ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಚಳ್ಳಕೆರೆಯ ಗಾಂಧಿವಗರದ ನಿವಾಸಿ ಪೃಥ್ವಿರಾಜ್ ವಿಲಕ್ಷಣ ಆಟ ಮುಂದುವರಿದಿದ್ದು ಗುರುವಾರ ತಹಸೀಲ್ದಾರ್ ಜೀಪಿಗೆ ಬೆಂಕಿ ಹಚ್ಚುವುದರ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದಾನೆ.ಕಳೆದ ಜು.28ರಂದು ತಮ್ಮ ತಾಯಿ ನಾಪತ್ತೆಯಾದ ಹಿನ್ನೆಲೆ ಚಳ್ಳಕೆರೆ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ನಿರಾಕರಿಸಿದ್ದರೆಂಬ ಸಂಗತಿ ಪ್ರಧಾನವಾಗಿಟ್ಟುಕೊಂಡು ಡಿಆರ್‌ಡಿಒ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಸ್ಫೋಟಿಸುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರ ಪಡಿಸಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಅವನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಬುದ್ಧಿವಾದ ಹೇಳಿದ್ದರು.
ಪೊಲೀಸರು ದೂರು ತೆಗೆದುಕೊಳ್ಳಲಿಲ್ಲವೆಂಬ ಅದೇ ಸಂಗತಿ ಮುಂದಿಟ್ಟುಕೊಂಡು ನಂತರ ಆತ ಕಳೆದ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ವಿಧಾನಸೌಧ ಮುಂದೆ ತನ್ನ ಮೋಟಾರ್ ಬೈಕ್ ನಿಲ್ಲಿಸಿ ಬೆಂಕಿ ಹಚ್ಚಿದ್ದ. ಯುವಕನ ಈ ನಡೆ ಗಂಭೀರವಾಗಿ ತೆಗೆದುಕೊಂಡಿದ್ದ ಸರ್ಕಾರ ಸೂಕ್ತ ಕ್ರಮಕ್ಕೆ ಎಸ್ಪಿಗೆ ಸೂಚಿಸಿತ್ತು. ಹಿಂದಿನ ಎಸ್ಪಿ ಇಬ್ಬರು ಪೊಲೀಸರು ಮೇಲೆ ಶಿಸ್ತು ಕ್ರಮ ಕೈಗೊಂಡಿದ್ದರು.ಪ್ರಕರಣ ಮುಕ್ತಾಯ ವಾಯಿತೆಂದು ಭಾವಿಸಿದ ಬೆನ್ನಲ್ಲೇ ಗುರುವಾರ ತನ್ನ ಬ್ಯಾಗ್‌ನಲ್ಲಿ ಪೆಟ್ರೋಲ್ ಇಟ್ಟುಕೊಂಡು ತಾಲೂಕು ಕಚೇರಿಗೆ ಧಾವಿಸಿದ್ದಾನೆ. ಅದೇ ತಾನೇ ತಹಸೀಲ್ದಾರರು ಜೀಪ್ ಇಳಿದು ಕಚೇರಿ ಒಳಗೆ ಹೋದ ತಕ್ಷಣ ಕಾರ್ಯಪ್ರವೃತ್ತನಾದ ಪೃಥ್ವಿ ತಹಸೀಲ್ಧಾರ್ ಜೀಪ್ ಮೇಲೇರಿ ಕೂಗಾಡುತ್ತಾ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕೂಡಲೇ ಸಾರ್ವಜನಿಕರು ಹಾಗೂ ಜೀಪ ಚಾಲಕ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ. ವಿಷಯ ಅರಿತ ಪೊಲೀಸರು ಪೃಥ್ವಿಯನ್ನು ತಮ್ಮವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಹಾಡುಹಗಲೇ ತಹಸೀಲ್ದಾರ್ ವಾಹನಕ್ಕೆ ಬೆಂಕಿ ಹಚ್ಚಿದ ಹಿನ್ನೆಲೆ ತಾಲೂಕು ಕಚೇರಿ ಸಿಬ್ಬಂದಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಸರ್ಕಾರಿ ವಾಹನಕ್ಕೆ ಬೆಂಕಿ ಹಚ್ಚಿದ ಪರಿಣಾಮವಾಗಿ ಸುಮಾರು ₹2 ಲಕ್ಷ ನಷ್ಟ ಸಂಭವಿಸಿದೆ ಎಂದು ನೌಕರ ಅಶೋಕ್ ಪೊಲೀಸರಿಗೆ ದೂರು ನೀಡಿದ್ದಾನೆ. ಪಿಎಸ್‌ಐ ಶಿವರಾಜ್ ಪ್ರಕರಣ ದಾಖಲಿಸಿದ್ದಾರೆ. ಪೃಥ್ವಿ ಏಕೆ ತಹಸೀಲ್ದಾರ್ ಜೀಪಿಗೆ ಬೆಂಕಿ ಹಚ್ಚಿದ ಎಂಬ ಬಗ್ಗೆ ಕಾರಣಗಳು ತಿಳಿದು ಬಂದಿಲ್ಲ. ಪೊಲೀಸ್ ವಿಚಾರಣೆ ನಡೆದಿದೆ.