ಸಾರಾಂಶ
ಗಂಗಾವತಿ:
ಬಿಎಸ್‌ಸಿ ನರ್ಸಿಂಗ್ ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿಯ ತಾಳಿಯನ್ನು ಮಂಗಳವಾರ ಪತಿ ಎದುರೇ ಬಿಚ್ಚಿಸಿಕೊಂಡಿದ್ದ ನಗರದ ಬಿಬಿಸಿ ನರ್ಸಿಂಗ್ ಕಾಲೇಜಿನ್ ಚೇರ್‌ಮನ್ ಇದೀಗ ಆ ತಾಳಿ ಸೇರಿದಂತೆ ಎಲ್ಲ ಒಡವೆಗಳನ್ನು ಸಂತ್ರಸ್ತ ಮಹಿಳೆಗೆ ವಾಪಸ್ ನೀಡಿದ್ದಲ್ಲದೇ ತನ್ನ ತಪ್ಪಾಗಿದೆ ಎಂದು ಕ್ಷಮೆ ಯಾಚಿಸಿದ್ದಾರೆ.ಬುಧವಾರ ಕನ್ನಡಪ್ರಭ "ಕಾಲೇಜ್ ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿ ತಾಳಿ ಬಿಚ್ಚಿಸಿಕೊಂಡ ಚೇರ್‌ಮನ್ " ಎಂಬ ಶಿರ್ಷಿಕೆಯಿಂದ ವಿಶೇಷ ವರದಿ ಪ್ರಕಟಿಸಿತ್ತು. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಚೇರ್‌ಮನ್ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದನ್ನರಿತ ಕಾಲೇಜಿನ ಚೇರ್‌ಮನ್ ಡಾ. ಸಿ.ಬಿ. ಚಿನಿವಾಲ್, ಬುಧವಾರ ವಿದ್ಯಾರ್ಥಿನಿ ಕಾವೇರಿ ಹಾಗೂ ಅವಳ ತಾಯಿ ರೇಣಕಮ್ಮನನ್ನು ಕಾಲೇಜಿಗೆ ಕರೆಸಿ ತಾಳಿ ಸೇರಿದಂತೆ ಬಂಗಾರದ ಆಭರಣ ಮರಳಿ ನೀಡಿದ್ದಾರೆ. ಈ ವೇಳೆ ನನ್ನಿಂದ ತಪ್ಪಾಗಿದೆ. ನಿಮ್ಮ ಮೂಲ ದಾಖಲೆಗಳನ್ನು ನೀಡುತ್ತೇನೆ ಎಂದು ಹೇಳಿ ಪ್ರವೇಶಾತಿ ವೇಳೆ ಪಡೆದಿದ್ದು ಎಲ್ಲ ದಾಖಲೆಗಳನ್ನು ವಾಪಸ್ ನೀಡಿದ್ದಾರೆ.
ಆಗಿದ್ದೇನು?:ಬಿಬಿಸಿ ಕಾಲೇಜು ಆಫ್ ನರ್ಸಿಂಗ್ ಸಂಸ್ಥೆಯಲ್ಲಿ ಬಿಎಸ್‌ಸಿ ನರ್ಸಿಂಗ್ ಪ್ರಥಮ ಸೆಮಿಸ್ಟರ್‌ಗೆ ಕನಕಗಿರಿ ತಾಲೂಕಿನ ಮುಸ್ಲಾಪುರ ಗ್ರಾಮದ ವಿದ್ಯಾರ್ಥಿನಿ ಕಾವೇರಿ ಹನುಮಂತಪ್ಪ ವಾಲಿಕಾರ ₹10 ಸಾವಿರ ಪಾವತಿಸಿ ಪ್ರವೇಶ ಪಡೆದಿದ್ದರು. ಉಳಿದ ₹90 ಸಾವಿರ ಆನಂತರ ಭರಿಸಲಾಗುವುದು ಎಂದು ಹೇಳಿದ್ದರು. ಆ ಬಳಿಕ ಅವರಿಗೆ ಗದಗ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಸೀಟು ದೊರಕಿದೆ. ಹೀಗಾಗಿ ಅವರು ತನ್ನ ತಂದೆ-ತಾಯಿಯೊಂದಿಗೆ ಕಾಲೇಜಿಗೆ ಬಂದು ಪ್ರವೇಶ ಪಡೆಯುವ ವೇಳೆ ನೀಡಿದ್ದ ಮೂಲ ಪ್ರಮಾಣಪತ್ರ ನೀಡುವಂತೆ ಕೇಳಿದ್ದರು. ಆಗ ಕಾಲೇಜಿನ ಚೇರ್‌ಮನ್ ಡಾ. ಸಿ.ಬಿ. ಚಿನಿವಾಲ, ಬಾಕಿ ಶುಲ್ಕ ಪಾವತಿಸಿದರೆ ಮಾತ್ರ ಟಿಸಿ, ಅಂಕಪಟ್ಟಿ, ಪ್ರಮಾಣಪತ್ರ ನೀಡುತ್ತೇನೆ ಎಂದು ಹೇಳಿದ್ದರು. ಹಣವಿಲ್ಲವೆಂದಾಗ ವಿದ್ಯಾರ್ಥಿನಿಯ ತಾಯಿಯ ಮಾಂಗಲ್ಯದ ಸರ, ಕಿವಿಯೋಲೆ ಸೇರಿದಂತೆ ಬಂಗಾರದ ಆಭರಣ ಬಿಚ್ಚಿಸಿಕೊಂಡು ಕಳಿಸಿದ್ದರು.
ನಮ್ಮಂತ ಬಡವರು ಓದಬಾರದು. ನಾನು ಬದುಕಿರುವಾಗಲೆ ನನ್ನ ಹೆಂಡತಿ ತಾಳಿಯನ್ನು ಚೇರಮನ್ ಬಿಚ್ಚಿಸಿಕೊಂಡಿದ್ದರು. ಈ ಕುರಿತು ಕನ್ನಡಪ್ರಭ ವರದಿ ಪ್ರಕಟಿಸಿ ನೆರವಾಗಿದ್ದಕ್ಕೆ ಧನ್ಯವಾದ.ಹನುಮಂತಪ್ಪ ವಾಲಿಕಾರ, ವಿದ್ಯಾರ್ಥಿನಿ ತಂದೆ