ಸಾರಾಂಶ
- ಅಧ್ಯಕ್ಷೆ, 31 ಸದಸ್ಯರನ್ನೂ ನಿರ್ಲಕ್ಷ್ಯಸಿ ನಿರ್ಣಐ: ಸಭೆಯಲ್ಲಿ ಕವಿತಾ ಬೇಡರ್ ತರಾಟೆ- - -ಕನ್ನಡಪ್ರಭ ವಾರ್ತೆ ಹರಿಹರ ಅಧ್ಯಕ್ಷರಾಗಿ ತಿಂಗಳಾದರೂ ಪೌರಾಯುಕ್ತರು ಸೇರಿದಂತೆ ನಗರಸಭೆ ಅಧಿಕಾರಿಗಳು ತಮಗೆ ಕನಿಷ್ಠ ಗೌರವವನ್ನೇ ಕೊಡುತ್ತಿಲ್ಲ. ಯಾವುದೇ ನಿರ್ಣಯ ಕೈಗೊಳ್ಳುವಲ್ಲಿ ವಿಶ್ವಾಸಕ್ಕೆ ಪಡೆಯದೇ ನಿರ್ಲಕ್ಷಿಸುತ್ತಿದ್ದಾರೆ ಎಂದು ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಕಿಡಿಕಾರಿದರು.
ನಗರಸಭೆ ಸಭಾಭವನದಲ್ಲಿ ಗುರುವಾರ ಸಂಜೆ ನಡೆದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾವು ಒಬ್ಬ ಮಹಿಳೆ ಎಂಬ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ಮಹಿಳೆ ಎಂಬ ಕಾರಣಕೆ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.ಪೌರಾಯುಕ್ತರು ಮತ್ತು ಅಧಿಕಾರಿಗಳು ನಗರಸಭೆ 31 ಸದಸ್ಯರನ್ನೂ ಗಣನೆಗೆ ತೆಗೆದುಕೊಳ್ಳದೇ ಮನಬಂದಂತೆ ವರ್ತಿಸುತ್ತಿದ್ದಾರೆ. ಕಾನೂನಿನಲ್ಲಿ ಕೌನ್ಸಿಲ್‍ಗೆ ಇರುವ ಮಹತ್ವವನ್ನೇ ಮರೆತಿದ್ದಾರೆ. ಕೌನ್ಸಿಲ್ ಮತ್ತು ಅಧಿಕಾರಿ ವರ್ಗ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ನಗರ ಅಭಿವೃದ್ಧಿ ಸಾಧ್ಯ. ಜನಹಿತ ಕಾಯಲು ಸಾಧ್ಯ. ಅಧಿಕಾರಿಗಳು ಇದೆ ವರ್ತನೆ ಮುಂದುವರಿಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಸದಸ್ಯ ಎ. ವಾಮನಮೂರ್ತಿ ಮಾತನಾಡಿ, ದಿನಪೂರ್ತಿ ನೀರು ಪೂರೈಸುತ್ತೇವೆ ಎಂಬ ಜಲಸಿರಿ ಯೋಜನೆಯೇ ಬೋಗಸ್. ನೀರು ಶೇಖರಣಾ ಘಟಕವೇ ಇಲ್ಲದೇ ಬೇಸಿಗೆಯಲ್ಲಿ ಅದು ಹೇಗೆ ನೀರು ಸರಬರಾಜು ಮಾಡಲು ಸಾಧ್ಯ ಎಂದರು.ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ವಿಶ್ವಾಸಕ್ಕೆ ಪಡೆದು ರಾಜನಹಳ್ಳಿ ಬಳಿಯಿರುವ ದಾವಣಗೆರೆ ನೀರು ಸರಬರಾಜಿಗೆ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ಯಾರೇಜ್‌ನಿಂದಲೇ ನಮ್ಮ ನಗರಕ್ಕೂ ನೀರು ಒದಗಿಸುವಂತೆ ಸದಸ್ಯರೆಲ್ಲರೂ ಮನವಿ ಮಾಡಿಕೊಂಡಾಗ ಮಾತ್ರ ಸಮಸ್ಯೆ ನಿವಾರಣೆಯಾಗುತ್ತದೆ. ಜಲಸಿರಿ ಯೋಜನೆ ಪ್ರಗತಿ ಸಂದರ್ಭದಲ್ಲಿ ಹೊಸ ನೀರೆತ್ತುವ ಪಂಪುಗಳನ್ನು ಅಳವಡಿಸಬೇಕಿತ್ತು ಎಂದರು.
