ಸಾರಾಂಶ
ಚಕ್ಕಡಿ ರಸ್ತೆಯ ₹ 100 ಕೋಟಿ ಕೆಲಸವನ್ನು ತಾವೇ ಅಡ್ವಾನ್ಸ್ ಕೊಟ್ಟಿರುವುದಾಗಿ ಶಾಸಕರು ಹೇಳುತ್ತಿದ್ದಾರೆ. ಈ ರೀತಿಯ ಯಾವುದೇ ಕಾಮಗಾರಿ ಪಡೆಯಲು ಒಪ್ಪಿಗೆ ಇಲ್ಲ. ಸರ್ಕಾರ ಯಾವ ಮಾನದಂಡದ ಮೇಲೆ ಇವರಿಗೆ ಒಪ್ಪಿಗೆ ನೀಡಿದೆಯೋ ಗೊತ್ತಿಲ್ಲ ಎಂದು ಶಂಕರಪಾಟೀಲ ಮುನೇನಕೊಪ್ಪ ಪ್ರಶ್ನಿಸಿದ್ದಾರೆ.
ಧಾರವಾಡ:
ಮುಡಾ ಹಗರಣದಂತೆಯೇ ನವಲಗುಂದ ತಾಲೂಕಿನಲ್ಲಿ ಚಕ್ಕಡಿ ರಸ್ತೆಯ ಹಗರಣ ನಡೆದಿದೆ ಎಂದು ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಬಾಂಬ್ ಸಿಡಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವಲಗುಂದ ತಾಲೂಕಿನಾದ್ಯಂತ ಆ ಭಾಗದ ಶಾಸಕರು ಚಕ್ಕಡಿ ರಸ್ತೆ ಮಾಡಿಸುತ್ತಿದ್ದಾರೆ. ಇದರಲ್ಲೂ ಹಗರಣ ನಡೆದಿದೆ. ಪಾರದರ್ಶಕತೆಯನ್ನು ಗಾಳಿಗೆ ತೂರಿ ಅವರು ಕೆಲಸ ಮಾಡಿಸುತ್ತಿದ್ದಾರೆ. ಡಾಂಬರ್ ರಸ್ತೆ ತೆಗೆದು ಚಕ್ಕಡಿ ರಸ್ತೆ ಮಾಡಿಸುತ್ತಿದ್ದಾರೆ. ಮೋರ್ರಂ, ಮೆಟ್ಲಿಂಗ್ ಆದಮೇಲೆ ರಸ್ತೆ ಮಾಡಬೇಕು. ಆದರೆ ಅದು ಉಲ್ಟಾ ಆಗಿದೆ ಎಂದರು.
₹ 100 ಕೋಟಿ ಕೆಲಸಕ್ಕೆ ತಾವೇ ಅಡ್ವಾನ್ಸ್ ಕೊಟ್ಟಿರುವುದಾಗಿ ಶಾಸಕರು ಹೇಳುತ್ತಿದ್ದಾರೆ. ಈ ರೀತಿಯ ಯಾವುದೇ ಕಾಮಗಾರಿ ಪಡೆಯಲು ಒಪ್ಪಿಗೆ ಇಲ್ಲ. ಸರ್ಕಾರ ಯಾವ ಮಾನದಂಡದ ಮೇಲೆ ಇವರಿಗೆ ಒಪ್ಪಿಗೆ ನೀಡಿದೆಯೋ ಗೊತ್ತಿಲ್ಲ. ಈ ಶಾಸಕರು ₹ 100 ಕೋಟಿ ಕೆಲಸದಲ್ಲಿ ₹ 30 ಕೋಟಿ ಕೆಲಸ ಮಾಡಿದ್ದೇನೆ ಎಂದು ಹೇಳುತ್ತಾರೆ. ಮುಂಗಡವಾಗಿಯೇ ಕೆಲಸ ಮಾಡಿದ್ದೇನೆ ಎಂದು ಇವರು ಹೇಳುತ್ತಾರೆ. ಈ ರೀತಿ ಹೇಳುವುದು ಕಾನೂನು ಬಾಹಿರ ಎಂದು ಹೇಳಿದರು.ಪಾರಂಪರಿಕವಾದ ಗುಡ್ಡವನ್ನು ಮುಟ್ಟಲು ಯಾರಿಗೂ ಆಗುವುದಿಲ್ಲ. ಆದರೆ, ಇವರು ಅಲ್ಲಿನ ಮಣ್ಣು ತೆಗೆದು ಹಾಕುವ ಕೆಲಸ ಮಾಡುತ್ತಿದ್ದಾರೆ. 2007-08ರಲ್ಲಿ ಅಲ್ಲಿ ಗಣಿಗಾರಿಕೆ ಮಾಡಿದ್ದಾರೆ. ಸರ್ಕಾರ ಇದಕ್ಕೆ ಒಂದು ಏಜೆನ್ಸಿ ಫಿಕ್ಸ್ ಮಾಡಿ ತನಿಖೆ ನಡೆಸಬೇಕು. ಡಿಸಿ ಅವರಿಗೆ ಈಗಾಗಲೇ ಮನವಿ ಮಾಡಿದ್ದೇನೆ. ಗುಡ್ಡವನ್ನು ಯಾರೂ ಅಗೆಯಲು ಅವಕಾಶ ಕೊಡಬಾರದು ಎಂದು ಮನವಿ ಮಾಡಿದರು.
ಚಕ್ಕಡಿ ರಸ್ತೆಗೆ ಯಾವುದೇ ಪರವಾನಗಿ ಇಲ್ಲದೇ ಮೊರ್ರಂ ತೆಗೆಯಲಾಗುತ್ತಿದೆ. ಇದಕ್ಕೆ ಅವಕಾಶ ಕೊಟ್ಟವರು ಯಾರು? ಇದನ್ನು ಕ್ರಿಮಿನಲ್ ಪ್ರಕರಣ ಎಂದು ಪರಿಗಣಿಸಬೇಕು. ₹ 100 ಕೋಟಿ ಕೆಲಸದ ಮೊದಲೇ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. 3000 ಟಿಪ್ಪರ್ ಲೋಡ್ ಮಣ್ಣನ್ನು ಅಕ್ರಮವಾಗಿ ತೆಗೆದುಕೊಂಡು ಹೋಗಲಾಗಿದೆ. ಈ ಬಗ್ಗೆ ಸರ್ಕಾರ ಮತ್ತು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಶಂಕರ ಪಾಟೀಲ್ ಮುನೀನಕೊಪ್ಪ ಆಗ್ರಹಿಸಿದರು.