ಜನಪದ ಸಾಹಿತ್ಯಕ್ಕೆ ಚಲವಾದಿ ಗೌರಮ್ಮನವರ ಕೊಡುಗೆ ಅನನ್ಯ: ಶಾಂತಲಿಂಗ ಸ್ವಾಮಿಗಳು

| Published : Jun 30 2024, 12:45 AM IST

ಜನಪದ ಸಾಹಿತ್ಯಕ್ಕೆ ಚಲವಾದಿ ಗೌರಮ್ಮನವರ ಕೊಡುಗೆ ಅನನ್ಯ: ಶಾಂತಲಿಂಗ ಸ್ವಾಮಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ನಗರದ ಜ. ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2699ನೇ ಶಿವಾನುಭವ ಕಾರ್ಯಕ್ರಮದಲ್ಲಿ ಜಾನಪದ ಕೋಗಿಲೆ ಶರಣೆ ಗೌರಮ್ಮ ಚಲವಾದಿ ಜೀವನ ಮತ್ತು ಸಾಧನೆ ಕುರಿತು ಶಿಕ್ಷಕ ಲಕ್ಷ್ಮಣ ಮೋಟೆ ಉಪನ್ಯಾಸ ನೀಡಿದರು.

ಗದಗ: ಗೌರಮ್ಮ ಚಲವಾದಿ ಅವರು ಜನಪದ ಕೋಗಿಲೆ ಎಂದು ಜನಮನದಲ್ಲಿ ಪ್ರಸಿದ್ಧರಾದವರು. ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಗೌರಮ್ಮ ಚಲವಾದಿ ಅವರ ಕೊಡುಗೆ ಅನನ್ಯ ಮತ್ತು ಅನುಪಮವಾದುದು ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮಿಗಳು ಹೇಳಿದರು.

ಅವರು ನಗರದ ಜ. ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2699ನೇ ಶಿವಾನುಭವ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿ, ಗೌರಮ್ಮನವರು ಬದುಕಿನುದ್ದಕ್ಕೂ ಜನಪದ ಸಂಗೀತವನ್ನು ಹಾಡುತ್ತ ಜನಮನವನ್ನು ರಂಜಿಸುತ್ತಾ ಬಂದಿದ್ದಾರೆ. ಅವಲ್ಲಿರುವ ಜನಪದ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿ, ಪ್ರೇರಣೆ ನೀಡಿ ನಾಡಿಗೆ ಪರಿಚಯಿಸಿಕೊಟ್ಟವರು ನಮ್ಮ ಗುರುಗಳಾದ ಲಿಂ. ತೋಂಟದ ಸಿದ್ಧಲಿಂಗ ಸ್ವಾಮಿಗಳು ಎಂದು ಸ್ಮರಿಸಿದರು.

ಜಾನಪದ ಕೋಗಿಲೆ ಶರಣೆ ಗೌರಮ್ಮ ಚಲವಾದಿ ಜೀವನ ಮತ್ತು ಸಾಧನೆ ಕುರಿತು ಶಿಕ್ಷಕ ಲಕ್ಷ್ಮಣ ಮೋಟೆ ಉಪನ್ಯಾಸ ನೀಡಿ, ಜನಪದ ಬಹುದೊಡ್ಡ ಸಾಗರ. ಈ ಸಾಗರದಲ್ಲಿ ಹಾಡು ಹಕ್ಕಿಯಾಗಿ ಜನಪದದ ಕೋಗಿಲೆಯಾಗಿ ಮೆರೆದವರು ಚಲವಾದಿ ಗೌರಮ್ಮನವರು. ನಿರಕ್ಷರಿಯಾಗಿದ್ದ ಗೌರಮ್ಮನವರು ಸ್ವತಃ ಪದಗಳನ್ನು ಕಟ್ಟಿ ಹಾಡುಗಳನ್ನು ಹಾಡಿ ಬಹು ಎತ್ತರಕ್ಕೆ ಬೆಳೆದಿದ್ದಾರೆ. ಜನಪದ ತತ್ವಪದಗಳನ್ನಷ್ಟೇ ಅಲ್ಲದೇ ಕಥೆಗಳನ್ನು ಕೂಡ ಹೇಳುತ್ತಿದ್ದರು ಎಂದರು.

ಈ ವೇಳೆ ಅಡವಿಸೋಮಾಪುರದ ವೀರಣ್ಣ ಚನ್ನಪ್ಪ ಅಂಗಡಿ ಜನಪದ ಸಂಗೀತವನ್ನು ಹಾಗೂ ಸಿಂಧನೂರಿನ ಶರಣಬಸಪ್ಪ ಹಳ್ಳಿ ವಚನ ಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಶ್ರೇಯಾ ನಾಗರಾಜ ಮುನವಳ್ಳಿ, ವಚನ ಚಿಂತನೆಯನ್ನು ತನುಷಾ ಚನ್ನಪ್ಪ ಮುನವಳ್ಳಿ ನೆರವೇರಿಸಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಿಕೊಂಡಿದ್ದ ಮಲ್ಲಿಕಾರ್ಜುನ ಚಲವಾದಿ ಹಾಗೂ ಚಂದ್ರಕಲಾ ಮುನವಳ್ಳಿ ಪರಿವಾರದವರನ್ನು ಶ್ರೀಗಳು ಸನ್ಮಾನಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರೂಪಾಕ್ಷಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್, ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪುರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.