ಸದಸ್ಯ ಆರ್.ಸಿ. ಜಾವೀದ್ ಮಾತನಾಡಿ, ದಾವಣಗೆರೆ ನಗರ ಪಾಲಿಕೆಯಲ್ಲಿ ಆನ್ಲೈನ್ ಮೂಲಕ ಖಾತೆ ಉತಾರ ನೀಡುತ್ತಿದ್ದರೆ, ಅದು ಇಲ್ಲಿ ಏಕೆ ಸಾದ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಆಗ ಧ್ವನಿಗೂಡಿಸಿದ ಸದಸ್ಯ ಎಸ್.ಎಂ ವಸಂತ್, ಒಮ್ಮೆ ನವೀಕರಿಸಿದರೆ ನಂತರ ಜಮೀನಿನ ಪಹಣಿಯಂತೆ ಖಾತೆ ಉತಾರ ಪಡೆಯಬಹುದೆಂದು ಹೇಳಲಾಗಿತ್ತು, ಆದರೆ ಪ್ರತಿ ಸಲ ಉತಾರ ಪಡೆಯುವಾಗಲೂ ಮತ್ತೆ ಎಲ್ಲ ದಾಖಲೆ ಕೇಳುವುದೇಕೆ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.ಸದಸ್ಯ ಸೈಯದ್ ಅಲೀಂ ಮಾತನಾಡಿ, ನಗರದಲ್ಲಿನ ಸಣ್ಣಪುಟ್ಟ ಹೋಟೆಲ್, ಬೀಡಾ ಅಂಗಡಿ, ಕಟಿಂಗ್ ಶಾಪ್ ಲೈಸೆನ್ಸ್ ನವೀಕರಣಕ್ಕೆ ₹3 ಸಾವಿರದಿಂದ ₹5000 ತೆಗೆದುಕೊಳ್ಳುತ್ತಿದ್ದಾರೆ. ಇದು ಸಣ್ಣ ವ್ಯಾಪಾರಿಗಳಿಗೆ ಹೊರೆಯಾಗುತ್ತಿದೆ ಪ್ರತಿನಿತ್ಯ ಅವರು ಮಾಡುವ ವ್ಯಾಪಾರದಲ್ಲಿ 400-500 ಉಳಿಯುವುದೇ ಹೆಚ್ಚು. ವಾಡುಗಳಲ್ಲಿ ಸಣ್ಣಪುಟ್ಟ ವ್ಯಾಪಾರಿಗಳು ನಮಗೆ ಬೈಯುತ್ತಿದ್ದಾರೆ, ಲೈಸೆನ್ಸ್ ದರ ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.
ಮಧ್ಯ ಪ್ರವೇಶಿಸಿ ಮಾತನಾಡಿದ ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ಅವರು, ನಿಮ್ಮ ವಾರ್ಡಿನಲ್ಲಿ ಆಗಬೇಕಾದ ಕೆಲಸಗಳ ನಿವಾರಣೆ ಬಗ್ಗೆ ಸೂಕ್ತವಾಗಿ ಚರ್ಚಿಸಿ, ಸಮಸ್ಯೆಗಳ ನಿವಾರಣೆಗೆ ಸಲಹೆ ನೀಡಿ. ಅದು ಬಿಟ್ಟು ಕೂಗಾಡುವುದು ಕಿರುಚಾಡುವುದರಿಂದ ಸಭೆಯಲ್ಲಿ ಸಮಯ ವ್ಯರ್ಥವಾಗುತ್ತದೆ. ಸಭೆ ನಡೆಯಲು ಎಲ್ಲರೂ ಸಹಕಾರ ನೀಡಿ ಎಂದರು.ಉಪಾಧ್ಯಕ್ಷ ಎಂ ಜಂಬಣ್ಣ ಮಾತನಾಡಿ, ಅಧ್ಯಕ್ಷರು ಮತ್ತು ನಾನು ಪ್ರತಿದಿನ ವಾರ್ಡುಗಳಿಗೆ ತೆರಳಿ ಸ್ವಚ್ಛತೆ ಬಗ್ಗೆ ಗಮನಿಸುತ್ತೇವೆ. ಕೆಲಸ ಮಾಡುವವರಿಗೆ ಸಹಕಾರ ನೀಡಿ, ನಗರದಲ್ಲಿರುವ ತಗ್ಗು ಗುಂಡಿಗಳ ಮುಚ್ಚಿಸಲು ಕ್ರಮ ಕೈಗೊಳ್ಳಿ ಎಂದು ಪೌರಾಯುಕ್ತರಿಗೆ ಸೊಚನೆ ನೀಡಿದರು.
ಸದಸ್ಯರಾದ ಬಾಬುಲಾಲ್, ಸದ್ಯಸ್ಯೆ ನಾಗರತ್ನ, ಶಂಕರ್ ಖಟಾವಕರ್, ರಜನಿಕಾಂತ್ ಮುಜಾಮಿಲ್, ರತ್ನಮ್ಮ ಉಜ್ಜೇಶ್, ಸುಮಿತ್ರ ಕೆ ಮರಿದೇವ್, ಷಹಜಾದ್ ಸನಾವುಲ್ಲಾ, ಲಕ್ಷ್ಮಿ ದುರ್ಗೊಜಿ, ಬಿ ಅಲ್ತಾಫ್, ಕೆಜಿ ಸಿದ್ದೇಶ್, ಪಿಎನ್ ವಿರೂಪಾಕ್ಷಿ, ನಿಂಬಕ್ಕ ಚಂದಾಪುರ, ಫಕೀರಮ್ಮ, ನಾಮ ನಿರ್ದೇಶಿತ ಸದಸ್ಯರೂ ಸೇರಿದಂತೆ ಇತರರು ಇದ್ದರು. - - - -3ಎಚ್‍ಆರ್‍ಆರ್3ಎ:ಹರಿಹರದ ನಗರಸಭೆ ಸಭಾಭವನದಲ್ಲಿ ಗುರುವಾರ ಸಂಜೆ ಸಾಮಾನ್ಯ ಸಭೆ ನಡೆಯಿತು. ಕವಿತಾ ಬೇಡರ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರು ಭಾಗವಹಿಸಿದ್ದರು.