಸುಳ್ಳು ಸುದ್ದಿ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಂದ ಕಾನೂನು ಕ್ರಮದ ಎಚ್ಚರಿಕೆ: ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಪೊಲೀಸ್ ಇಲಾಖೆಯು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಈ ಬಗ್ಗೆ ತನಿಖೆ ನಡೆಸಲಾಗಿ ಇದೊಂದು ಸಂಪೂರ್ಣ ಕಟ್ಟು ಕಥೆ ಆಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ಚಡ್ಡಿ ಗ್ಯಾಂಗ್‌ನ ದರೋಡೆಕೋರರು ಬಂದಿಲ್ಲ. ಈ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ಅಂತಹ ನೈಜ ಘಟನೆಗಳು ಸಂಭವಿಸಿದಲ್ಲಿ ತಕ್ಷಣ ೧೧೨ ಗೆ ಕರೆ ಮಾಡಿ ದೂರು ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿ. ಈ ರೀತಿಯ ಹಳೆಯ ವಿಡಿಯೋಗಳನ್ನು/ ಫೋಟೋಗಳನ್ನು ಪೂರ್ವಾಪರ ಪರಿಶೀಲಿಸದೆ ಸಾಮಾಜಿಕ ಜಾಲಾತಾಣಗಳಲ್ಲಿ ಪೋಸ್ಟ್ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ.